ಆಪರೇಷನ್ ಅಲಮೇಲಮ್ಮ, ಕವಲು ದಾರಿ ಚಿತ್ರಗಳ ಮೂಲಕ ಗುರುತಿಸಿಕೊಂಡಿರುವ ನಟ ರಿಷಿ ಇದೀಗ 'ರಾಮನ ಅವತಾರ' ಎಂಬ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕಲಿಯುಗದ ರಾಮನ ಕಥೆಯನ್ನು ಹೇಳಲು ರಿಷಿ ಹೊರಟಿದ್ದಾರಾ ಎಂಬುದು ಚಿತ್ರ ಬಿಡುಗಡೆಯಾದ ಬಳಿಕವೇ ಪೂರ್ಣವಾಗಿ ಗೊತ್ತಾಗಲಿದೆ. ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರದ ಟೀಸರ್ ರಿಲೀಸ್ ಆಗಿದೆ. ನಿರ್ದೇಶಕ ಪಂಪಾವತಿ ಭರಪೂರ ನಗುವಿನ ಮ್ಯಾಜಿಕ್ ಅನ್ನು ಪ್ರೇಕ್ಷಕರಿಗೆ ಉಣ ಬಡಿಸಲಿದ್ದಾರೆ ಎನ್ನಲಾಗುತ್ತಿದೆ. ರಿಷಿ ಪಂಚಿಂಗ್ ಡೈಲಾಗುಗಳ ಮೂಲಕ ನೋಡುಗರ ಮನರಂಜಿಸಲು ಕಾತರಿಸುತ್ತಿದ್ದಾರೆ.
ರಿಷಿ ಮಾತನಾಡಿ, "ಸಾಮಾನ್ಯವಾಗಿ ಕಾಮಿಡಿ ಕಷ್ಟದ ಕೆಲಸ. ಅದರಲ್ಲಿ ಡಬಲ್ ಮೀನಿಂಗ್ ಮಾಡ್ಬಹುದು. ಬೇರೆಯವರನ್ನು ನಿಂದಿಸಿಯೂ ಕಾಮಿಡಿ ಮಾಡಬಹುದು. ಈ ಎರಡೂ ರೀತಿ ಅಲ್ಲದೆಯೂ ಕಾಮಿಡಿ ಮಾಡಬಹುದು ಎಂದು ತೋರಿಸಿಕೊಟ್ಟವರು ನಿರ್ದೇಶಕ ವಿಕಾಸ್ ಪಂಪಾವತಿ. ಇದು ನನಗೆ ವೈಯಕ್ತಿಕವಾಗಿ ತುಂಬಾ ಖುಷಿ ಕೊಟ್ಟ ಚಿತ್ರ. ದೊಡ್ಡ ತಾರಾಬಳಗವೇ ಇದೆ. ಅವರೆಲ್ಲರ ಎನರ್ಜಿ ನೋಡಿ ಖುಷಿಯಾಗಿದೆ" ಎಂದರು.
"ರಾಮನ ಅವತಾರ ಚಿತ್ರ ಕಲಿಯುಗದ ರಾಮನ ಕಥೆ. ಅಲ್ಲಲ್ಲಿ ಪೌರಾಣಿಕ ರಾಮಾಯಣದ ನೆನಪು ಮಾಡಿಕೊಡುತ್ತದೆ. ಯಾವುದೇ ರೀತಿಯ ಕಾಂಪ್ರಮೈಸ್ ಮಾಡಿಕೊಳ್ಳದೇ ಸಿನಿಮಾ ಮಾಡಲಾಗಿದೆ. ಕನ್ನಡ ಸಿನಿರಂಗದಲ್ಲಿ ಇದೊಂದು ವಿಭಿನ್ನ ಚಿತ್ರವಾಗಲಿದೆ" ಎಂದು ವಿಕಾಸ್ ಪಂಪಾವತಿ ಹೇಳಿದರು.
ಇದನ್ನೂ ಓದಿ: ಹಾಲಿವುಡ್ನಂತೆ ಸಿದ್ಧಗೊಳ್ಳುತ್ತಿದೆ ಪ್ರಭಾಸ್ 'ಪ್ರಾಜೆಕ್ಟ್ ಕೆ' ಸಿನಿಮಾ: ಕುತೂಹಲ ಕೆರಳಿಸುವ ವಿಡಿಯೋ ಔಟ್
ರೊಮ್ಯಾಂಟಿಕ್ ಕಾಮಿಡಿ ಕಥಾಹಂದರ ಹೊಂದಿರುವ 'ರಾಮನ ಅವತಾರ'ಕ್ಕೆ ವಿಷ್ಣುಪ್ರಸಾದ್ ಹಾಗೂ ಸಮೀರ್ ದೇಶಪಾಂಡೆ ಛಾಯಾಗ್ರಹಣವಿದೆ. ಜೂಡಾ ಸ್ಯಾಂಡಿ ಸಂಗೀತ, ಅಮರನಾಥ್ ಸಂಕಲನವಿದೆ. ಉಡುಪಿ, ಬೆಂಗಳೂರು ಸುತ್ತಮುತ್ತ ಶೂಟಿಂಗ್ ನಡೆದಿದೆ. ರಿಷಿಗೆ ಜೋಡಿಯಾಗಿ ಪ್ರಣೀತಾ ಸುಭಾಷ್ ಹಾಗೂ ಶುಭ್ರ ಅಯ್ಯಪ್ಪ ನಟಿಸಿದ್ದಾರೆ. ಅರುಣ್ ಸಾಗರ್ ಮುಖ್ಯಭೂಮಿಕೆಯಲ್ಲಿದ್ದಾರೆ. ಅಮರೇಜ್ ಸೂರ್ಯವಂಶಿ ಚಿತ್ರ ನಿರ್ಮಾಣ ಮಾಡಿದ್ದಾರೆ. ಜೂನ್ ಮೊದಲ ವಾರ ಸಿನಿಮಾವನ್ನು ತೆರೆಗೆ ತರುವ ಯೋಜನೆ ಚಿತ್ರತಂಡದ್ದು.
ಧಾರಾವಾಹಿಯಲ್ಲಿ ಮೊದಲಿಗೆ ಬಣ್ಣ ಹಚ್ಚಿದ್ದ ರಿಷಿ ಬಳಿಕ ಸಿನಿಮಾ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟರು. ಇವರು ನಟಿಸಿರುವ ಆಪರೇಷನ್ ಅಲಮೇಲಮ್ಮ ಸೂಪರ್ ಹಿಟ್ ಆಗಿತ್ತು. ಕವಲು ದಾರಿ ಸಿನಿಮಾದಲ್ಲೂ ನಟಿಸಿದ್ದಾರೆ. ಇದು ಅವರಿಗೆ ಹೊಸ ಅವಕಾಶಗಳ ಬಾಗಿಲು ತೆರೆಸಿದೆ.
ಇದನ್ನೂ ಓದಿ: ಶೆಹನಾಜ್ ಗಿಲ್ಗೆ ನಟ ಸಲ್ಮಾನ್ ಖಾನ್ 'ಪ್ರೀತಿ' ಸಲಹೆ: ಅಭಿಮಾನಿಗಳಲ್ಲಿ ಗೊಂದಲ