ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಮತ್ತು ನಟಿ ಕಿಯಾರಾ ಅಡ್ವಾಣಿ ನಟನೆಯ ರೊಮ್ಯಾಂಟಿಕ್ ಲವ್ ಸ್ಟೋರಿ 'ಸತ್ಯಪ್ರೇಮ್ ಕಿ ಕಥಾ' ಗುರುವಾರ ಈದ್ ಸಂದರ್ಭ ಅದ್ಧೂರಿಯಾಗಿ ತೆರೆಕಂಡಿದೆ. ಮೊದಲ ದಿನ ಅದ್ಭುತ ಕಲೆಕ್ಷನ್ ಮಾಡಿದ ಸಿನಿಮಾ, ಶುಕ್ರವಾರ ಕೊಂಚ ಇಳಿಕೆ ಕಂಡಿತು. ಮೂರನೇ ದಿನ ಸುಮಾರು 10.15 ಕೋಟಿ ರೂ. ಕಲೆಕ್ಷನ್ ಮಾಡಿದೆ. ವಾರಾಂತ್ಯ ಹಿನ್ನೆಲೆಯಲ್ಲಿ ಸಿನಿಮಾ ಸದ್ದು ಮಾಡಿದೆ.
ಸಮೀರ್ ವಿದ್ವಾನ್ಸ್ ಆ್ಯಕ್ಷನ್ ಕಟ್ ಹೇಳಿರುವ 'ಸತ್ಯಪ್ರೇಮ್ ಕಿ ಕಥಾ' ಸಿನಿಮಾ ಮೊದಲ ದಿನ ಸುಮಾರು 9 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಈದ್ ರಜೆ ಮತ್ತು ಸಿನಿಮಾ ಬಿಡುಗಡೆಯ ಮೊದಲ ದಿನವಾದ ಕಾರಣಕ್ಕೆ ಚಿತ್ರ ಉತ್ತಮ ಆರಂಭ ಪಡೆದಿದೆ. ಎರಡನೇ ದಿನ ಅಂದರೆ ಶುಕ್ರವಾರ ಸಿನಿಮಾ ಸುಮಾರು 7 ಕೋಟಿ ರೂ. ಕಲೆಕ್ಷನ್ ಮಾಡಿತು. ಆದಿಪುರುಷ್ ಮತ್ತು ಜರಾ ಹಟ್ಕೆ ಜರಾ ಬಚ್ಕೆ ಸಿನಿಮಾಗಳು ಇನ್ನೂ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿವೆ. ಈ ಹೊತ್ತಿನಲ್ಲಿ 'ಸತ್ಯಪ್ರೇಮ್ ಕಿ ಕಥಾ' ಉತ್ತಮ ಪ್ರದರ್ಶನ ಮುಂದುವರಿಸಿದೆ. ಪ್ರೇಕ್ಷಕರನ್ನು ಸಿನಿಮಾ ಹಾಲ್ಗಳಿಗೆ ಸೆಳೆಯುವಲ್ಲಿ ಗೆಲುವು ಕಂಡಿದೆ.
2022ರಲ್ಲಿ ಭೂಲ್ ಭುಲೈಯಾ 2 ಎಂಬ ಹಾರರ್ ವಿತ್ ಲವ್ಸ್ಟೋರಿ ಸಿನಿಮಾ ತೆರೆಕಂಡಿತ್ತು. ಈ ಸಿನಿಮಾದಲ್ಲಿ ಮೊದಲ ಬಾರಿ ಕಾರ್ತಿಕ್ ಆರ್ಯನ್ ಮತ್ತು ಕಿಯಾರಾ ಅಡ್ವಾಣಿ ಸ್ಕ್ರೀನ್ ಶೇರ್ ಮಾಡಿದ್ದರು. ಪ್ರತಿಭಾನ್ವಿತ ಕಲಾವಿದರು ಒಟ್ಟಿಗೆ ಕೆಲಸ ಮಾಡಿರುವ ಮತ್ತೊಂದು ಸಿನಿಮಾ 'ಸತ್ಯಪ್ರೇಮ್ ಕಿ ಕಥಾ'. ಮೊದಲ ದಿನದ ಕಲೆಕ್ಷನ್ಗೆ ಹೋಲಿಸಿದರೆ ಚಿತ್ರ ಭೂಲ್ ಭುಲೈಯಾ 2ಗಿಂತ ಕೊಂಚ ಹಿನ್ನಡೆ ಕಂಡಿದೆ. 2022ರ ಮೇ 20ರಂದು ತೆರೆಕಂಡ ಭೂಲ್ ಭುಲೈಯಾ 2 ಬಾಕ್ಸ್ ಆಫೀಸ್ನಲ್ಲಿ ಮೊದಲ ದಿನವೇ 14 ಕೋಟಿ ರೂ. ಸಂಗ್ರಹಿಸುವಲ್ಲಿ ಯಶ ಕಂಡಿತ್ತು.
ಇದನ್ನೂ ಓದಿ: ಸ್ಯಾಂಡಲ್ವುಡ್ 'ಗಣಿ' ಜನ್ಮದಿನ: ಕೃಷ್ಣಂ ಪ್ರಣಯ ಸಖಿ ಪೋಸ್ಟರ್ ಅನಾವರಣ- ಹೊಸ ಅವತಾರದಲ್ಲಿ 'ಮುಂಗಾರು ಮಳೆ' ಗಣೇಶ್
ಸತ್ಯಪ್ರೇಮ್ ಕಿ ಕಥಾ ಚಿತ್ರ ಜೂನ್ 29 ಗುರುವಾರ ರಿಲೀಸ್ ಆಗಿದೆ. ಭಾರತದಲ್ಲಿ 2,300 ಮತ್ತು ವಿದೇಶಗಳಲ್ಲಿ 300 ಸ್ಕ್ರೀನ್‌ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಸಮೀರ್ ವಿದ್ವಾನ್ಸ್ ಆ್ಯಕ್ಷನ್ ಕಟ್ ಹೇಳಿರುವ ಸಿನಿಮಾವನ್ನು ಸಾಜಿದ್ ನಾಡಿಯಾಡ್ವಾಲಾ, ಕಿಶೋರ್ ಅರೋರಾ, ಶರೀನ್ ಮಂತ್ರಿ ಕೇಡಿಯಾ ನಿರ್ಮಿಸಿದ್ದಾರೆ. ಕಾರ್ತಿಕ್, ಕಿಯಾರಾ ಅಲ್ಲದೇ ಗಜ್ರಾಜ್ ರಾವ್, ಸುಪ್ರಿಯಾ ಪಾಠಕ್ ಕಪೂರ್, ಸಿದ್ಧಾರ್ಥ್ ರಾಂಧೇರಿಯಾ, ರಾಜ್ಪಾಲ್ ಯಾದವ್, ಶಿಖಾ ತಲ್ಸಾನಿಯಾ, ಅನೂರಾಧಾ ಪಟೇಲ್ ಕೂಡ ಸಿನಿಮಾದಲ್ಲಿ ನಟಿಸಿದ್ದಾರೆ. 60 ಕೋಟಿ ಬಜೆಟ್ನಲ್ಲಿ ಚಿತ್ರ ನಿರ್ಮಾಣಗೊಂಡಿದ್ದು, ಕಾರ್ತಿಕ್ ಕಿಯಾರಾ ಜೋಡಿಯ ಪ್ರೇಮಕಥೆಗೆ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ: ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ: ಆಲಿಯಾ, ರಣ್ವೀರ್ ಲುಕ್ ಇಷ್ಟವಾಯ್ತಾ?