'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಸಿನಿಮಾ ಶುಕ್ರವಾರ ಚಿತ್ರಮಂದಿರಗಳಲ್ಲಿ ತೆರೆಕಂಡು ಉತ್ತಮ ಪ್ರದರ್ಶನ ಕಾಣುತ್ತಿದೆ. ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ ಅತ್ಯುತ್ತಮ ಆರಂಭ ಪಡೆದಿದೆ. ರಿಲೀಸ್ ಆದ ಮೊದಲ ಎರಡು ದಿನಗಳಲ್ಲಿ 27 ಕೋಟಿ ರೂ. ಕಲೆಕ್ಷನ್ ಮಾಡುವಲ್ಲಿ ಸಿನಿಮಾ ಯಶಸ್ವಿ ಆಗಿದೆ.
ಹಿಂದಿ ಚಿತ್ರರಂಗದ ಖ್ಯಾತ ನಿರ್ಮಾಪಕ ಕರಣ್ ಜೋಹರ್ ನಿರ್ದೇಶಿಸಿ, ನಿರ್ಮಾಣ ಮಾಡಿರುವ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಪ್ರೇಕ್ಷಕರು ಮತ್ತು ನಿರ್ಮಾಪಕರಿಂದ ಮಿಶ್ರ ಪ್ರತಿಕ್ರಿಯೆ ಪಡೆಯುತ್ತಿದೆ. ಹೆಚ್ಚಿನ ಸಂಖ್ಯೆಯ ಜನರು ಸಕಾರಾತ್ಮಕವಾಗಿಯೇ ಸ್ಪಂದಿಸಿದ್ದಾರೆ. ರಣ್ವೀರ್ - ಆಲಿಯಾ ಮುಖ್ಯಭೂಮಿಕೆಯಲ್ಲಿದ್ದರೆ, ಧರ್ಮೇಂದ್ರ, ಜಯಾ ಬಚ್ಚನ್, ಶಬಾನಾ ಅಜ್ಮಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಾರಾ ಅಲಿ ಖಾನ್ ಮತ್ತು ಅನನ್ಯಾ ಪಾಂಡೆ ವಿಶೇಷ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಸಿನಿಮಾ ಉದ್ಯಮದ ಟ್ರ್ಯಾಕರ್ ಸ್ಯಾಕ್ನಿಲ್ಕ್ (Sacnilk) ಪ್ರಕಾರ, 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಎರನೇ ದಿನ (ಶನಿವಾರ) ಭಾರತದಲ್ಲಿ 16 ಕೋಟಿ ರೂ. ಸಂಗ್ರಹಿಸಿದೆ. ಶನಿವಾರ ಚಿತ್ರಮಂದಿರಗಳಲ್ಲಿ ಶೇ. 33.68 ರಷ್ಟು ಆಕ್ಯುಪೆನ್ಸಿ ಹೊಂದಿತ್ತು. ರೊಮ್ಯಾಂಟಿಕ್ ಸಿನಿಮಾ ಮೊದಲ ದಿನ 11.10 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ತೆರೆಗಪ್ಪಳಿಸಿದ ಎರಡೇ ದಿನಗಳಲ್ಲಿ ಒಟ್ಟು 27 ಕೋಟಿ ರೂ. ಸಂಪಾದಿಸುವಲ್ಲಿ ಯಶ ಸಾಧಿಸಿದೆ. ಹೀಗಾಗಿ ಕಲೆಕ್ಷನ್ ಸಿನಿಮಾ ಪಂಡಿತರ ನಿರೀಕ್ಷೆ ತಲುಪಿದೆ.
'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಕಥೆ ಸಂಪೂರ್ಣವಾಗಿ ವಿಭಿನ್ನ ಹಿನ್ನೆಲೆ ಮತ್ತು ಸಂಸ್ಕೃತಿಯಿಂದ ಬಂದ ರಣ್ವೀರ್ ಸಿಂಗ್ ಮತ್ತು ಆಲಿಯಾ ಭಟ್ ಜೋಡಿ ಸುತ್ತ ಸುತ್ತುತ್ತದೆ. ಈ ಜೋಡಿಯ ಪ್ರೇಮಕಥೆಯೇ ಚಿತ್ರದ ಕೇಂದ್ರಬಿಂದು. ಅವರ ವಿಭಿನ್ನ ಆಚರಣೆಗಳು, ಜೀವನ ಶೈಲಿಯಿಂದಾಗಿ ಉದ್ಭವಿಸುವ ಸವಾಲುಗಳು ಮತ್ತು ಸಂತೋಷಕರ ಕ್ಷಣಗಳನ್ನು ಈ ಸಿನಿಮಾ ಹೇಳುತ್ತದೆ.
ಇದನ್ನೂ ಓದಿ: Tamannaah Bhatia: ಕೆಂಪಂಗಿ ತೊಟ್ಟು ಕಿಲ್ಲರ್ ಲುಕ್ ಕೊಟ್ಟ ತಮನ್ನಾ ಭಾಟಿಯಾ ನೋಟಕ್ಕೆ ಬೆರಗಾದ ನೆಟ್ಟಿಗ!
ಸಿನಿಮಾ ನಿರ್ಮಾಣ ಮಾಡಿರುವ 'ಧರ್ಮ ಪ್ರೊಡಕ್ಷನ್ಸ್' ಸಾಮಾಜಿಕ ಮಾಧ್ಯಮದಲ್ಲಿ ಬಾಕ್ಸ್ ಆಫೀಸ್ ವಿಚಾರವಾಗಿ ಸಂತಸ ಹಂಚಿಕೊಂಡಿದೆ. ಕರಣ್ ಜೋಹರ್ 2016 ರಲ್ಲಿ ಕೊನೆಯದಾಗಿ 'ಏ ದಿಲ್ ಹೈ ಮುಷ್ಕಿಲ್' ಸಿನಿಮಾ ನಿರ್ದೇಶಿಸಿದ್ದರು. ಏಳು ವರ್ಷಗಳ ನಂತರ ನಿರ್ದೇಶನಕ್ಕೆ ಮರಳಿದ್ದು, ಕಥೆ ಮತ್ತು ನಿರ್ದೇಶನ ಶೈಲಿಯನ್ನು ಪ್ರೇಕ್ಷಕರು ಮತ್ತು ವಿಮರ್ಶಕರು ಮೆಚ್ಚಿದ್ದಾರೆ. ಇನ್ನೂ ರಣ್ವೀರ್ ಸಿಂಗ್ - ಆಲಿಯಾ ಭಟ್ ಎರಡನೇ ಬಾರಿ ತೆರೆ ಹಂಚಿಕೊಂಡಿದ್ದು, ಈ ಸಿನಿಮಾ ಕೂಡ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದೆ. ಮೊದಲ ಚಿತ್ರ ಗಲ್ಲಿ ಬಾಯ್ ಕೂಡ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿತ್ತು.
ಇದನ್ನೂ ಓದಿ: ಜೈಲರ್ ಆಡಿಯೋ ಲಾಂಚ್ ಈವೆಂಟ್: ತಲೈವಾ ಎಂಟ್ರಿ ಅದ್ಭುತ! ವಿಡಿಯೋ ನೋಡಿ..