ಮೈಸೂರು: ಅಮೃತ ವಿಶ್ವವಿದ್ಯಾಪೀಠಂನ ಮೈಸೂರು ಕ್ಯಾಂಪಸ್‌ನಲ್ಲಿ ಕಿರುಚಿತ್ರೋತ್ಸವದ ಭಾಗವಾಗಿ ಆಯೋಜಿಸಿದ್ದ ರಾಷ್ಟ್ರಮಟ್ಟದ ಕಿರುಚಿತ್ರ ಸ್ಪರ್ಧೆಯಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ನಟ ಡಾಲಿ ಧನಂಜಯ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಅಮೃತ ವಿಶ್ವವಿದ್ಯಾಪೀಠಂನ ದೃಶ್ಯ ಸಂವಹನ ವಿಭಾಗದ ವತಿಯಿಂದ ಆಯೋಜಿಸಿದ್ದ 'ಸಿನಿರಮಾ-2023' ರಾಷ್ಟ್ರೀಯ ಕಿರುಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ 'ಕ್ಯಾನ್‌ವಾಸ್' ಅತ್ಯುತ್ತಮ ಕಿರುಚಿತ್ರವಾಗಿ ಪ್ರಥಮ ಸ್ಥಾನಗಳಿಸಿತು.
ನಂತರ ಮಾತನಾಡಿದ ನಟ ಡಾಲಿ ಧನಂಜಯ, ಸಿನಿಮಾ ಕ್ಷೇತ್ರವೆಂಬುದು ವಿಪುಲ ಆಯ್ಕೆಗಳಿರುವ ಕ್ಷೇತ್ರ. ನಮ್ಮ ಪ್ರತಿಭೆಗೆ, ಪರಿಶ್ರಮಕ್ಕೆ ತಕ್ಕಂತೆ ಅವಕಾಶಗಳು ಸಿಗುತ್ತ ಹೋಗುತ್ತವೆ. ಚಿತ್ರರಂಗದಲ್ಲಿ ಆಸಕ್ತಿಯಿರುವ ಯಾರೇ ಆದರೂ ವಿವಿಧ ಅವಕಾಶಗಳು ಸಿಕ್ಕಂತೆ ಅವುಗಳನ್ನು ಸದುಪಯೋಗಪಡಿಸಬೇಕು ಎಂದರು. ಇಂದಿನ ವಿದ್ಯಾರ್ಥಿಗಳಿಗೆ ತಂತ್ರಜ್ಞಾನ ಒಂದು ದೊಡ್ಡ ವರದಾನವಾಗಿದೆ. ಎಲ್ಲ ಆಯ್ಕೆಗಳು, ಸೌಲಭ್ಯಗಳು, ಸಾಧ್ಯತೆಗಳು ಮೊಬೈಲ್ ಪೋನ್‌ಗಳಲ್ಲಿವೆ. ಇಡೀ ಸಿನಿಮಾವನ್ನು ಮೊಬೈಲ್ ಫೋನ್‌ನಲ್ಲಿಯೇ ಚಿತ್ರೀಕರಿಸಬಹುದಾಗಿದೆ. ಇವು ಅತ್ಯಂತ ವಿಸ್ತಾರವಾದ ಹರವನ್ನು ಪರಿಚಯಿಸಿದ್ದು ದೊಡ್ಡ ದೊಡ್ಡ ಸಿನಿಮಾಗಳ ನಿರ್ಮಾಣಕ್ಕೆ ಇದು ಭದ್ರ ಬುನಾದಿಯಾಗಬಲ್ಲದು ಎಂದು ಹೇಳಿದರು.
ಈ ಬಾರಿಯ ಸಿನಿರಮಾಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ದೇಶದಾದ್ಯಂತ ವಿವಿಧ ವಿಶ್ವವಿದ್ಯಾಲಯಗಳು, ಕಾಲೇಜುಗಳು ಹಾಗೂ ಫಿಲ್ಮ್ ಮೇಕಿಂಗ್ ಸ್ಕೂಲ್‌ಗಳು ಭಾಗವಹಿಸಿದ್ದವು. 50ಕ್ಕೂ ಹೆಚ್ಚು ಸಿನಿಮಾಗಳು ಈ ಕಿರುಚಿತ್ರೋತ್ಸವದಲ್ಲಿ ನೋಂದಣಿಗೊಂಡಿದ್ದು, ಟಾಪ್ ಏಳು ಕಿರುಚಿತ್ರಗಳನ್ನು ಪ್ರದರ್ಶನ ಮಾಡಲಾಯಿತು. ಮೈಸೂರಿನ ಪ್ರಸಿದ್ದ ಮಲ್ಟಿಪ್ಲೆಕ್ಸ್ ಡಿಆರ್‌ಸಿ ಸಿನೆಮಾಸ್ ಮಾಲೀಕರಾದ ವೈಶಾಲಿ ಹನುಮಂತ್ ಹಾಗೂ ಹನುಮಂತ್ ಅವರು ಗೌರವ ಅತಿಥಿಗಳಾಗಿ ಭಾಗವಹಿಸಿದ್ದರು.
