14ನೇ ಆವೃತ್ತಿಯ ಏರೋ ಇಂಡಿಯಾ ಪ್ರದರ್ಶನವನ್ನು ಉದ್ಘಾಟಿಸಲು ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸಿದ್ದರು. ಈ ವೇಳೆ, ಆಯೋಜಿಸಿದ್ದ ಪಿಎಂ ಮೋದಿ ಔತಣಕೂಟಕ್ಕೆ ರಾಕಿಂಗ್ ಸ್ಟಾರ್ ಯಶ್, ಕಾಂತಾರ ಚಿತ್ರದ ನಾಯಕ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ, ನಟ ಪುನೀತ್ ರಾಜ್ಕುಮಾರ್ ಪತ್ನಿ ಅಶ್ವಿನಿ, ಹೊಂಬಾಳೆ ಫಿಲ್ಮ್ಸ್ನ ವಿಜಯ್ ಕಿರಗಂದೂರು ಅವರನ್ನು ಆಹ್ವಾನಿಸಿ ಸಿನಿಮಾ ವಿಚಾರಗಳ ಕುರಿತು ಮಾತುಕತೆ ನಡೆಸಿದ್ದಾರೆ.
ಸುಮಾರು ಅರ್ಧ ಗಂಟೆಗೂ ಹೆಚ್ಚು ಹೊತ್ತು ಪ್ರಧಾನಿ ಮಂತ್ರಿ ನರೇಂದ್ರ ಮೋದಿ ನಮ್ಮ ಭಾರತೀಯ ಚಿತ್ರರಂಗದ ಕುರಿತು ಆಹ್ವಾನಿತ ಸೆಲೆಬ್ರಿಟಿಗಳೊಂದಿಗೆ ಚರ್ಚೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮೊದಲಿಗೆ ರಿಷಬ್ ಶೆಟ್ಟಿ ಅಭಿನಯಿಸಿ ನಿರ್ದೇಶನ ಮಾಡಿರೋ ಕಾಂತಾರ ಸಿನಿಮಾದ ಯಶಸ್ಸಿನ ಬಗ್ಗೆ ಮೋದಿಯವರು ಮೆಚ್ಚುಗೆ ವ್ಯಕ್ತಪಡಿಸಿದರಂತೆ. ಬಳಿಕ ಯಶ್ ಜೊತೆ ಮೋದಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಯಶ್ ಅವರು ಸಿನಿಮಾರಂಗದ ವಿಚಾರವಾಗಿ ಪ್ರಧಾನಿ ಬಳಿ ದೊಡ್ಡದೊಂದು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
ಚಿತ್ರರಂಗ ಅತೀ ಹೆಚ್ಚು ತೆರಿಗೆ ಪಾವತಿ ಮಾಡುತ್ತಿರುವ ಉದ್ಯಮ, ಇಂಡಿಯಾದಲ್ಲಿ ನಮಗೆ ಪೂರಕವಾದ ಇನ್ಫ್ರಾಸ್ಟ್ರಕ್ಚರ್ ಇಲ್ಲ, ಭಾರತದಲ್ಲಿ ಸಿನಿಮಾಗೆ ಬೇಕಾದ ರೀತಿ ಇನ್ಫ್ರಾಸ್ಟ್ರಕ್ಚರ್ ನಿರ್ಮಾಣ ಆದರೆ, ನಾವು ಶೂಟಿಂಗ್ಗಳಿಗಾಗಿ ವಿದೇಶಗಳಿಗೆ ಹೋಗುವ ಅನಿವಾರ್ಯ ಇರುವುದಿಲ್ಲ. ಕೊರಿಯಾ ಮಾದರಿ ಇನ್ಫ್ರಾಸ್ಟ್ರಕ್ಚರ್ ಭಾರತದಲ್ಲಿ ನಿರ್ಮಾಣ ಆದರೆ, ನಮ್ಮ ಚಿತ್ರರಂಗ ಇನ್ನು ವೇಗವಾಗಿ ಬೆಳೆಯುತ್ತದೆ. ಎಲ್ಲ ವ್ಯವಸ್ಥೆ ಇರುವಂತ ಫಿಲ್ಮ್ ಸಿಟಿ ಬೇಕು ಎಂದು ನಟ ಯಶ್ ಪಿಎಂ ಮೋದಿಯವರ ಬಳಿ ಮನವಿ ಮಾಡಿದ್ದಾರಂತೆ. ಯಶ್ ಬೇಡಿಕೆಗೆ ಪೂರಕವಾಗಿ ಸ್ಪಂದಿಸಿರುವ ಪ್ರಧಾನಿ ನರೇಂದ್ರ ಮೋದಿ ಚಿತ್ರರಂಗಕ್ಕೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಿಕೊಡುವ ಬಗ್ಗೆ ಭರವಸೆಯನ್ನು ನೀಡಿದ್ದಾರೆ ಎಂದು ಯಶ್ ಆಪ್ತರ ವಲಯದಿಂದ ತಿಳಿದು ಬಂದಿದೆ.
