ಬೆಂಗಳೂರು: ಆನಂದ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ, ಮೂರು ಸಿನಿಮಾಗಳಿಗೆ ಹ್ಯಾಟ್ರಿಕ್ ಹೀರೋ ಅಂತಾ ಕರೆಯಿಸಿಕೊಂಡು, ಸದ್ಯ 125ನೇ ಸಿನಿಮಾ ಮಾಡ್ತಾ ಇರೋ ಏಕೈಕ ನಟ ಶಿವರಾಜ್ ಕುಮಾರ್. ಈ 125ನೇ ಸಿನಿಮಾವನ್ನು ಪತ್ನಿ ಗೀತಾ ಪಿಕ್ಚರ್ ಬ್ಯಾನರ್ ಅಡಿ ನಿರ್ಮಾಣ ಮಾಡುತ್ತಿದ್ದು, ಈ ಸಿನಿಮಾದ ಫಸ್ಟ್ ಲುಕ್ ಇವೆಂಟ್ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಿತು.
ಈ ಚಿತ್ರದ ಟೈಟಲ್ ಪೋಸ್ಟರ್ ಜೊತೆಗೆ ಗೀತಾ ಪಿಕ್ಚರ್ ಅನ್ನು ಅನಾವರಣ ಮಾಡೋದಕ್ಕೆ, ಭಾರತೀಯ ಚಿತ್ರರಂಗ ಕಂಡ ಎವರ್ ಗ್ರೀನ್ ಹೀರೋ ಅನಂತ್ ನಾಗ್, ನಮ್ಮ ಇಂಡಿಯಾ ಕ್ರಿಕೆಟ್ನ ಮಾಜಿ ಆಟಗಾರ ಅನಿಲ್ ಕುಂಬ್ಳೆ ಆಗಮಿಸಿದ್ದರು. ಚಿತ್ರಕ್ಕೆ ವೇದಾ ಎಂದು ಟೈಟಲ್ ಇಡಲಾಗಿದ್ದು, ಭಜರಂಗಿ, ವಜ್ರಕಾಯ, ಭಜರಂಗಿ 2 ಸಿನಿಮಾಗಳನ್ನು ನಿರ್ದೇಶಿಸಿ ಸೈ ಎನ್ನಿಸಿಕೊಂಡಿರುವ ನಿರ್ದೇಶಕ ಎ ಹರ್ಷ ವೇದ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಿನ್ನೆ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಹುಟ್ಟುಹಬ್ಬ ಹಿನ್ನಲೆ, ಗೀತಾ ಪಿಕ್ಚರ್ ಬ್ಯಾನರ್ ಅನಾವರಣ ಮಾಡಲಾಯಿತು.
ಈ ಸುಂದರ ಕಾರ್ಯಕ್ರಮಕ್ಕೆ ದುನಿಯಾ ವಿಜಯ್, ಅಶ್ವಿನಿ ಪುನೀತ್ ರಾಜ್‍ಕುಮಾರ್, ನಿರ್ಮಾಪಕರಾದ ಜಯಣ್ಣ ಭೋಗೇಂದ್ರ, ಸಂದೇಶ್ ನಾಗರಾಜ್, ಕೆ.ಪಿ ಶ್ರೀಕಾಂತ್, ರಾಕ್ಲೈನ್ ವೆಂಕಟೇಶ್, ಕೆ.ಸುರೇಶ್, ಸಂಗೀತ ನಿರ್ದೇಶಕರಾದ ಗುರುಕಿರಣ್, ಅರ್ಜುನ್ ಜನ್ಯ, ರಾಜ್ ಕುಟುಂಬದವರು ಹಾಗು ವೇದಾ ಸಿನಿಮಾ ತಂಡದವರು ಹಾಗೂ ಸಾಕಷ್ಟು ಅಭಿಮಾನಿಗಳು ಸಾಕ್ಷಿಯಾದರು.
ತಮ್ಮ ನಡವಳಿಕೆಯಿಂದಲೇ ಎಲ್ಲ ಕಲಿಸ್ತಿದ್ರು ಅಣ್ಣಾವ್ರು: ಗೀತಾ ಪಿಕ್ಚರ್ ಬ್ಯಾನರ್ ಅನಾವರಣ ಮಾಡಿ ಮಾತನಾಡಿದ ಹಿರಿಯ ನಟ ಅನಂತ್ ನಾಗ್, ರಾಜ್‍ಕುಮಾರ್ ಜೊತೆಗಿನ ಸಾಕಷ್ಟು ನೆನಪುಗಳನ್ನು ಬಿಚ್ಚಿಟ್ಟರು. ನಾನು ಚಿತ್ರರಂಗಕ್ಕೆ ಬಂದ ಕೆಲವೇ ವರ್ಷಗಳಲ್ಲಿ ರಾಜ್‍ಕುಮಾರ್ ಕುಟುಂಬ ಪರಿಚಯ ಆಯ್ತು. ರಾಜ್‍ಕುಮಾರ್ ಯಾರಿಗೂ ಏನೂ ಹೆಚ್ಚಾಗಿ ಹೇಳುತ್ತಿರಲಿಲ್ಲ.
