2022ರಲ್ಲಿ ಕನ್ನಡ ಚಿತ್ರರಂಗ ಕೆಜಿಎಫ್ 2, ಕಾಂತಾರ ಎಂಬ ಅತ್ಯದ್ಭುತ ಸಿನಿಮಾ ಮೂಲಕ ಇಡೀ ಭಾರತೀಯ ಸಿನಿಮಾ ರಂಗವೇ ತನ್ನತ್ತ ತಿರುಗಿ ನೋಡುವಂತೆ ಮಾಡಿತ್ತು. ಆದ್ರೆ 2023ನೇ ಸಾಲಿನಲ್ಲಿ ಕನ್ನಡ ಚಿತ್ರರಂಗ ಇನ್ನೂ ಶುಭಾರಂಭ ಮಾಡಿಲ್ಲ. ಈ ನಾಲ್ಕೂವರೆ ತಿಂಗಳಲ್ಲಿ ಸ್ಯಾಂಡಲ್ವುಡ್ ಸಾಧನೆ ಹೇಳುವಷ್ಟೇನು ಇಲ್ಲ. 2023ರ ಮೊದಲಾರ್ಧದಲ್ಲಿ ಹೆಚ್ಚೇನೂ ಗಳಿಸಿಲ್ಲ. ಹೀಗಾಗಿ, ಮುಂದಿನ ಆರು ತಿಂಗಳ ಮೇಲೆ ಎಲ್ಲರ ಕಣ್ಣಿದೆ. ಪವಾಡ ನಡೆಯಬಹುದೆಂಬ ಆಶಯ ಅಭಿಮಾನಿಗಳದ್ದು, ಆದರೆ, ಸಿನಿ ಗಣ್ಯರು ಇನ್ನೂ ತಮ್ಮ ಮುಂದಿನ ಸಿನಿಮಾವನ್ನು ಘೋಷಿಸಿಲ್ಲ.
ಸಾಮಾನ್ಯವಾಗಿ ವರ್ಷದಲ್ಲಿ ಸ್ಟಾರ್ ಪಟ್ಟವನ್ನೇರಿದ ಕಲಾವಿದರ ಎರಡು ಅಥವಾ ಮೂರು ಚಿತ್ರಗಳು ಬಿಡುಗಡೆ ಆಗೋದು ವಾಡಿಕೆ. ಆಗ ಸಿನಿಮಾ ರಂಗ ಬ್ಯಾಲೆನ್ಸ್ ಮಾಡಿಕೊಂಡು ಮುಂದೆ ಸಾಗುತ್ತೆ. ಆದರೆ ಬಹುಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ಸ್ಟಾರ್ ಸೆಲೆಬ್ರಿಟಿಗಳ ಸಿನಿಮಾ ಸಂಖ್ಯೆ ಕಡಿಮೆಯೇ ಇದೆ.
ಹೌದು, ಯಶ್ KGF ಜಗತ್ತಿಗೆ ಎಂಟ್ರಿ ಕೊಟ್ಟು ಐದು ವರ್ಷಗಳಾಗಿವೆ. ಐದು ವರ್ಷದಲ್ಲಿ ಕೆ.ಜಿ.ಎಫ್ 1 ಹಾಗೂ 2ನ್ನು ಹೊರತು ಪಡಿಸಿದರೆ ಯಶ್ ಅಭಿನಯದ ಬೇರೆ ಯಾವ ಚಿತ್ರಗಳೂ ಕೂಡ ತೆರೆಗೆ ಬಂದಿಲ್ಲ. ಅವರ 19ನೇ ಸಿನಿಮಾ ಆರಂಭವಾಗಿದೆಯಾ ಎಂದರೆ ಅದು ಕೂಡ ಇಲ್ಲ. ಅಂತೆ ಕಂತೆಗಳ ನಡುವೆ ಒಂದು ವರ್ಷ ಕಳೆದು ಹೋಗಿದೆ. ಕಾದು ಕಾದು ಸುಸ್ತಾದ ಅಭಿಮಾನಿಗಳ ಅಭಿಮಾನಕ್ಕೂ ಉತ್ತರ ಸಿಕ್ಕಿಲ್ಲ.
ಯಶ್ ಮಾತ್ರವಲ್ಲ ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಸುದೀಪ್ ನಡೆ ಕೂಡ ಇನ್ನೂ ನಿಗೂಢವಾಗಿದೆ. ವಿಕ್ರಾಂತ್ ರೋಣ ಬರುವ ಮುನ್ನ ವರ್ಷಕ್ಕೆ ಎರಡಾದರೂ ಸಿನಿಮಾ ಮಾಡ್ತಿದ್ದ ಸುದೀಪ್ ಕೂಡ ಒಂದು ವರ್ಷದಿಂದ ಮೌನಕ್ಕೆ ಶರಣಾಗಿದ್ದಾರೆ. ಜೂನ್ 01ಕ್ಕೆ ತಮ್ಮ ಹೊಸ ಚಿತ್ರದ ಕುರಿತು ಸುದೀಪ್ ಅಧಿಕೃತ ಘೋಷಣೆ ಮಾಡಲಿದ್ದಾರೆ. ಆದರೆ, ಆ ಸಿನಿಮಾ ತೆರೆಗೆ ಬರುವುದು ಬಹುತೇಕ ಮುಂದಿನ ವರ್ಷವೇ.
