ಸ್ಯಾಂಡಲ್ವುಡ್ನಲ್ಲಿ ಹೊಸ ಕಥೆ ಹಾಗೂ ಅದ್ದೂರಿ ಮೇಕಿಂಗ್ನಿಂದಲೇ ಹೊಸ ಚಿತ್ರಗಳು ಪ್ರೇಕ್ಷಕನ್ನು ರಂಜಿಸುತ್ತಿವೆ. ಈ ಸಾಲಿನಲ್ಲಿ ಹೊಸಬರು ಸೇರಿಕೊಂಡು ಮಾಡುತ್ತಿರುವ 'ಜೂಮ್ ಕಾಲ್' ಚಿತ್ರ ಕೂಡ ಒಂದು. ಚಿತ್ರದ ಶೀರ್ಷಿಕೆಯಿಂದಲೇ ಗಮನ ಸೆಳೆಯುತ್ತಿರುವ 'ಜೂಮ್ ಕಾಲ್' ಚಿತ್ರದಲ್ಲಿ ಆನ್ಲೈನ್ ಶಿಕ್ಷಕಿಯಾಗಿ ರೇಣುಕಾ ಅಭಿನಯಿಸಿದ್ದಾರೆ. ವಿಷ್ಣುವರ್ಧನ್, ಗಣೇಶ್, ರಿಷಬ್ ಶೆಟ್ಟಿ ಸೇರಿದಂತೆ ಅನೇಕ ಖ್ಯಾತ ನಟರ ಚಿತ್ರಗಳಲ್ಲಿ ನಟಿಸಿರುವ ರೇಣುಕಾ ಈಗ ಹೊಸಬರ ಈ ಚಿತ್ರದಲ್ಲಿ ನಟಿಸುವ ಮೂಲಕ ಗಮನಸೆಳೆದಿದ್ದಾರೆ.
ಹಿರಿತೆರೆ ಜೊತೆಗೆ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ನಟಿ ರೇಣುಕಾ. ಆಗಾಗ ಬೆಳ್ಳಿತೆರೆ ಮೇಲೆ ಕಾಣಿಸಿಕೊಳ್ಳುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಈ ಸಿನಿಮಾದಲ್ಲಿ ಲಕ್ಷ್ಮೀ ಅರಸ್, ರೂಪ ಮನಕೂರ್, ಅರ್ಜುನ್, ಮಹೇಂದ್ರ, ಪರಮ್ ಮುಂತಾದವರು ಕೂಡ ಬಣ್ಣ ಹಚ್ಚಿದ್ದಾರೆ. ಇನ್ನು ಈ ಚಿತ್ರದ ಕುರಿತು ಮಾತನಾಡಿರುವ ರೇಣುಕಾ, ಪ್ರತಿ ಸಿನಿಮಾದಲ್ಲಿ ಸಹನಟರ ಜೊತೆ ನಟಿಸುತ್ತಿದೆ. ಆದರೆ ಈ ಚಿತ್ರದಲ್ಲಿ ಒಬ್ಬಳೆ ನಟಿಸಿದ್ದೇನೆ. ಈ ಅನುಭವ ಹೊಸದಾಗಿತ್ತು ಮತ್ತು ವಿಶೇಷವಾಗಿತ್ತು. "ಜೂಮ್ ಕಾಲ್" ಪ್ರಯೋಗಾತ್ಮಕ ಚಿತ್ರವಾಗಿದ್ದು, ಮೇಕಿಂಗ್ ವಿಭಿನ್ನವಾಗಿದೆ. ಈ ಸಿನಿಮಾದಲ್ಲಿ ನಟಿಸಿದ್ದು ನನಗೆ ಖುಷಿಯಾಗಿದೆ ಎಂದಿದ್ದಾರೆ.
