ಬಾಲಿವುಡ್ ರೂಮರ್ ಲವ್ ಬರ್ಡ್ಸ್ ಅನನ್ಯಾ ಪಾಂಡೆ ಮತ್ತು ಆದಿತ್ಯ ರಾಯ್ ಕಪೂರ್ ತಮ್ಮ ಡೇಟಿಂಗ್ ವದಂತಿಗಳಿಗೆ ಸಂಬಂಧಿಸಿದಂತೆ ಕಳೆದ ಕೆಲವು ದಿನಗಳಿಂದ ಸುದ್ದಿಯಾಗುತ್ತಿದ್ದಾರೆ. ತಮ್ಮ ಯುರೋಪ್ ಟ್ರಿಪ್ ಮುಗಿಸಿಕೊಂಡು ಬಂದ ಇಬ್ಬರೂ ಶನಿವಾರ ರಾತ್ರಿ ಮುಂಬೈ ಸುತ್ತ ಮುತ್ತ ಮಳೆಯಲ್ಲಿ ಕಾರಲ್ಲಿ ತಿರುಗಾಡುತ್ತಿರುವುದು ಪಾಪರಾಜಿಗಳ ಕಣ್ಣಿಗೆ ಬಿದ್ದಿತ್ತು. ಇದೀಗ ಅಭಿಮಾನಿಯೊಬ್ಬರು ರೂಮರ್ ಲವ್ ಬರ್ಡ್ಸ್ ಅನನ್ಯಾ ಪಾಂಡೆ ಮತ್ತು ಆದಿತ್ಯ ರಾಯ್ ಕಪೂರ್ ಜೊತೆಗಿನ ವಿಡಿಯೋ ಹಂಚಿಕೊಂಡಿದ್ದು, ವಿಡಿಯೋ ಗಮನಿಸಿದರೆ ರೂಮರ್ ಲವ್ ಬರ್ಡ್ಸ್ ಅದೇ ದಿನ ರಾತ್ರಿ ಇತ್ತೀಚಿನ ಹಾಲಿವುಡ್ ಚಿತ್ರ ಬಾರ್ಬಿ ವೀಕ್ಷಿಸಲು ಹೋಗುತ್ತಿರುವುದು ಕಂಡುಬಂದಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡಿರುವ ಅಭಿಮಾನಿ, "ಬಾರ್ಬಿ ಚಿತ್ರದ ಸಮಯದಲ್ಲಿ @adityaroykapur ಮತ್ತು @ananyapanday ಜೊತೆಗೆ ಅವರ ಪ್ರಮುಖ ಅಭಿಮಾನಿ ಹುಡುಗಿಯ ಕ್ಷಣ" ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ. ವಿಡಿಯೋ ಕ್ಲಿಪ್‌ನಲ್ಲಿ, ಆದಿತ್ಯ ಮತ್ತು ಅನನ್ಯಾ ಗ್ರೇಟಾ ಗೆರ್ವಿಗ್ ನಿರ್ದೇಶನದ ಬಾರ್ಬಿ ಸಿನಿಮಾ ವೀಕ್ಷಿಸುತ್ತಿರುವುದನ್ನು ಕಾಣಬಹುದು. ಆದಿತ್ಯ ಮತ್ತು ಅನನ್ಯಾ ಇಬ್ಬರೂ ಒಂದೇ ಸಿನಿಮಾ ಹಾಲ್‌ನಲ್ಲಿ ಇದ್ದುದರಿಂದ ಅಭಿಮಾನಿ ಹುಡುಗಿ ಅವರ ಜೊತೆ ಸೆಲ್ಫಿ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದಿತ್ಯ ಅವರು ಮುಖಕ್ಕೆ ಮಾಸ್ಕ್ ಮತ್ತು ಕಪ್ಪು ಪ್ಯಾಂಟ್ ಹಾಗೂ ಬಿಳಿ ಶರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅನನ್ಯಾ, ಮತ್ತೊಂದೆಡೆ ಬಾರ್ಬಿಯ ಥೀಮ್‌ಗೆ ಹೊಂದಿಕೆಯಾಗುವಂತೆ ಧರಿಸಿದ್ದ ಕ್ಯಾಶುಯಲ್ ಪಿಂಕ್ ಉಡುಪಿನಲ್ಲಿ ಸುಂದರವಾಗಿ ಕಾಣುತ್ತಿದ್ದರು.
ಆದಿತ್ಯ ಮತ್ತು ಅನನ್ಯಾ ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಇನ್ನೂ ದೃಢಪಡಿಸಿಲ್ಲ. ಆದರೆ ಹಲವಾರು ಸಂದರ್ಭಗಳಲ್ಲಿ ಈ ಜೋಡಿ ಇತ್ತೀಚೆಗೆ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಲೇ ಇದೆ. ಆದರೂ ಈ ಜೋಡಿ ತಮ್ಮ ಸಂಬಂಧದ ಬಗ್ಗೆ ಎಲ್ಲೂ ಅಧಿಕೃತವಾಗಿ ಹೇಳಿಕೊಂಡಿಲ್ಲ. ಇತ್ತೀಚೆಗೆ ವಿದೇಶ ಪ್ರವಾಸದ ಮೂಲಕ ಸದ್ದು ಮಾಡಿದ್ದ ಜೋಡಿ, ಹಿಂತಿರುಗಿ ಬಂದು ಮುಂಬೈನ ಸುತ್ತಮುತ್ತ ಕಾರಿನಲ್ಲಿ ಹೋಗುತ್ತಿರುವುದು ಪಾಪರಾಜಿಗಳ ಮೊಬೈಲ್ ಕ್ಯಾಮರಾಗಳಲ್ಲಿ ಸೆರೆಯಾಗಿತ್ತು. ಇಬ್ಬರೂ ಮಳೆಯಲ್ಲಿ ಜೊತೆಯಾಗಿ ಕಾರಿನಲ್ಲಿ ಹೋಗುತ್ತಿದ್ದರು.
ಇಬ್ಬರ ಸಿನಿಮಾಗಳನ್ನು ನೋಡುವುದಾದರೆ ನಟಿ ಅನನ್ಯಾ ಪಾಂಡೆ ಶೀಘ್ರದಲ್ಲೇ ಆಯುಷ್ಮಾನ್ ಖುರಾನಾ ಅವರೊಂದಿಗೆ ಹಾಸ್ಯ ಚಲನಚಿತ್ರ ಡ್ರೀಮ್ ಗರ್ಲ್ 2 ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದಕ್ಕೂ ಮೊದಲು, ಕರಣ್ ಜೋಹರ್ ಅವರ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯಲ್ಲಿ ಒಂದು ಹಾಡಿಗೆ ಹೆಜ್ಜೆ ಹಾಕಿದ್ದಾರೆ ಎಂದು ವರದಿಯಾಗಿದೆ. ನಟ ಆದಿತ್ಯಾ ರಾಯ್ ಕಪೂರ್ ಅನುರಾಗ್ ಬಸು ನಿರ್ದೇಶನದ ಮುಂಬರುವ ಚಿತ್ರ ಮೆಟ್ರೋ ಇನ್ ಡಿನೋದಲ್ಲಿ ಸಾರಾ ಅಲಿ ಖಾನ್ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: ಮಳೆಯಲಿ ಜೊತೆಯಲಿ.. ಡೇಟಿಂಗ್ ವದಂತಿಗೆ ತುಪ್ಪ ಸುರಿದ ಅನನ್ಯಾ ಪಾಂಡೆ - ಆದಿತ್ಯ ರಾಯ್ ಕಪೂರ್