ಬಿಗ್ ಬಾಸ್ ಖ್ಯಾತಿಯ ರಾಜೀವ್ ನಾಯಕರಾಗಿ ನಟಿಸುತ್ತಿರುವ ಉಸಿರೇ ಉಸಿರೇ ಚಿತ್ರದ ಚಿತ್ರೀಕರಣದಲ್ಲಿ ಸಾಧುಕೋಕಿಲ ಸೇರಿಕೊಂಡಿದ್ದಾರೆ. ಕಿಚ್ಚ ಸುದೀಪ್ ಅಭಿನಯದ ಹುಚ್ಚ ಸಿನಿಮಾದ ಜನಪ್ರಿಯ ಹಾಡಿನ ಪಲ್ಲವಿಯ ಸಾಲುಗಳನ್ನೇ ಸಿನಿಮಾದ ಹೆಸರಾಗಿ ಮಾಡಲಾಗಿತ್ತು.
ವಿಭಿನ್ನ ಪ್ರೇಮಕಥೆಯ ಹಂದರವನ್ನು ನಿರ್ದೇಶಕ ಸಿ.ಎಂ.ವಿಜಯ್ ಚಿತ್ರದ ಮೂಲಕ ಹೇಳಹೊರಟಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಕೆಲವು ತಿಂಗಳ ಹಿಂದೆ ತೆಲುಗಿನ ಖ್ಯಾತ ಹಾಸ್ಯನಟರಾದ ಬ್ರಹ್ಮಾನಂದಂ ಹಾಗೂ ಆಲಿ ಅವರು ಸಹ ಈ ಚಿತ್ರದಲ್ಲಿ ಅಭಿನಯಿಸಿದ್ದರು. ಇದೀಗ ಸಾಧುಕೋಕಿಲ ಈ ಚಿತ್ರದಲ್ಲಿ ಕೇರಳ ಚೇಟಾನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ತಮ್ಮ ಅದ್ಭುತ ಕಾಮಿಡಿ ಮೂಲಕ ಜನರನ್ನು ರಂಜಿಸುವ ಸಾಧುಕೋಕಿಲ ಚಿತ್ರದಲ್ಲಿ ಕಾಮಿಡಿ ಮಾತ್ರ ಮಾಡುವುದಿಲ್ಲ. ಅದರ ಜೊತೆಗೆ ಬೇರೆ ರೀತಿಯ ಪಾತ್ರದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ನಿರ್ದೇಶಕ ಸಿ.ಎಂ.ವಿಜಯ್ ತಿಳಿಸಿದರು.
ಕಿಚ್ಚ ಸುದೀಪ್ ಕೂಡ ಈ ಸಿನಿಮಾದಲ್ಲಿ ಅಥಿತಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿಸಿಎಲ್‌ನಲ್ಲಿ ಗುರುತಿಸಿಕೊಂಡಿರುವ ರಾಜೀವ್, ಕಿಚ್ಚ ಸುದೀಪ್ ಆತ್ಮೀಯ ಬಳಗದಲ್ಲಿ ಒಬ್ಬರು. ಈ ಸ್ನೇಹಕ್ಕಾಗಿ ಸುದೀಪ್ ಉಸಿರೇ ಉಸಿರೇ ಸಿನಿಮಾದ ಫಸ್ಟ್ ಲುಕ್ ಲಾಂಚ್ ಮಾಡಿದ್ದರು. ವಿಕ್ರಾಂತ್ ರೋಣಾದ ಓಡಾಟದ ನಂತರ ಈ ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಿನಿಮಾದಲ್ಲಿ ರಾಜೀವ್ಗೆ ನಾಯಕಿಯಾಗಿ ಶ್ರೀಜಿತ ಘೋಷ್ ಅಭಿನಯಿಸುತ್ತಿದ್ದಾರೆ. ದೇವರಾಜ್, ಬ್ರಹ್ಮಾನಂದಂ, ಆಲಿ, ಸಾಧುಕೋಕಿಲ, ತಾರಾ, ಮಂಜು ಪಾವಗಡ, ಸುಚೀಂದ್ರ ಪ್ರಸಾದ್, ರಾಜೇಶ್ ನಟರಂಗ ಹೀಗೆ ದೊಡ್ಡ ತಾರ ಬಳಗವನ್ನೇ ಹೊಂದಿದೆ.
ಐದು ಹಾಡುಗಳಿರುವ ಚಿತ್ರಕ್ಕೆ ವಿವೇಕ್ ಚಕ್ರವರ್ತಿ ಅವರ ಸಂಗೀತ ನಿರ್ದೇಶನವಿದೆ. ಮನು ಬಿ.ಕೆ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನವಿದೆ. ಎನ್.ಗೊಂಬೆ ಕ್ರಿಯೇಷನ್ಸ್ ಲಾಂಛನದಲ್ಲಿ ಪ್ರದೀಪ್ ಯಾದವ್ ನಿರ್ಮಾಣ ಮಾಡುತ್ತಿರುವ ಚಿತ್ರವನ್ನು ಸಿ.ಎಂ.ವಿಜಯ್ ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಒಂದು ಹಾಡನ್ನು ಕೂಡ ವಿಜಯ್ ಅವರೇ ಬರೆದಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿಸಿರೋ ಉಸಿರೇ ಉಸಿರೇ ಚಿತ್ರತಂಡ ಸದ್ಯದಲ್ಲೇ ಈ ಟೀಸರ್ ಬಿಡುಗಡೆ ಮಾಡಲು ಪ್ಲಾನ್ ಮಾಡಿದೆ.
ಇದನ್ನೂ ಓದಿ: ಶಿವಣ್ಣನ 'ಬೈರಾಗಿ' ಬಿಡುಗಡೆ: ಅಭಿಮಾನಿಗಳ ಜೈಕಾರ