ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಶ್ರೀರಾಮ್ ರಾಘವನ್ ಅವರ ಮುಂದಿನ ಬಹುನಿರೀಕ್ಷಿತ ಸಿನಿಮಾ 'ಮೇರಿ ಕ್ರಿಸ್ಮಸ್'. ಕತ್ರಿನಾ ಕೈಫ್ ಮತ್ತು ವಿಜಯ್ ಸೇತುಪತಿ ಇದೇ ಮೊದಲ ಬಾರಿ ಸ್ಕ್ರೀನ್ ಸೇರ್ ಮಾಡಿರುವ ಈ ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿದೆ. ನಿರ್ದೇಶಕ ಶ್ರೀರಾಮ್ ರಾಘವನ್ ಅವರು ಆರಂಭದಲ್ಲಿ ವಿಜಯ್ ಸೇತುಪತಿ ಪಾತ್ರಕ್ಕೆ ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರನ್ನು ಪರಿಗಣಿಸಿದ್ದರು. ಸ್ಕ್ರಿಪ್ಟ್ ಡೆವಲಪ್ಮೆಂಟ್ ವೇಳೆ, ಈ ಪಾತ್ರಕ್ಕೆ ಖಾನ್ ಸೂಕ್ತವಲ್ಲ ಎಂಬುದನ್ನು ನಿರ್ದೇಶಕರು ಮನಗಂಡರು.
2024ರ ಬಹುನಿರೀಕ್ಷಿತ ಚಿತ್ರಗಳಲ್ಲೊಂದಾದ 'ಮೇರಿ ಕ್ರಿಸ್ಮಸ್' ಬರುವ ಶುಕ್ರವಾರ ತೆರೆಗಪ್ಪಳಿಸಲಿದೆ. ಕತ್ರಿನಾ ಕೈಫ್, ವಿಜಯ್ ಸೇತುಪತಿ ಮತ್ತು ನಿರ್ದೇಶಕ ಶ್ರೀರಾಮ್ ರಾಘವನ್ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಸಂದರ್ಶನದ ಸಂದರ್ಭ, ಕಾಸ್ಟಿಂಗ್ ಆಯ್ಕೆಯ ಒಳನೋಟವನ್ನು ನಿರ್ದೇಶಕರು ಹಂಚಿಕೊಂಡರು. ತಮ್ಮ ಕಾಮೆಂಟ್‌ಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸ್ಪಷ್ಟಪಡಿಸಿದ ಶ್ರೀರಾಮ್ ರಾಘವನ್, ಚಿತ್ರದ ಈ ಪಾತ್ರಕ್ಕಾಗಿ ಸೈಫ್ ಅಲಿ ಖಾನ್ ಅವರನ್ನು ತಿರಸ್ಕರಿಸಿಲ್ಲ ಎಂಬುದನ್ನು ಒತ್ತಿ ಹೇಳಿದರು.
ಚಿತ್ರಕ್ಕೆ ಸೈಫ್ ಬದಲಿಗೆ ವಿಜಯ್ ಅವರನ್ನು ಆಯ್ಕೆ ಮಾಡಿದ ಬಗ್ಗೆ ಅಭಿಪ್ರಾಯ ಹಂಚಿಕೊಂಡ ಶ್ರೀರಾಮ್ ರಾಘವನ್, "ನಾನು ಸುಮಾರು ಮೂರು ವರ್ಷಗಳಿಂದ ಈ ಕಥೆ ಬಗ್ಗೆ ಯೋಚಿಸುತ್ತಿದ್ದೆ. ಕತ್ರಿನಾ ಅವರನ್ನು ಭೇಟಿ ಮಾಡಿದ್ದೆ. ಅಂಧಾಧುನ್ ಸಿನಿಮಾ ಯಶಸ್ಸಿನ ನಂತರ ನಾನು ಈ ಕಥೆಯೊಂದಿಗೆ ಮುಂದುವರಿಯಲು ನಿರ್ಧರಿಸಿದೆ. ಆರಂಭದಲ್ಲಿ ಚಿತ್ರಕ್ಕೆ, ನಾನು ಈ ಹಿಂದೆ ಕೆಲಸ ಮಾಡಿದ್ದ ಸೈಫ್ ಅಲಿ ಖಾನ್ ಅವರನ್ನು ಪರಿಗಣಿಸಿದ್ದೆ. ಆದರೆ ಸ್ಕ್ರಿಪ್ಟ್ ಅನ್ನು ಆಳವಾಗಿ ಪರಿಶೀಲಿಸಿದಾಗ ಬದಲಾವಣೆ ಬೇಕೆನಿಸಿತು. ನಿರ್ಮಾಪಕ ರಮೇಶ್ ತೌರಾನಿ ಅವರೊಂದಿಗೆ ಈ ಬಗ್ಗೆ ಚರ್ಚಿಸಿದ್ದೆ'' ಎಂದು ತಿಳಿಸಿದರು.