ಶ್ರೀವಾರಿ ಪಿಕ್ಚರ್ಸ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಮಂಜು ಕೊಪ್ಪಳ್ ಛಾಯಾಗ್ರಹಣ ಹಾಗೂ ಸಂಕಲನ, ವಿಜಯ್ ರಾಜ್ ಅವರ ಸಂಗೀತ ನಿರ್ದೇಶನವಿದೆ. ಮಹೇಶ್ ಹೆಚ್ ಎಂ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿಯಾಗಿದೆ. ಬಹುತೇಕ ಚಿತ್ರೀಕರಣ ಮುಗಿಸಿರೋ ಜೂಮ್ ಕಾಲ್ ಚಿತ್ರದ ಟ್ರೈಲರ್ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ.
ಬಿಡುಗಡೆಗೆ ಸಿದ್ದವಾಯ್ತು ಡಿಸೆಂಬರ್ 24: 'ಭಾಗ್ಯಲಕ್ಷ್ಮಿ' ಧಾರಾವಾಹಿಯ ಲಕ್ಷ್ಮಿ ಪಾತ್ರದ ಮೂಲಕ ನಾಡಿನ ಮನೆಮಗಳಾಗಿ ಗುರುತಿಸಿಕೊಂಡಿರುವ ನಟಿ ಭೂಮಿಕಾ ರಮೇಶ್ ಈಗ "ಡಿಸೆಂಬರ್ 24" ಚಿತ್ರದ ಮೂಲಕ ನಾಯಕಿಯಾಗಿ ಬೆಳ್ಳಿತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ಮೆಡಿಕಲ್ ರಿಸರ್ಚ್ ಗೆ ಸಂಬಂಧಪಟ್ಟ ಘಟನೆಗಳನ್ನಿಟ್ಟುಕೊಂಡು ನಿರ್ಮಾಣವಾದ ಈ ಚಿತ್ರಕ್ಕೆ ನಾಗರಾಜ್ ಎಂ.ಜಿ.ಗೌಡ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಫೆಬ್ರವರಿ ಮೊದಲವಾರ ಈ ಚಿತ್ರ ತೆರೆಕಾಣಲಿದೆ.
ಭಾರತದಲ್ಲಿ ಸಾಕಷ್ಟು ನವಜಾತ ಶಿಶುಗಳು ಉಸಿರಾಟದ ಸಮಸ್ಯೆಯಿಂದಾಗಿಯೇ ಮರಣ ಹೊಂದುತ್ತಿವೆ. ಇದಕ್ಕೆ ಮೆಡಿಸಿನ್ ಕಂಡು ಹಿಡಿಯುವುದೇ ಚಿತ್ರದ ಮುಖ್ಯಕಥೆ. 2015ರಿಂದ2019ರ ನಡುವೆ ಹುಲಿಯೂರುದುರ್ಗದಲ್ಲಿ ನಡೆದ ನೈಜ ಘಟನೆಯನ್ನು ಪ್ರೇರಣೆಯಾಗಿಟ್ಟುಕೊಂಡು ಫ್ಯಾಮಿಲಿ, ಲವ್, ಫ್ರೆಡ್‌ಷಿಪ್ ಹಾಗೂ ಹಾರರ್, ಥ್ರಿಲ್ಲರ್ ಕಥೆಯನ್ನು ಈ ಚಿತ್ರದಲ್ಲಿ ಹೇಳಲಾಗಿದೆ.
ಈ ಸಂಕಷ್ಟದಿಂದ ಮಕ್ಕಳನ್ನು ಹೇಗಾದರೂ ಪಾರು ಮಾಡಬೇಕೆಂದು ಎಂಟು ಜನ ವೈದ್ಯಕೀಯ ವಿದ್ಯಾರ್ಥಿಗಳ ತಂಡ ಔಷಧಿ ಹುಡುಕಿಕೊಂಡು ಕಾಡಿಗೆ ತೆರಳುತ್ತಾರೆ. ಅಲ್ಲಿ ಅವರು ಅನೇಕ ಕಷ್ಟಕರ ಸನ್ನಿವೇಶಗಳನ್ನು ಎದುರಿಸಬೇಕಾಗುತ್ತದೆ, ಆ ತಂಡ ಎದುರಿಸಿದ ತೊಂದರೆ, ಸಮಸ್ಯೆಗಳೇನು, ಆ ತಂಡಕ್ಕೆ ಮೆಡಿಸಿನ್ ಸಿಕ್ಕಿತೇ, ಇಲ್ಲವೇ ಎನ್ನುವುದೇ ಚಿತ್ರದ ಕ್ಲೈಮ್ಯಾಕ್ಸ್.