ಕಾಂತಾರ ಮೂಲಕ ದಾಖಲೆ ಸೃಷ್ಟಿಸಿದ ರಿಷಬ್ ಶೆಟ್ಟಿ ಸದ್ಯಕ್ಕೆ ಕಾಂತಾರದ ಪ್ರಿಕ್ವೆಲ್ನಲ್ಲಿ ತಲ್ಲೀನರಾಗಿದ್ದಾರೆ. ಜೂನ್ ಸಮಯಕ್ಕೆ ರಿಷಬ್ ಕಾಂತಾರ ಪ್ರಿಕ್ವೆಲ್ ಚಿತ್ರೀಕರಣ ಆರಂಭ ಮಾಡಿದರೂ ಬೆಳ್ಳಿ ತೆರೆಯಲ್ಲಿ ಆ ಚಿತ್ರ ನೋಡೋ ಭಾಗ್ಯ ಸೀಗೋದು ಮುಂದಿನ ವರ್ಷವೇ.
ಹಾಗಾಗಿ ಸದ್ಯ ಕರುನಾಡ ಚಕ್ರವರ್ತಿ ಶಿವ ರಾಜ್ಕುಮಾರ್, ದುನಿಯಾ ವಿಜಯ್, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ, ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಕಡೆ ಗಮನ ಕೇಂದ್ರೀಕೃತವಾಗಿದೆ. ಈ ಸಾಲಿನಲ್ಲಿ ಸಿನಿಮಾ ಅಖಾಡಕ್ಕೆ ಇಳಿಯೋದು ಇವರಷ್ಟೇ. ಇವರನ್ನು ಹೊರತು ಪಡಿಸಿದರೆ ಅಖಾಡದಲ್ಲಿ ನಿಮಗೆ ಕಾಣಸಿಗೋದು ಡಾಲಿ ಧನಂಜಯ್ ಮಾತ್ರ.
ವರ್ಷಕ್ಕೆ ಕಡಿಮೆ ಅಂದರೂ ಮೂರು ಸಿನಿಮಾ ನೀಡುವ ಶಿವಣ್ಣ ಸದ್ಯಕ್ಕೆ ’ಘೋಸ್ಟ್‘ ಚಿತ್ರದ ಬಿಡುಗಡೆಗೆ ಎದುರು ನೋಡ್ತಿದ್ದಾರೆ. ಘೋಸ್ಟ್ ಮುಕ್ತಾಯವಾದ ಬಳಿಕ ವರ್ಷದ ಅಂತ್ಯಕ್ಕೆ ಬೈರತಿ ರಣಗಲ್ ತೆರೆಗೆ ಬರಲಿದೆ.
ಇನ್ನು ಉಪೇಂದ್ರ ನಿರ್ದೇಶಕನ ಕುರ್ಚಿಯನ್ನು ಮತ್ತೆ ಅಲಂಕರಿಸಿದ್ದಾರೆ. ಯು ಐ ಸಿನಿಮಾದ ಚಿತ್ರೀಕರಣದಲ್ಲಿರೋ ಉಪೇಂದ್ರ ನಿರ್ದೇಶನದ ಜೊತೆಗೆ ಅಭಿನಯ ಕೂಡ ಮಾಡುತ್ತಿದ್ದಾರೆ. ಪೋಸ್ಟರ್ ಹಾಗು ಟೈಟಲ್ನಿಂದಲೇ ಬೇಜಾನ್ ಸೌಂಡ್ ಮಾಡುತ್ತಿರುವ ಯು ಐ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆ ಇರುವ ಕಾರಣ ಈ ಚಿತ್ರ ಇದೇ ವರ್ಷ ತೆರೆಗೆ ಬರಲಿದೆ.
ರಕ್ಷಿತ್ ಶೆಟ್ಟಿ ಅಭಿನಯದ 'ಸಪ್ತಸಾಗರದಾಚೆ ಎಲ್ಲೋ' ಕೂಡ ನಿಮ್ಮ ಮನ ತಣಿಸಲು ಇದೇ ವರ್ಷ ಬಿಡುಗಡೆಯಾಗಲಿದೆ. ರಕ್ಷಿತ್ ಶೆಟ್ಟಿ ಅಭಿಮಾನಿಗಳಿಗೆ ಇದು ಖುಷಿಯ ವಿಚಾರ.