ಕಿರುಚಿತ್ರೋತ್ಸವದ ತೀರ್ಪುಗಾರರಾಗಿ ಭಾಗವಹಿಸಿದ್ದ ನಟ ಹಾಗೂ ಲೆನ್ಸ್ ಬೇಸ್ಡ್ ಛಾಯಾಚಿತ್ರಗ್ರಾಹಕ ಕೆ.ಜೆ. ಪವನ್ ಅವರನ್ನು ಹಾಗೂ ಪ್ರಾಯೋಜಕರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಮುಂಬೈನ ಫಿಲ್ಮ್ ಕಂಪ್ಯಾನಿಯನ್‌ನ ಸಿನಿಮಾ ಪತ್ರಕರ್ತ ಹಾಗೂ ವಿಮರ್ಶಕ ಸುಚಿನ್ ಮೆಹ್ರೋತ್ರಾ ಅವರು ಫಿಲ್ಮ ಕ್ರಿಟಿಸಿಸಂ ಕುರಿತಾಗಿ ಗೋಷ್ಠಿಯನ್ನು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಅಮೃತ ಮೈಸೂರು ಕ್ಯಾಂಪಸ್‌ನ ಪ್ರಾಂಶುಪಾಲ ಡಾ.ಜಿ. ರವೀಂದ್ರನಾಥ್, ಮೈಸೂರು ಕ್ಯಾಂಪಸ್‌ನ ನಿರ್ದೇಶಕರಾದ ಬ್ರಹ್ಮಚಾರಿ ಅನಂತಾ ನಂದ ಚೈತನ್ಯ, ದೃಶ್ಯ ಸಂವಹನ ವಿಭಾಗದ ಮುಖ್ಯಸ್ಥರಾದ ಡಾ. ಮೌಲ್ಯ ಬಾಲಾಡಿ ಮತ್ತಿತರರು ಇದ್ದರು.
ಪ್ರಶಸ್ತಿ ವಿಜೇತರು:
ಪ್ರಥಮ ಅತ್ಯುತ್ತಮ ಕಿರುಚಿತ್ರ - ಸಂಜಯ್ ಚಂದ್ರಶೇಖರನ್ - ಕ್ಯಾನ್‌ವಾಸ್ (ತಮಿಳು) - 10 ಸಾವಿರ ನಗದು, ಟ್ರೋಫಿ ಹಾಗೂ ಪ್ರಮಾಣಪತ್ರ.
ದ್ವಿತೀಯ ಅತ್ಯುತ್ತಮ ಕಿರುಚಿತ್ರ - ಪ್ರಣವ್ ಕೃಷ್ಣನ್- ಅಕ್ರೋಸ್ (ಮಲಯಾಳಂ) - 7 ಸಾವಿರ ನಗದು, ಟ್ರೋಫಿ ಹಾಗೂ ಪ್ರಮಾಣಪತ್ರ.
ತೃತೀಯ ಕಿರುಚಿತ್ರ - ಸಂಪತ್ ಕುಮಾರ್ ರೈ - ಇಲಿ ಬೋನು (ಕನ್ನಡ) - 5 ಸಾವಿರ ನಗದು, ಟ್ರೋಫಿ ಹಾಗೂ ಪ್ರಮಾಣಪತ್ರ
ವಿಶೇಷ ವಿಭಾಗ ಪ್ರಶಸ್ತಿಗಳು
ತಲಾ 4,000 ನಗದು, ಟ್ರೋಫಿ ಹಾಗೂ ಪ್ರಮಾಣಪತ್ರ.
ಅತ್ಯುತ್ತಮ ಸಂಕಲನಕಾರ - ಶ್ರೀರಾಮ್ ರಾಮಸ್ವಾಮಿ - ಕ್ಯಾನ್‌ವಾಸ್ (ತಮಿಳು)
ಅತ್ಯುತ್ತಮ ನಿರ್ದೇಶಕ - ಸಂಜಯ್ ಚಂದ್ರಶೇಖರನ್ - ಕ್ಯಾನ್‌ವಾಸ್ (ತಮಿಳು)
ಅತ್ಯುತ್ತಮ ಛಾಯಾಗ್ರಾಹಕ - ಕಾರ್ತಿಕ್ ಸಿಪ್ಪಿ- ಕ್ಯಾನ್‌ವಾಸ್ (ತಮಿಳು)
ಅತ್ಯುತ್ತಮ ಉತ್ತಮ ನಟ - ಆದರ್ಶ್ ಕೃಷ್ಣದಾಸ್ - ಅಕ್ರೋಸ್ (ಮಲಯಾಳಂ)
ಉತ್ತಮ ನಟಿ - ಸ್ನೇಹ ರೆಜಿ - ಚೆರಿಲ್ (ಮಲಯಾಳಂ)
ಪ್ರಥಮ ಅತ್ಯುತ್ತಮ ಮೊಬೈಲ್ ಚಿತ್ರ - ಟು ಕೊಕನಟ್ - ರಿಥಿಕ್ ನಾಯರ್
ದ್ವಿತೀಯ ಅತ್ಯುತ್ತಮ ಮೊಬೈಲ್ ಚಿತ್ರ - ಹೀಲ್ ವಿಥಿನ್ - ಆದಿತ್ಯ ಯಲಿಗಾರ್
ಇದನ್ನೂ ಓದಿ: ಯುಗಾದಿ ಹಬ್ಬದ ಪ್ರಯುಕ್ತ ‘ಬೆಂಗಳೂರು ಉತ್ಸವ’; ಸ್ಯಾಂಡಲ್ವುಡ್ ತಾರೆಯರಿಂದ ಚಾಲನೆ