ಮೆಡಿಕಲ್ ವಿದ್ಯಾರ್ಥಿನಿಯಾಗಿ ಭೂಮಿಕಾ ರಮೇಶ್ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಉಳಿದ ಪಾತ್ರಗಳಲ್ಲಿ ಅಪ್ಪು ಬಡಿಗೇರ್, ರವಿ ಕೆ.ಆರ್.ಪೇಟೆ, ರಘುಶೆಟ್ಟಿ, ಸಾಗರ್ ರಾಮಾಚಾರಿ, ಜಗದೀಶ್ ಎಚ್.ಜಿ.ದೊಡ್ಡಿ, ಮಿಲನ ರಮೇಶ್, ದಿವ್ಯ, ಅಭಿನಯ, ಭಾಸ್ಕರ್, ಅನುಪಮ, ಮೈಕೋ ದೇವರಾಜ್, ಆನಂದ್ ಪಟೇಲ್ ಹುಲಿಕಟ್ಟೆ, ಅನಿಲ್‌ಗೌಡ್ರು, ಕುಮಾರ ಗೌಡ್ರು, ವಿ.ಬೆಟ್ಟೇಗೌಡ, ನಾಗರಾಜ್ ಎಂ.ಜಿ. ಗೌಡ, ದೇವು ಹಾಸನ್, ಸಂಜಯ್, ಪ್ರಜ್ವಲ್, ರಮೇಶ್ ಗೌಡ್ರು, ಚೇತನ್ ಮುಂತಾದವರಿದ್ದಾರೆ.
ರಘು ಎಸ್. ಈ ಚಿತ್ರದ ನಿರ್ಮಾಪಕರಾಗಿದ್ದು, ಮಂಜು ಡಿ.ಟಿ, ಸಿದ್ದಮ್ಮ ಕಂಬಾರ, ಮಾಂತೇಶ ನೀಲಪ್ಪ ಚೌಹಾಣ್, ವಿ.ಬೆಟ್ಟೇಗೌಡ ಸಹನಿರ್ಮಾಪಕರಾಗಿ ಕೈಜೋಡಿಸಿದ್ದಾರೆ. ವೆಂಕಿ ಯು.ಡಿ.ವಿ.ಅವರ ಸಂಕಲನ. ವಿನಯ್‌ಗೌಡ ಅವರ ಛಾಯಾಗ್ರಹಣ, ಪ್ರವೀಣ್ ನಿಕೇತನ, ವಿಶಾಲ್ ಆಲಾಪ್ ಅವರ ಸಂಗೀತ, ಮಂಜು ಮಹದೇವ್ ಅವರ ಹಿನ್ನೆಲೆ ಸಂಗೀತ, ಡಾ.ವಿ.ನಾಗೇಂದ್ರ ಪ್ರಸಾದ್, ವಿಶಾಲ್ ಆಲಾಪ ಗೀತಾ ಆನಂದ್ ಪಟೇಲ್ ಅವರ ಸಾಹಿತ್ಯ, ಕೌರವ ವೆಂಕಟೇಶ್, ಚಂದ್ರು ಬಂಡೆ ಅವರ ಸಾಹಸ, ಹೈಟ್ ಮಂಜು, ಬಾಲ ಮಾಸ್ಟರ್, ಸೂರಿ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
ಇದನ್ನೂ ಓದಿ: ಬಾಲಿವುಡ್ಗೆ ಕಾಲಿಟ್ಟ 'ಕಾಂತಾರ' ನಟಿ: ದಿ ವ್ಯಾಕ್ಸಿನ್ ವಾರ್ ಚಿತ್ರದಲ್ಲಿ ಸಪ್ತಮಿ ಗೌಡ