ತಮ್ಮ ಅಭಿನಯದಿಂದ ನಡವಳಿಕೆಯಿಂದ ಎಲ್ಲವನ್ನೂ ಕಲಿಸುತ್ತಿದ್ದರು. ಈಗ ಶಿವರಾಜ್ ಕುಮಾರ್ಗೆ ಹೇಳೋದು ಇಷ್ಟೇ. ರಾಜ್‍ಕುಮಾರ್ ಜೊತೆ ಸೃಜನಶೀಲ ತಂಡ ಇರುತ್ತಿತ್ತು. ಅವರು ಸಮಾಜಕ್ಕೆ ಧೈರ್ಯ, ಸ್ಥೈರ್ಯ ಇರೋ ಕಥೆಯ ಸಿನಿಮಾ ಮಾಡುತ್ತಿದ್ರು. ರಾಜ್‍ಕುಮಾರ್ ಮಗನಾಗಿ ಇಂದು ನೀವು ಅಂತಹ ಸಿನಿಮಾಗಳನ್ನು ಮಾಡಬೇಕು. ಇದಕ್ಕೆ ನಿಮ್ಮ ತಂದೆ ತಾಯಿಗಳ ಇಬ್ಬರ ಆಶೀರ್ವಾದ ಇರಲಿದೆ. ಗೀತಾ ಪಿಕ್ಚರ್ ಯಶಸ್ವಿ ಆಗಲಿ ಎಂದು ಹಾರೈಯಿಸಿದರು.
ಅಭಿಮಾನಿಗಳೇ ಶಕ್ತಿ: ಗೀತಾ ಪಿಕ್ಚರ್ ಬಗ್ಗೆ ಮಾತನಾಡಿದ ಗೀತಾ ಶಿವರಾಜ್ ಕುಮಾರ್, ಶಿವರಾಜ್ ಕುಮಾರ್ ಶಕ್ತಿ ಗೀತಕ್ಕ ಎಂದು ಎಲ್ಲರು ಹೇಳುತ್ತಾರೆ. ಆದರೆ ಅವರ ಹಿಂದೆ ಇರುವ ಶಕ್ತಿ ಅಭಿಮಾನಿಗಳು, ಅಪ್ಪಾಜಿ, ಅಮ್ಮ, ಅಪ್ಪು, ರಾಘಣ್ಣ, ಅವರ ತಂಗಿಯರು ಅಂತಾ ಹೇಳುವ ಮೂಲಕ ಗಮನ ಸೆಳೆದರು. ಈಗ ವೇದ ಸಿನಿಮಾ ಬರುತ್ತಿದೆ. ಅದು ನಿಮ್ಮ ಸಿನಿಮಾ ಅದನ್ನು ಕೈ ಹಿಡಿದು ನಡೆಸಬೇಕು ಎಂದರು.
ನಂತರ ಮಾತನಾಡಿದ ಶಿವರಾಜ್ ಕುಮಾರ್, ಜಗಳ ಆಡಬೇಕು ಅಂದ್ರೆ ನಾನು ಅವಳ ಜೊತೆಗೆ ಮಾಡಬೇಕು ಬೇರೆ ಯಾರು ಇಲ್ಲ. ನನ್ನ ಸಕ್ಸಸ್ ಇಷ್ಟು ಮಟ್ಟಕ್ಕೆ ಬರಬೇಕು ಅಂದರೆ ಅದಕ್ಕೆ ಅಭಿಮಾನಿಗಳು ನನ್ನ ಕುಟುಂಬ ಕಾರಣ. ನಾನು ಇವತ್ತು 125 ಸಿನಿಮಾಗಳನ್ನು ಮಾಡಿದ್ದೀನಿ ಅಂದ್ರೆ ಅದಕ್ಕೆ ಕಾರಣ, ನಿರ್ಮಾಪಕರು, ನಿರ್ದೇಶಕರು ಹಾಗೂ ಇಡೀ ಕನ್ನಡ ಸಿನಿಮಾ ಇಂಡಸ್ಟ್ರಿ. ಮುಖ್ಯವಾಗಿ ನಿರ್ಮಾಪಕರಿಗೆ ನಾನು ದೊಡ್ಡ ಸಲಾಮ್ ಹೊಡೆಯುತ್ತೇನೆ. ನಿರ್ದೇಶಕರು, ನಿರ್ಮಾಪಕರು ಯಾವಾಗ್ಲೂ ನನ್ನ ಜೊತೆ ಇದ್ದಾರೆ, ಅದಕ್ಕೆ ನಾನು ಋಣಿ ಎಂದರು.
ಇನ್ನು ವೇದ ಸಿನಿಮಾ 1960ರ ದಶಕದಲ್ಲಿ ನಡೆಯುವ ಕಥೆ, ಶಿವರಾಜ್ ಕುಮಾರ್ ಜೊತೆಗೆ ಗಾನವಿ ಲಕ್ಷ್ಮಣ್, ಶ್ವೇತಾ ಚೆಂಗಪ್ಪ, ಅರುಣ್ ಸಾಗರ್ ಮಗಳು ಅದಿತಿ ಸಾಗರ್ ಸೇರಿದಂತೆ ಸಾಕಷ್ಟು ತಾರಾಗಣ ಈ ಚಿತ್ರದಲ್ಲಿದೆ. ಸದ್ಯ ವೇದ ಪೋಸ್ಟರ್ನಲ್ಲಿ ಡೋಂಟ್ ಫಿಯರ್, ಡೋಂಟ್ ಫರ್ಗಿವ್ ಎಂಬ ಟ್ಯಾಗ್ ಲೈನ್ ಇದೆ. ಜೊತೆಗೆ ರಿವೀಲ್ ಆಗಿರುವ ಪೋಸ್ಟರ್ ಶಿವರಾಜ್ ಕುಮಾರ್ ಅಭಿಮಾನಿಗಳಲ್ಲಿ ಈ ಸಿನಿಮಾ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಸೃಷ್ಟಿಸಿದೆ.
ಇದನ್ನೂ ಓದಿ : ರಕ್ಷಿತ್ ಶೆಟ್ಟಿ, ಧನಂಜಯ್, ರಿಷಬ್ ಶೆಟ್ಟಿಗೆ ಸ್ಫೂರ್ತಿಯಾದ ವಿಕ್ರಾಂತ್ ರೋಣ