ನಿರ್ದೇಶಕರು ಏಕ್ ಹಸೀನಾ ಥಿ ಮತ್ತು ಏಜೆಂಟ್ ವಿನೋದ್‌ನಂತಹ ಸಿನಿಮಾಗಳಲ್ಲಿ ಸೈಫ್ ಅವರೊಂದಿಗೆ ಕೆಲಸ ಮಾಡಿದ್ದಾರೆ. "ಸ್ಕ್ರಿಪ್ಟ್ನಲ್ಲಿ ಆಳವಾಗಿ ತೊಡಗಿಕೊಂಡಾಗ, ಏನೋ ಸರಿಯಿಲ್ಲ, ಏನೋ ತೊಂದರೆಯಾಗುತ್ತಿದೆ ಎಂದು ಭಾಸವಾಯಿತು. ನಂತರ ನಿರ್ಮಾಪಕ ರಮೇಶ್ ತೌರಾನಿ ಅವರನ್ನು ಭೇಟಿಯಾದೆ. ನನಗೆ ಅನಿಸಿದ್ದನ್ನು ನಿರ್ಮಾಪಕರಲ್ಲಿ ಹೇಳಿದೆ. ಅದಕ್ಕೆ ಅವರು, ಸರಿ, ಹೋಗಿ ಅವರಿಗೆ ತಿಳಿಸೋಣ ಎಂದು ಹೇಳಿದರು'' ಎಂದು ಸಂದರ್ಶನದಲ್ಲಿ ಶ್ರೀರಾಮ್ ರಾಘವನ್ ತಿಳಿಸಿದರು. ಕಥೆಗೆ ಹೊಂದಿಕೆಯಾಗುತ್ತಿಲ್ಲ ಎಂಬ ಕಾರಣಕ್ಕೆ ಸೈಫ್ ಅಲಿ ಖಾನ್ ಅವರ ಬದಲು ವಿಜಯ್ ಸೇತುಪತಿ ಅವರನ್ನು ಆರಿಸಿಕೊಂಡರು.
ಇದನ್ನೂ ಓದಿ: ನಾಗಚೈತನ್ಯ-ಸಾಯಿ ಪಲ್ಲವಿ ಅಭಿನಯದ 'ತಂಡೆಲ್' ಫಸ್ಟ್ ಗ್ಲಿಂಪ್ಸ್ ರಿಲೀಸ್
"ಮೊದಲು ಪರಿಗಣಿಸಿದ ನಟನ ಬಳಿ ಹೋಗಿ 'ಬೇಡ' ಎಂದು ಹೇಳುವಾಗ, ನನ್ನ ಮನಸ್ಸಿನಲ್ಲಿ ಬೇರೆ ಯಾರೋ ಇದ್ದಾರೆ ಎಂಬರ್ಥವಲ್ಲ. ನಾನು ಅವರನ್ನು ತಿರಸ್ಕರಿಸಿಲ್ಲ ಎಂಬುದನ್ನು ಸ್ಪಷ್ಟಪಡಿಸಲು ಬಯಸುತ್ತೇನೆ''. ನಾನು ಸೈಫ್ ಅವರನ್ನು ಭೇಟಿಯಾದೆ, ಅವರು ಅಸಮಾಧಾನಗೊಂಡರು ಎಂಬುದನ್ನೂ ನಿರ್ದೇಶಕರು ಬಹಿರಂಗಪಡಿಸಿದರು. ಮೇರಿ ಕ್ರಿಸ್ಮಸ್ ಜನವರಿ 12 ರಂದು ಹಿಂದಿ ಮತ್ತು ತಮಿಳು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.
ಇದನ್ನೂ ಓದಿ: 2024ರಲ್ಲಿ ಮದುವೆಯಾಗಲಿರುವ ನಟಿಮಣಿಯರು ಇವರೇ ನೋಡಿ