ಡೋನೊ ಸಿನಿಮಾ ಅಕ್ಟೋಬರ್ 5ರಂದು ತೆರೆಕಂಡಿದೆ. ಮುಂಬೈನಲ್ಲಿ ಗುರುವಾರದಂದು ಡೋನೊ ಚಿತ್ರದ ಗ್ರ್ಯಾಂಡ್ ಪ್ರೀಮಿಯರ್ ಈವೆಂಟ್ ನಡೆದಿದ್ದು, ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಭಾಗವಹಿಸಿದ್ದರು.
ಚಿತ್ರರಂಗಕ್ಕೆ ಹೊಸಬರ ಆಗಮನ: ಸೂರಜ್ ಬರ್ಜತ್ಯಾ ಅವರ ಪುತ್ರ ಅವ್ನೀಶ್ ಬರ್ಜಾತ್ಯಾ ನಿರ್ದೇಶನದಲ್ಲಿ ಡೋನೊ ಚಿತ್ರ ಮೂಡಿ ಬಂದಿದೆ. ನಟಿ ಸನ್ನಿ ಡಿಯೋಲ್ ಅವರ ಕಿರಿಯ ಪುತ್ರ ರಾಜ್ವೀರ್ ಡಿಯೋಲ್ ಮತ್ತು ಪೂನಂ ಧಿಲ್ಲೋನ್ ಅವರ ಪುತ್ರಿ ಪಲೋಮಾ ಅವರ ಬಾಲಿವುಡ್ ಚೊಚ್ಚಲ ಚಿತ್ರವಿದು. ಗುರುವಾರ ರಾತ್ರಿ, ನಟ ಸಲ್ಮಾನ್ ಖಾನ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಡೊನೊ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಸಲ್ಮಾನ್ ಖಾನ್ ಶುಭ ಹಾರೈಕೆ: ಟೈಗರ್ ಸ್ಟಾರ್ ಸಲ್ಮಾನ್ ಖಾನ್ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಡೋನೊ ಈವೆಂಟ್ನ ಒಂದೆರಡು ಫೋಟೋಗಳನ್ನು, ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಹೊಸ ಪ್ರತಿಭೆಗಳಾದ ಅವ್ನೀಶ್, ರಾಜ್ವೀರ್ ಮತ್ತು ಪಲೋಮಾ ಅವರಿಗೆ ಶುಭ ಹಾರೈಸಿದ್ದಾರೆ. ಪೋಸ್ಟ್ ಶೇರ್ ಮಾಡಿರುವ ನಟ, "ಸೂರಜ್, ಭಾಗ್ಯಶ್ರೀ ಮತ್ತು ನನಗೆ ಏನು ಸಿಕ್ಕಿದೆಯೋ ಅದು ಡೋನೊ ಚಿತ್ರದ ಮೂಲಕ ಅವ್ನೀಶ್, ರಾಜ್ವೀರ್ ಮತ್ತು ಪಲೋಮಾ ಅವರಿಗೂ ಸಿಗಲಿದೆ ಎಂದು ಆಶಿಸುತ್ತೇನೆ'' ಎಂದು ಬರೆದುಕೊಂಡಿದ್ದಾರೆ.
ನಟ ಶೇರ್ ಮಾಡಿರುವ ಮೊದಲ ಫೋಟೋ, ನಿರ್ದೇಶಕ ಸೂರಜ್ ಬರ್ಜತ್ಯಾ, ಅವ್ನೀಶ್ ಬರ್ಜತ್ಯಾ, ಸನ್ನಿ ಡಿಯೋಲ್, ರಾಜ್ವೀರ್ ಡಿಯೋಲ್, ಪೂನಂ ಧಿಲ್ಲೋನ್ ಮತ್ತು ಪಲೋಮಾ ಧಿಲ್ಲೋನ್ ಅವರೊಂದಿಗೆ ಸಲ್ಮಾನ್ ಖಾನ್ ಕ್ಯಾಮರಾಗೆ ಪೋಸ್ ಕೊಡುತ್ತಿರುವ ಫೋಟೋ. ಎರಡನೇ ಪೋಸ್ಟ್ನಲ್ಲಿ, ಡೋನೊ ಗ್ರ್ಯಾಂಡ್ ಪ್ರೀಮಿಯರ್ ಈವೆಂಟ್ನಲ್ಲಿ ನಿರ್ದೇಶಕ ಸೂರಜ್ ಬರ್ಜತ್ಯಾ ಅವರೊಂದಿಗೆ ಸಲ್ಮಾನ್ ಸಂವಾದ ನಡೆಸಿರುವ ಶಾರ್ಟ್ ವಿಡಿಯೋ ಇದೆ.
