ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಕೊನೆಯ ಚಿತ್ರ ಗಂಧದ ಗುಡಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಕರುನಾಡಿನ ಶ್ರೀಮಂತಿಕೆಯನ್ನು ಗಂಧದ ಗುಡಿಯಲ್ಲಿ ಅತ್ಯದ್ಭುತವಾಗಿ ಕಟ್ಟಿಕೊಡಲಾಗಿದೆ. ವೈಲ್ಡ್ ಲೈಫ್ ಫೋಟೋಗ್ರಾಫರ್ ಅಮೋಘ ವರ್ಷ ನಿರ್ದೇಶನದ ಗಂಧದ ಗುಡಿ ಚಿತ್ರವನ್ನು ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರ ತನಕ ನೋಡಿ ಮೆಚ್ಚಿಕೊಳ್ಳುತ್ತಿದ್ದಾರೆ. ಕನ್ನಡ ಚಿತ್ರರಂಗದ ಬಹುತೇಕ ತಾರೆಯರು ಈ ಚಿತ್ರವನ್ನು ನೋಡಿ ಫಿದಾ ಆಗಿದ್ದಾರೆ.
ಸುಮಾರು ಒಂದೂವರೆ ಗಂಟೆಯ ಈ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಒಬ್ಬ ಸ್ಟಾರ್ ಆಗಿ ಕಾಣಿಸಿಕೊಂಡಿಲ್ಲ. ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ನಮ್ಮ ನಾಡಿನ ಪ್ರಾಣಿ ಸಂಕುಲ, ಜಲಚರ, ಬೆಟ್ಟ ಗುಡ್ಡ, ನದಿ, ಸಮುದ್ರಗಳ ಸೌಂದರ್ಯದ ಬಗ್ಗೆ ವರ್ಣಿಸಿದ್ದಾರೆ. ಹೀಗಾಗಿ ಪುನೀತ್ ರಾಜ್‌ಕುಮಾರ್ ಬದುಕಿದ್ದಾಗ ಈ ಚಿತ್ರವನ್ನು ಪ್ರತಿಯೊಬ್ಬ ಮಕ್ಕಳು ನೋಡಬೇಕು ಅಂದುಕೊಂಡಿದ್ದರು. ಅದರಂತೆ ಗಂಧದ ಗುಡಿ ಚಿತ್ರವನ್ನು ರಾಜ್ಯಾದ್ಯಂತ ಮಕ್ಕಳು ನೋಡುತ್ತಿದ್ದಾರೆ.
ಇತ್ತೀಚೆಗೆ 270ಕ್ಕೂ ಹೆಚ್ಚು ಸರ್ಕಾರಿ ಶಾಲೆ ಮಕ್ಕಳು ಬೆಂಗಳೂರಿನ ಮಾಲ್ ಒಂದರಲ್ಲಿ ಈ ಗಂಧದ ಗುಡಿ ಚಿತ್ರವನ್ನು ವೀಕ್ಷಿಸಿದ್ದಾರೆ. ಯುವ ಬೆಂಗಳೂರು ಟ್ರಸ್ಟ್‌ನ ಸದಸ್ಯೆಯಾಗಿರುವ ನಟಿ ಹಾಗೂ ನಿರೂಪಕಿ ಅನುಶ್ರೀ ಈ ಶೋ ಅನ್ನು ಮಕ್ಕಳಿಗಾಗಿ ಹಮ್ಮಿಕೊಂಡಿದ್ದರು. ಮಕ್ಕಳೊಂದಿಗೆ ಅನುಶ್ರೀ, ಶ್ರೀದೇವಿ, ಯಶಸ್ವಿನಿ, ಮಾಸ್ಟರ್ ಆನಂದ್ ಮತ್ತು ಬೇಬಿ ವಂಶಿಕಾ ಆನಂದ್ ಈ ಚಿತ್ರವನ್ನು ವೀಕ್ಷಿಸಿ ಭಾವುಕರಾದರು.
ಈ ಸಿನಿಮಾ ಮುಗಿಯುವ ಸಮಯಕ್ಕೆ ಬಂದ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರಿಗೆ ಶಾಲಾ ಮಕ್ಕಳು ರೋಸ್ ನೀಡಿ, ಅವರನ್ನು ಅಪ್ಪಿಕೊಂಡು ಭಾವುಕರಾದರು. ಮಕ್ಕಳ ಅಪ್ಪುಗೆಗೆ ಮನಸೋತ ಅಶ್ವಿನಿ ಪುನೀತ್ ರಾಜ್‌ಕುಮಾರ್ ಕೂಡ ಭಾವುಕರಾದರು. ಈ ಸಂದರ್ಭದಲ್ಲಿ ಯುವ ರಾಜ್‌ಕುಮಾರ್ ಉಪಸ್ಥಿತರಿದ್ದರು.