ಅದ್ಬುತ ನಟನೆಯಿಂದಲೇ ಅಭಿಮಾನಿಗಳ ಮನ ಗೆದ್ದಿರುವ ಬಾಲಿವುಡ್ ನಟ ರಣದೀಪ್ ಹೂಡಾ ತಮ್ಮ ಪತ್ನಿಯ ಜನ್ಮದಿನಕ್ಕೆ ಪ್ರೀತಿಯ ಶುಭಾಶಯಗಳನ್ನು ಕೋರಿದ್ದಾರೆ. ಥ್ರೋಬ್ಯಾಕ್ ಫೋಟೋದೊಂದಿಗೆ ಲಿನ್ ಲೈಶ್ರಾಮ್ ಅವರಿಗೆ ಬರ್ತ್ಡೇ ವಿಶ್ ಮಾಡಲು ನಟ ಸೋಷಿಯಲ್ ಮೀಡಿಯಾವನ್ನು ವೇದಿಕೆಯನ್ನಾಗಿ ಬಳಸಿಕೊಂಡರು. ಇದು ರಣದೀಪ್ ಹೂಡಾ ಜೊತೆಗಿನ ಮದುವೆ ನಂತರದ ಲಿನ್ ಲೈಶ್ರಾಮ್ ಅವರ ಮೊದಲ ಹುಟ್ಟುಹಬ್ಬವಾಗಿದೆ.
ಪತ್ನಿ ಜೊತೆಗೆ ಬೈಕ್ನಲ್ಲಿ ಕುಳಿತಿರುವ ಫೋಟೋವನ್ನು ಹಂಚಿಕೊಂಡಿರುವ ನಟ, "ನಾನು ಓಡಿಹೋಗಬೇಕಾಗಿಲ್ಲ ದೇವರಿಗೆ ಧನ್ಯವಾದಗಳು. ಹೈವೇಯಿಂದ ಈ ದಾರಿಗೆ ನಾವು ಬಹಳ ದೂರ ಬಂದಿದ್ದೇವೆ. ಜನ್ಮದಿನದ ಶುಭಾಶಯಗಳು ಶ್ರೀಮತಿ. ಜೀವನವು ತುಂಬಾ ಬದಲಾಗುತ್ತದೆ ಮತ್ತು ಅದು ಕೂಡ ಉತ್ತಮವಾಗಿರುತ್ತದೆ ಎಂದು ತಿಳಿದಿರಲಿಲ್ಲ. ನನ್ನ ಜೀವನದಲ್ಲಿ ನೀವು ಇರುವುದಕ್ಕೆ ಮತ್ತು ಅದಕ್ಕೆ ಬೇಕಾದ ದೃಢತೆ ಹಾಗೂ ಶಾಂತತೆಯನ್ನು ನೀಡಿದ್ದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ. ಯಾವಾಗಲೂ ನಿಮ್ಮನ್ನು ಪ್ರೀತಿಸುತ್ತೇನೆ. ಹ್ಯಾಪಿ ಬರ್ತ್ಡೇ ಲಿನ್ #Love" ಎಂದು ಪ್ರೀತಿಯಿಂದ ಶುಭಾಶಯ ಕೋರಿದ್ದಾರೆ.
ನಟ ರಣದೀಪ್ ಮತ್ತು ಲಿನ್ ಲೈಶ್ರಾಮ್ ಇತ್ತೀಚೆಗೆ ಮದುವೆಯಾದ ಜೋಡಿ. ನವೆಂಬರ್ 29ರಂದು ರಣದೀಪ್ ತನ್ನ ಬಹುಕಾಲದ ಗೆಳತಿ ಲಿನ್ ಲೈಶ್ರಮ್ ಅವರನ್ನು ಬಾಳಸಂಗಾತಿಯಾಗಿ ವರಿಸಿದ್ದಾರೆ. ಅಮೋಘ ಅಭಿನಯದ ಮೂಲಕ ಸಿನಿಪ್ರಿಯರ ಗಮನ ಸೆಳೆದಿರುವ ನಟ, ಈ ಹಿಂದೆ ಗೆಳತಿ ಜೊತೆ ಕಾಣಿಸಿಕೊಂಡಿದ್ದರು. ಅವರಿಬ್ಬರು ಸಪ್ತಪದಿ ತುಳಿಯಲಿದ್ದಾರೆ ಎಂದು ಹೇಳಲಾಗಿತ್ತು. ಅದರಂತೆ ಕಳೆದ ತಿಂಗಳ ಕೊನೆಯಲ್ಲಿ ಮಣಿಪುರದ ಇಂಫಾಲ್‌ನಲ್ಲಿ ದಾಂಪತ್ಯ ಬದುಕು ಆರಂಭಿಸಿದ್ದಾರೆ. ಕುಟುಂಬ ಸದಸ್ಯರು ಮತ್ತು ಕೆಲವು ಆಪ್ತೇಷ್ಟರ ಮದುವೆಯಲ್ಲಿ ಭಾಗಿಯಾಗಿದ್ದರು.
