ಸಾಮಾಜಿಕ ಸಂದೇಶ ಸಾರುವ ಸಿನಿಮಾ ನಿರ್ಮಿಸುವಲ್ಲಿ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಅವರದ್ದು ವಿಶಿಷ್ಟ ಶೈಲಿ. ಈ ಹಿನ್ನೆಲೆಯಲ್ಲೇ ಮೂಡಿಬಂದ ಸಿನಿಮಾ 'ಡಂಕಿ'. ಬಾಲಿವುಡ್ ನಟ ಶಾರುಖ್ ಖಾನ್ ಮತ್ತು ತಾಪ್ಸಿ ಪನ್ನು ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರ ಡಿಸೆಂಬರ್ 21ರಂದು ಕ್ರಿಸ್ಮಸ್ ಉಡುಗೊರೆಯಾಗಿ ತೆರೆ ಕಂಡಿತ್ತು. ಇದೀಗ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಗಳಿಕೆ ಮಾಡುತ್ತಿದೆ. 'ಸಲಾರ್' ಸಿನಿಮಾದ ಜೊತೆಗೆ ಪೈಪೋಟಿ ನೀಡುತ್ತಾ ಚಿತ್ರಮಂದಿರಗಳಲ್ಲಿ ಸದ್ದು ಮಾಡುತ್ತಿದೆ.
ಇದೀಗ ಸಿನಿಮಾಗೆ ಅಪರೂಪದ ಗೌರವ ಸಿಕ್ಕಿದೆ. ಇಲ್ಲಿಯವರೆಗೂ ಥಿಯೇಟರ್ಗಳಲ್ಲಿ ರಂಜಿಸುತ್ತಿರುವ ಚಿತ್ರವನ್ನು ಚಿತ್ರತಂಡ ವಿಶೇಷ ವೇದಿಕೆಯಲ್ಲಿ ಪ್ರದರ್ಶಿಸಿದೆ. ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು 'ಡಂಕಿ' ವಿಶೇಷ ಪ್ರದರ್ಶನ ಕಂಡಿತು ಎಂದು ಚಿತ್ರತಂಡ ತಿಳಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ಸದ್ಯ ಈ ಸುದ್ದಿ ಟ್ರೆಂಡಿಂಗ್ನಲ್ಲಿದೆ.
ಸಿನಿಮಾ ತೆರೆ ಕಂಡ ಮೊದಲ ದಿನ ಭಾರತೀಯ ಬಾಕ್ಸ್ ಆಫೀಸ್ನಲ್ಲಿ 29.2 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಎರಡನೇ ದಿನ 20.12 ಕೋಟಿ ರೂ. ಹಾಗೂ ಮೂರನೇ ದಿನ 26 ಕೋಟಿ ರೂ. ಗಳಿಸಿದೆ. ಮೂರು ದಿನಗಳಲ್ಲಿ ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ 75.32 ರೂ. ಬಾಚಿಕೊಂಡಿದೆ. ಈ ವರ್ಷ ಬಿಡುಗಡೆಯಾದ ಶಾರುಖ್ ಖಾನ್ ಅವರ ಪಠಾಣ್ ಮತ್ತು ಜವಾನ್ ಸಿನಿಮಾಗಳು ಸೂಪರ್ ಹಿಟ್ ಆಗಿದ್ದು, 1,000 ಕೋಟಿ ರೂ. ಕ್ಲಬ್ ಸೇರುವಲ್ಲಿ ಯಶಸ್ಸು ಕಂಡಿವೆ. ಈ ಚಿತ್ರಗಳಿಗೆ ಹೋಲಿಸಿದರೆ ಡಂಕಿ ಕೊಂಚ ಹಿಂದೆ ಬಿದ್ದಿದೆ.
ಚಿತ್ರದಲ್ಲಿ ವಿಕ್ಕಿ ಕೌಶಲ್ ಮತ್ತು ಬೊಮನ್ ಇರಾನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 3 ಈಡಿಯಟ್ಸ್ ಮತ್ತು ಪಿ.ಕೆ ಸಿನಿಮಾ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಮತ್ತು ಕಿಂಗ್ ಖಾನ್ ಕಾಂಬಿನೇಶನ್ನ ಚೊಚ್ಚಲ ಚಿತ್ರವಿದು.
ಇನ್ನೊಂದೆಡೆ, ಡಂಕಿ ಸಿನಿಮಾಗೆ ಭರ್ಜರಿ ಪೈಪೋಟಿ ಕೊಡುತ್ತಿರುವ ಡಿಸೆಂಬರ್ 22ರಂದು ತೆರೆ ಕಂಡ 'ಸಲಾರ್' ಚಿತ್ರ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿದೆ. ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಪ್ರಕಾರ, ಸಲಾರ್ ಎರಡನೇ ದಿನ 57.61 ಕೋಟಿ ರೂ. ಕಲೆಕ್ಷನ್ ಮಾಡಿದೆ. ಹೊಂಬಾಳೆ ಫಿಲ್ಮ್ಸ್ ಮಾಹಿತಿಯಂತೆ, ಸಲಾರ್ ಮೊದಲ ದಿನ ದೇಶದಲ್ಲಿ 93.45 ಕೋಟಿ ರೂ. ಸೇರಿ ಜಾಗತಿಕವಾಗಿ ಒಟ್ಟು 178.7 ಕೋಟಿ ರೂ. ವ್ಯವಹಾರ ನಡೆಸಿದೆ.
ಇದನ್ನೂ ಓದಿ: 'ಪಿಕೆ'ಯಂತೆ 'ಡಂಕಿ' ಯಶಸ್ವಿಯಾಗುವ ನಂಬಿಕೆ ಹೊಂದಿದ್ದ ಶಾರುಖ್, ಅಭಿಮಾನಿಗಳು; ಆದರೆ!