ಇನ್ನೂ ಸಲಗ ನಂತರ ಹೊಸದೊಂದು ಅಧ್ಯಾಯ ಆರಂಭ ಮಾಡಿರುವ ದುನಿಯಾ ವಿಜಯ್ ಸದ್ಯಕ್ಕೆ ಭೀಮನ ಗುಂಗಲ್ಲಿದ್ದಾರೆ. ನಿರಂತರವಾಗಿ ಚಿತ್ರೀಕರಣ ಮಾಡ್ತಿದ್ದಾರೆ. ಎಲ್ಲವೂ ಅಂದುಕೊoಡತೆ ಆದರೆ ಭೀಮ ದಸರಾ ಹಬ್ಬಕ್ಕೆ ತೆರೆಗೆ ಬರಲಿದೆ.
ಇದನ್ನೂ ಓದಿ: ಮಾಜಿ ಪತ್ನಿ ಸಮಂತಾ ಬಗ್ಗೆ ನಾಗಚೈತನ್ಯ ಗುಣಗಾನ: ಏನಂದ್ರು?
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಬಾನದಾರಿಯಲ್ಲಿ ಸಿನಿಮಾ ಕೂಡ ಬಿಡುಗಡೆಗೆ ಸಿದ್ಧವಾಗಿದೆ. ಐಪಿಎಲ್, ಚುನಾವಣೆಯ ಭರಾಟೆಯ ಕಾರಣಕ್ಕೆ ಬಿಡುಗಡೆ ದಿನಾಂಕವನ್ನು ಮುಂದೂಡುತ್ತಾ ಬಂದಿರುವ ಚಿತ್ರತಂಡ ಹೊಸ ರಿಲೀಸ್ ದಿನಾಂಕವನ್ನು ಯಾವ ಕ್ಷಣದಲ್ಲಾದರೂ ಘೋಷಿಸಬಹುದು. ಇನ್ನೂ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಇದೇ ವರ್ಷ ಮಾರ್ಟಿನ್ ರೂಪದಲ್ಲಿ ಥಿಯೇಟರ್ಗೆ ಬರಲಿದ್ದಾರೆ. ಮನರಂಜನೆಯ ಬಾಡೂಟ ಬಡಿಸಲಿದ್ದಾರೆ.
ಇದನ್ನೂ ಓದಿ: "ದಿ ಕೇರಳ ಸ್ಟೋರಿ" ಸಂಬಂಧ ನಿಮ್ಮ ಸಮಸ್ಯೆಯೇನು? ಬ್ಯಾನ್ ಮಾಡಿದ 2 ರಾಜ್ಯಕ್ಕೆ ಸುಪ್ರೀಂ ಪ್ರಶ್ನೆ
ಹೀಗಾಗಿ ಈ ವರ್ಷದ ಸಿನಿಮಾ ತೇರು ಸುದೀಪ್, ಯಶ್ ಹಾಗೂ ರಿಷಬ್ ಕೈಯಲ್ಲಿ ಇರದೇ ಇವರೆಲ್ಲರ ಕೈಯಲ್ಲಿ ಇದೆ. ಒಟ್ಟಿನಲ್ಲಿ ಒಂದಾದ ಮೇಲೊಂದರಂತೆ ಸಿನಿಮಾ ಮಾಡಬೇಕಿದ್ದ ತಾರೆಯರ ಪೈಕಿ ಕೆಲವರು ವಿಶ್ರಾಂತಿಯಲ್ಲಿದ್ದಾರೆ. ಇನ್ನೂ ಕೆಲವರು ಹೊಸ ಘೋಷಣೆ ಮಾಡಲು ಸರ್ವ ಸನ್ನದ್ಧರಾಗಿದ್ದಾರೆ. ಮಿಕ್ಕವರು ಕಲಾ ಸೇವೆ ಮುಂದುವರಿಸಿದ್ದಾರೆ. ಚಿತ್ರರಂಗದ ಹಿತದೃಷ್ಟಿ ಹಾಗೂ ಅಭಿಮಾನಿಗಳ ಒತ್ತಾಸೆ ಇವೆರಡನ್ನೂ ಗಮನದಲ್ಲಿಟ್ಟುಕೊಂಡು ನಮ್ಮ ತಾರೆಯರು ವರ್ಷಕ್ಕೆ ಎರಡ್ಮೂರು ಸಿನಿಮಾಗಳನ್ನು ಮಾಡಲಿ ಅನ್ನೋದು ಅನೇಕರ ಆಶಯ. ಹೀಗಾದರೆ ಚಿತ್ರರಂಗದಲ್ಲಿ ಹಣದ ಹರಿವು ಇರುತ್ತೆ. ಕಾರ್ಮಿಕರಿಗೆ ನಿರಂತರ ಕೆಲಸವೂ ಸಿಗುತ್ತದೆ. ಅಭಿಮಾನಿಗಳಿಗೆ ಮನರಂಜನೆಯ ಬಾಡೂಟ ವರ್ಷ ಪೂರ್ತಿ ಸಿಗುತ್ತದೆ. ಇಲ್ಲವಾದರೆ ಕನ್ನಡ ಚಿತ್ರರಂಗ ಖಾಲಿ ಡಬ್ಬದಂತೆಯೇ ಭಾಸವಾಗುತ್ತೆ.