ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ದಕ್ಷಿಣ ಭಾರತದ ಸಿನಿಮಾ ಮಾತ್ರವಲ್ಲದೇ ಬಾಲಿವುಡ್ ಹೊಸ ಸಿನಿಮಾಗಳಲ್ಲೂ ಬ್ಯುಸಿಯಾಗಿರುವ ನಟಿ. 'ಪುಷ್ಪ' ಯಶಸ್ಸಿನ ನಂತರ ರಶ್ಮಿಕಾ ಮಂದಣ್ಣ ಅವರಿಗೆ ಸಾಲು ಸಾಲು ಅವಕಾಶಗಳು ಹರಿದು ಬರುತ್ತಿವೆ. ತೆಲುಗು, ತಮಿಳಿನ ಹೊರತಾಗಿ ಹಿಂದಿಯಲ್ಲೂ ದೊಡ್ಡ ಪ್ರಾಜೆಕ್ಟ್ಗಳನ್ನು ಬಾಚಿಕೊಳ್ಳುತ್ತಿದ್ದಾರೆ. ಇದೀಗ ಬಾಲಿವುಡ್ನ ಹೊಸ ಪ್ರಾಜೆಕ್ಟ್ ಒಂದಕ್ಕೆ ಸಹಿ ಮಾಡಿದ್ದಾರೆಂದು ಹೇಳಲಾಗುತ್ತಿದೆ. ಅಧಿಕೃತ ಘೋಷಣೆ ಒಂದೇ ಬಾಕಿ.
ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಅಭಿನಯದ ಗುಡ್ ಬೈ ಸಿನಿಮಾ ಈಗಾಗಲೇ ಶೂಟಿಂಗ್ ಮುಗಿಸಿದೆ. ಅರ್ಜುನ್ ರೆಡ್ಡಿ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಅನಿಮಲ್ ಚಿತ್ರದಲ್ಲಿ ರಶ್ಮಿಕಾ ನಾಯಕಿ. ಭೂಲ್ ಭುಲಯ್ಯ ನಾಯಕ ಕಾರ್ತಿಕ್ ಆರ್ಯನ್ ಎದುರು ಹೊಸ ಪ್ರಾಜೆಕ್ಟ್‌ಗೆ ಸಹಿ ಹಾಕಿದ್ದಾರೆ ಎಂದು ವರದಿಯಾಗಿದೆ. ಅದ್ಧೂರಿ ಬಜೆಟ್‌ನಲ್ಲಿ ಆ್ಯಕ್ಷನ್, ರೋಮ್ಯಾಂಟಿಕ್ ಡ್ರಾಮಾ ಆಗಿ ಈ ಹೊಸ ಚಿತ್ರ ತಯಾರಾಗಲಿದೆ. ಹೊಸ ಪ್ರಾಜೆಕ್ಟ್‌ಗೆ ಕಾರ್ತಿಕ್ ಆರ್ಯನ್ ಸಹ ಓಕೆ ಅಂದಿದ್ದಾರಂತೆ. ಸಂಪೂರ್ಣ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಚಿತ್ರ ಮೂಲಗಳು ಸೋಮವಾರ ತಿಳಿಸಿವೆ.
ಗುಡ್ ಬೈ, ಅನಿಮಲ್, ಮಿಷನ್ ಮಜ್ನು ಚಿತ್ರಗಳಲ್ಲಿ ಬಣ್ಣ ಹಚ್ಚಿರುವ ನಟಿ ರಶ್ಮಿಕಾ ಮಂದಣ್ಣ ಹೊಸ ಪ್ರಾಜೆಕ್ಟ್ಗಳಿಗೆ ಸಹಿ ಹಾಕಿರುವುದು ಘೋಷಣೆಯಾದರೆ ಅದು ಅವರ ನಾಲ್ಕನೇ ಬಾಲಿವುಡ್ ಚಿತ್ರವಾಗಲಿದೆ. ಮೂರು ಹಿಂದಿ ಸಿನಿಮಾಗಳಲ್ಲಿ ಗುಡ್ ಬೈ, ಅನಿಮಲ್ ಬಿಡುಗಡೆಗೆ ಸಜ್ಜಾಗಿವೆ.
ಇದನ್ನೂ ಓದಿ: ಬ್ರಹ್ಮಾಸ್ತ್ರ ಭಾಗ 2ರಲ್ಲಿ ಮಿಂಚಲಿದ್ದಾರೆ ದೀಪಿಕಾ ರಣ್ವೀರ್
ಭೂಲ್ ಭುಲಯ್ಯ 2 ಚಿತ್ರದಿಂದ ಕಾರ್ತಿಕ್ ಆರ್ಯನ್ ಯಶಸ್ವಿಯಾಗಿದ್ದಾರೆ. ಈ ಗೆಲುವಿನ ಅಲೆಯಲ್ಲಿರುವ ಅವರು ಹೊಸ ಚಿತ್ರ ಒಪ್ಪಿಕೊಂಡಿದ್ದಾರೆ. ಈ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿ ಎನ್ನುವುದು ವಿಶೇಷ. ಈ ಜೋಡಿ ತೆರೆ ಮೇಲೆ ಮಿಂಚು ಹರಿಸಲಿದೆ ಎಂದು ಸೋಶಿಯಲ್ ಮೀಡಿಯಾಗಳಲ್ಲಿ ಸದ್ದಾಗುತ್ತಿದೆ.