ಕನ್ನಡ ಚಿತ್ರರಂಗ ಅಲ್ಲದೇ ಭಾರತೀಯ ಸಿನಿಮಾ ಇಂಡಸ್ಟ್ರಿಯಲ್ಲಿ ತನ್ನದೇ ಛಾಪು ಮೂಡಿಸಿರೋ ನಟ ಅನಂತ್ ನಾಗ್. ಸಿನಿಮಾ ರಂಗಕ್ಕೆ ಅನಂತ್ ನಾಗ್ ಅವರ ಕೊಡುಗೆ ಅಪಾರ ಅವರ ನಟನೆಗೆ ಸಾಕಷ್ಟು ಪ್ರಶಸ್ತಿಗಳು ಕೂಡ ಲಭ್ಯವಾಗಿದೆ. ಈಗ ಅವರ ಸಾಧನೆಗೆ ಮತ್ತೊಂದು ಗೌರವ ಸಿಕ್ಕಿದೆ.
ಹೌದು, ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯವು ಹಿರಿಯ ನಟ ಅನಂತ್ ನಾಗ್ ಅವರಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ. ಈ ಕಾರ್ಯಕ್ರಮ ರೇಸ್ ಕೋರ್ಸ್ ರಸ್ತೆಯ ಭಾರತೀಯ ವಿದ್ಯಾಭವನದಲ್ಲಿ ನಡೆಯಿತು. ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ್ ಹಾಗೂ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕುಲಪತಿ ಮತ್ತು ಕರ್ನಾಟಕ ಫಿಲ್ಮ್ ಚೇಂಬರ್ ಅಧ್ಯಕ್ಷ ಭಾ.ಮಾ ಹರೀಶ್ ಸಮ್ಮುಖದಲ್ಲಿ ಹಿರಿಯ ನಟ ಅನಂತ್ ನಾಗ್ ಅವರಿಗೆ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಯಿತು. ಪತ್ನಿ ಗಾಯಿತ್ರಿ , ಮಗಳು ಅದಿತಿ, ಅಳಿಯ ವಿವೇಕ್ ಸಮ್ಮುಖದಲ್ಲಿ ಅನಂತ್ ನಾಗ್ ಈ ಗೌರವವನ್ನು ಸ್ವೀಕರಿಸಿದರು.
ಇದನ್ನೂ ಓದಿ: ಹೊಂಬಾಳೆ ಫಿಲ್ಸ್ಮ್ ಜೊತೆ ವಿಕ್ರಾಂತ್ ರೋಣನ ಹೊಸ ಸಿನಿಮಾ: ಕುತೂಹಲ ಹೆಚ್ಚಿಸಿದ ಒಂದು ಫೋಟೋ
ಕನ್ನಡ, ಹಿಂದಿ, ಮರಾಠಿ ಸೇರಿ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅನಂತ ನಾಗ್ ಅಭಿನಯ ಮಾಡಿದ್ದಾರೆ. ಅಷ್ಟೇ ಅಲ್ಲ ಮಾಲ್ಗುಡಿ ಡೇಸ್ ಅಂತಂಹ ಪ್ರಖ್ಯಾತ ಧಾರವಾಹಿಗಳಲ್ಲಿ ನಟಿಸಿದ್ದಾರೆ. ಕಳೆದ ಐದು ದಶಕಗಳ ಕಾಲ ಕರ್ನಾಟಕದ ಸಾಂಸ್ಕೃತಿಕ ರಂಗಕ್ಕೆ ಅನಂತನಾಗ್ ಅವರು ನೀಡಿದ ಕೊಡುಗೆಯನ್ನು ಗುರುತಿಸಿ, ಅವರಿಗೆ ಕಲಾ ವಿಭಾಗದಲ್ಲಿ ಗೌರವ ಡಾಕ್ಟರೇಟ್ ನೀಡಲಾಗಿದ್ದು, ಅವರ ಅಭಿಮಾನಿ ಬಳಗ ಹಾಗೂ ಕನ್ನಡ ಚಿತ್ರರಂಗದಲ್ಲಿ ಸಂತಸ ಮೂಡಿದೆ. ಇತ್ತೀಚೆಗೆ ಗಣೇಶ್ ಅಭಿನಯದ ಗಾಳಿಪಟ 2 ಸಿನಿಮಾದಲ್ಲಿ ಅನಂತ್ ನಾಗ್ ಅಭಿನಯ ನೋಡುಗರ ಗಮನ ಸೆಳೆದಿದಿತ್ತು.