ವಿವಾಹಕ್ಕೂ ಮುನ್ನ, 47 ವರ್ಷ ಪ್ರಾಯದ ನಟ ತನ್ನ ಗೆಳತಿ ಲೈಶ್ರಮ್ ಅವರೊಂದಿಗೆ ಮೈತೇಯಿ ಪದ್ಧತಿಗಳ ಪ್ರಕಾರ ಮದುವೆ ಆಗುತ್ತಿರುವ ಕುರಿತಾಗಿ ಉತ್ಸಾಹ ವ್ಯಕ್ತಪಡಿಸಿದ್ದರು. ಅಂತೂ ನ.29ರಂದು ಸನಾಪುಂಗ್ ರೆಸಾರ್ಟ್‌ನಲ್ಲಿ ಈ ಜೋಡಿ ತಮ್ಮ ಬಹುಕಾಲದ ಪ್ರೀತಿಗೆ ಮದುವೆಯೆಂಬ ಮುದ್ರೆ ಒತ್ತಿದ್ದಾರೆ. ಮದುವೆಯಲ್ಲಿ ರಣದೀಪ್ ಹೂಡಾ ಬಿಳಿ ಕುರ್ತಾ-ಪೈಜಾಮಾ ಧರಿಸಿ ಮದುವೆ ಸಂಪ್ರದಾಯಗಳಲ್ಲಿ ಭಾಗಿಯಾಗಿದ್ದರು. ಲಿನ್ ಲೈಶ್ರಮ್ ಸಾಂಪ್ರದಾಯಿಕ ಮಣಿಪುರಿ ಉಡುಗೆಯಲ್ಲಿ ಅದ್ಭುತವಾಗಿ ಕಂಡಿದ್ದರು. ಆಕರ್ಷಕ ಚಿನ್ನಾಭರಣಗಳು ವಧುವಿನ ಸೌಂದರ್ಯ ಹೆಚ್ಚಿಸಿದ್ದವು.
ರಣದೀಪ್ ಮತ್ತು ಲಿನ್ ಬಹಳ ಸಮಯದಿಂದ ಡೇಟಿಂಗ್ ನಡೆಸುತ್ತಿದ್ದರು. ರಣದೀಪ್ ಕೊನೆಯದಾಗಿ ಸರ್ಜೆಂಟ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ನಟನ ಮುಂಬರುವ ಬಹುನಿರೀಕ್ಷಿತ ಚಿತ್ರಗಳು ಸ್ವಾತಂತ್ರ್ಯ ವೀರ್ ಸಾವರ್ಕರ್. ಇದು ಇವರ ನಿರ್ದೇಶನದ ಚೊಚ್ಚಲ ಚಿತ್ರ. ಇವುಗಳ ಹೊರತಾಗಿ, ಅವರು 'ಲಾಲ್ ರಂಗ್ 2: ಖೂನ್ ಚುಸ್ವಾ' ಎಂಬ ಇನ್ನೊಂದು ಚಿತ್ರದಲ್ಲೂ ನಟಿಸುತ್ತಿದ್ದಾರೆ.
ಉಳಿದಂತೆ ಲಿನ್ ಲೈಶ್ರಾಮ್ ಅವರು ಕೂಡ ಉದ್ಯಮಿ, ಮಾಡೆಲ್ ಮತ್ತು ನಟಿಯಾಗಿದ್ದಾರೆ. ಇವರ ಇತ್ತೀಚೆಗೆ ಒಟಿಟಿಯಲ್ಲಿ ಬಿಡುಗಡೆಯಾದ 'ಜಾನೆ ಜಾನ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಕರೀನಾ ಕಪೂರ್ ಜತೆ ಜೈದೀಪ್ ಅಹ್ಲಾವತ್ ಮತ್ತು ವಿಜಯ್ ವರ್ಮಾ ಅವರೊಂದಿಗೆ ನಟಿಸಿದ್ದಾರೆ. ಉಳಿದಂತೆ ಲಿನ್ ಅವರು 'ಓಂ ಶಾಂತಿ ಓಂ', 'ಮೇರಿ ಕೋಮ್', 'ಮಾತೃ ಕಿ ಬಿಜ್ಲಿ ಕಾ ಮಂಡೋಲಾ', 'ರಂಗೂನ್' ಮತ್ತು 'ಆಕ್ಸನ್' ನಂತಹ ಚಿತ್ರಗಳಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: ಬಹುಕಾಲದ ಗೆಳತಿಯೊಂದಿಗೆ ಕಾಣಿಸಿಕೊಂಡ 'ಸ್ವತಂತ್ರ ವೀರ್ ಸಾವರ್ಕರ್' ಚಿತ್ರದ ನಟ : ಮತ್ತೆ ಮದುವೆ ವಿಚಾರ ಮುನ್ನೆಲೆಗೆ