ಇದರ ಜೊತೆ ಮೋದಿಯವರು ಪುನೀತ್ ರಾಜ್ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರ ಜೊತೆ ಮಾತನಾಡಿದ್ದಾರೆ. ಪುನೀತ್ ರಾಜ್ಕುಮಾರ್ ಅಭಿನಯದ ಗಂಧದ ಗುಡಿ ಚಿತ್ರದ ಬಗ್ಗೆ ಮೋದಿಯವರು ಮಾತನಾಡಿದ್ದಾರಂತೆ. ಈ ಹಿಂದೆ ಪುನೀತ್ ರಾಜ್ ಕುಮಾರ್ ಅವರನ್ನು ಭೇಟಿಯಾದ ಕ್ಷಣದ ಬಗ್ಗೆ ಮೋದಿಯವರು ನೆನಪಿಸಿಕೊಂಡಿದ್ದಾರೆ. ಪುನೀತ್ ರಾಜ್‍ಕುಮಾರ್ ನಿಧನದ ಸುದ್ದಿ ತಿಳಿದು ಬೇಸರವಾಯ್ತು. ಪುನೀತ್ ರಾಜ್‍ಕುಮಾರ್ ಅವರು ಪರಿಸರ ಹಾಗು ಪ್ರಾಣಿ ಸಂಕುಲದ ಬಗ್ಗೆ ಮಾಡಿರುವ ಗಂಧದ ಗುಡಿ ಸಿನಿಮಾ ಮುಂದಿನ ಪೀಳಿಗೆಗೆ ಮಾದರಿ ಆಗುತ್ತದೆ. ಆ ಸಿನಿಮಾ ಅದ್ಧುತ ಚಿತ್ರ ಎಂದು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರಿಗೆ ಮೋದಿಯವರು ಹೇಳಿದ್ದಾರೆ. ಜೊತೆಗೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಸದ್ಯ ನಡೆಸುತ್ತಿರುವ ಪಿಆರ್ಕೆ ಪ್ರೊಡಕ್ಷನ್ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರಂತೆ.
ಕೆಜಿಎಫ್ 2, ಕಾಂತಾರ ಹಾಗೂ ಗಂಧದ ಗುಡಿ ಸಿನಿಮಾಗಳು ಮೆಚ್ಚುಗೆ ಪಡೆದುಕೊಂಡಿವೆ. ಈ ಬಗ್ಗೆ ನರೇಂದ್ರ ಮೋದಿಯವರು ಹರ್ಷ ವ್ಯಕ್ತಪಡಿಸಿದ್ದು, ಅದರಲ್ಲಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರ ಕನಸುಗಳಿಗೆ ಪ್ರೋತ್ಸಾಹ ಸಿಗಲಿ ಎಂದು ಮೋದಿ ಹಾರೈಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಮೋದಿ ಔತಣಕೂಟದಲ್ಲಿ ಸ್ಯಾಂಡಲ್ವುಡ್ ಸೆಲೆಬ್ರಿಟಿಗಳು: ಯಶ್, ರಿಷಬ್ ಶೆಟ್ಟಿ, ಅಶ್ವಿನಿ ಪುನೀತ್ ರಾಜ್‌ಕುಮಾರ್ ಭಾಗಿ