ಇದನ್ನೂ ಓದಿ: 'ಮನಸ್ಸಿನ ಒಳಗೊಂದು, ಹೊರಗೊಂದು ಸಾಧ್ಯವಿಲ್ಲ; ದರ್ಶನ್ ಬಳಿ ಕೇಳಲು ಎರಡ್ಮೂರು ಪ್ರಶ್ನೆಗಳಿವೆ': ಬರ್ತ್ ಡೇ ಬಾಯ್ ಧ್ರುವ ಸರ್ಜಾ!
ಗ್ರ್ಯಾಂಡ್ ಡೆಸ್ಟಿನೇಶನ್ ವೆಡ್ಡಿಂಗ್ ಹಿನ್ನೆಲೆಯಲ್ಲಿ ಡೋನೊ ಚಿತ್ರದ ಕಥೆ ನಡೆಯುತ್ತದೆ. ಚಿತ್ರದ ಕಥಾವಸ್ತು ದೇವ್ ಪಾತ್ರಧಾರಿ ಸುತ್ತ ಹೆಣೆಯಲಾಗಿದೆ. ದೇವ್ ಪಾತ್ರವನ್ನು ರಾಜ್ವೀರ್ ಡಿಯೋಲ್ ನಿರ್ವಹಿಸಿದ್ದಾರೆ. ಅವರು ತಮ್ಮ ಆತ್ಮೀಯ ಸ್ನೇಹಿತೆಯನ್ನು ಪ್ರೀತಿಸುತ್ತಾರೆ, ಆದರೆ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗೋದಿಲ್ಲ. ಪ್ರೀತಿಸಿದಾಕೆಯ ಮದುವೆ ಸ್ಥಳಕ್ಕೆ ತಲುಪುತ್ತಿದ್ದಂತೆ, ಪರಿಹಾರವನ್ನು ಹುಡುಕುತ್ತಾರೆ. ಅಲ್ಲಿ ದೇವ್, ಮೇಘನಾ ಎಂಬುವವರನ್ನು ಭೇಟಿಯಾಗುತ್ತಾರೆ. ಈ ಪಾತ್ರವನ್ನು ಪಲೋಮಾ ನಿರ್ವಹಿಸಿದ್ದಾರೆ. ಅದ್ಧೂರಿಯಾಗಿ ಭಾರತೀಯ ಸಂಪ್ರದಾಯದ ಪ್ರಕಾರ ವಿವಾಹ ಆಚರಣೆ ನಡೆಯುವ ಈ ಸ್ಥಳದಲ್ಲಿ ಇಬ್ಬರು (ದೇವ್, ಮೇಘನಾ) ಅಪರಿಚಿತರ ನಡುವೆ ಹೃದಯಸ್ಪರ್ಶಿ ಪ್ರಯಾಣ ಪ್ರಾರಂಭವಾಗುತ್ತದೆ. ಪ್ರಣಯ, ಸಂಬಂಧ, ಹೃದಯಕ್ಕೆ ಹತ್ತಿರವಾದ ವಿಷಯಗಳ ಸಮ್ಮಿಶ್ರಣವೇ ಡೋನೊ ಸಿನಿಮಾ ಕಥೆ.
ಇದನ್ನೂ ಓದಿ: ವಿಡಿಯೋ: ರಸ್ತೆ ಬದಿ ಹೃದಯಾಘಾತಕ್ಕೊಳಗಾದ ಅಪರಿಚಿತ: ಎದೆ ಒತ್ತಿ ಜೀವ ಉಳಿಸಿದ ನಟ ಗುರ್ಮೀತ್ ಚೌಧರಿ!