ಕೆಜಿಎಫ್ 2 ನಂತರ ಕನ್ನಡ ಚಿತ್ರರಂಗದಿಂದ ಭಾರಿ ನಿರೀಕ್ಷೆ ಮೂಡಿಸಿದ್ದ ಪ್ಯಾನ್ ಇಂಡಿಯಾ ಸಿನಿಮಾ ಎಂದರೆ ಅದು 777 ಚಾರ್ಲಿ. ಜೂನ್ 10 ರಂದು ವಿಶ್ವದಾದ್ಯಂತ ಏಕಕಾಲಕ್ಕೆ ಬಿಡುಗಡೆಯಾಗಿ, ಇಂದಿಗೂ ಭರ್ಜರಿಯಾಗಿ ಮುನ್ನುಗ್ಗುತ್ತಿರುವ ಸೂಪರ್ ಹಿಟ್ ಸಿನಿಮಾ. ರಕ್ಷಿತ್ ಶೆಟ್ಟಿ ಹಾಗೂ ಚಾರ್ಲಿ ಎಂಬ ಶ್ವಾನದ ನಟನೆ, ಪ್ರೇಕ್ಷಕರನ್ನು ಥಿಯೇಟರ್ಗೆ ಕರೆತರುವಲ್ಲಿ ಯಶಸ್ವಿಯಾಗಿದೆ. ಸದ್ಯ 25 ದಿನ ಪೂರೈಸಿರುವ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಕಮಾಲ್ ಮಾಡಿದೆ.
ಪರಭಾಷೆ ಸಿನಿಮಾ ಬಿಡುಗಡೆ ಆಗಿದ್ದರೂ ಚಾರ್ಲಿಯ ಓಟ ಮಾತ್ರ ನಿಂತಿಲ್ಲ. ಸದ್ಯ ಚಿತ್ರ 25 ದಿನ ಪೂರೈಸಿದ ಹಿನ್ನೆಲೆಯಲ್ಲಿ ಚಿತ್ರ ತಂಡ ಕೇಕ್ ಕಟ್ ಮಾಡಿ ಸಂಭ್ರಮಾಚರಣೆ ಮಾಡಿದರು. ನಟ ರಕ್ಷಿತ್ ಶೆಟ್ಟಿ, ನಿರ್ದೇಶಕ ಕಿರಣ್ ರಾಜ್, ಸಿನಿಮಾ ವಿತರಕ ಕಾರ್ತೀಕ್ ಗೌಡ, ನಟಿ ಸಂಗೀತಾ ಶೃಂಗೇರಿ, ಬೇಬಿ ಶಾರ್ವರಿ, ಸಂಗೀತ ನಿರ್ದೇಶಕ ನೊಬಿನ್ ಪೌಲ್, ಕ್ಯಾಮರಾಮ್ಯಾನ್ ಅರವಿಂದ್ ಕಶ್ಯಪ್ ಹಾಗೂ ಚಾರ್ಲಿ ಶ್ವಾನದ ಟ್ರೈನರ್ ಹೇಮಂತ್ ಅವರು ಸಿನಿಮಾದ ಸಕ್ಸಸ್ ಖುಷಿ ಹಂಚಿಕೊಂಡರು.
150 ಕೋಟಿ ಕಲೆಕ್ಷನ್: ನನ್ನ ಸಿನಿಮಾ ಕೆರಿಯರ್ನಲ್ಲಿ ಚಾರ್ಲಿ 777 ಬಹಳ, ವಿಶೇಷವಾದ ಸಿನಿಮಾ. ಯಾಕೆಂದರೆ ಈ ಸಿನಿಮಾ 450ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಯಶಸ್ವಿ 25 ದಿನಗಳಲ್ಲಿ ಪೂರೈಯಿಸಿದೆ. ಅಷ್ಟೇ ಅಲ್ಲ, ಇವತ್ತಿಗೂ ಎಲ್ಲ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಇದು ನಮ್ಮ ಐದು ವರ್ಷದ ಕನಸಿನ ಸಿನಿಮಾ. ಕರ್ನಾಟಕ, ತೆಲುಗು, ತಮಿಳು, ಮಲೆಯಾಳಂ, ಹಿಂದಿ ಹಾಗೂ ವಿದೇಶಗಳಲ್ಲಿನ ಗಳಿಕೆ ಮತ್ತು ಟಿವಿ ರೈಟ್ಸ್, ಡಿಜಿಟಲ್ ರೈಟ್ಸ್ ಸೇರಿ ಬರೋಬ್ಬರಿ 150 ಕೋಟಿ ಕಲೆಕ್ಷನ್ ಮಾಡಿದೆ. ಇದರಲ್ಲಿ 90 ರಿಂದ 100 ಕೋಟಿ ನಿರ್ಮಾಪಕರ ಕೈಗೆ ಲಾಭ ಸಿಗಲಿದೆ ಎಂದು ಕಲೆಕ್ಷನ್ ಬಗ್ಗೆ ನಟ ಹಾಗೂ ನಿರ್ಮಾಪಕ ರಕ್ಷಿತ್ ಶೆಟ್ಟಿ ಹಂಚಿಕೊಂಡರು.
ಹಾಗೆಯೇ ಚಾರ್ಲಿ ಸಿನಿಮಾದಿಂದ ಆದ ಲಾಭದಲ್ಲಿ ಸಿನಿಮಾದ ಕ್ಲೈಮಾಕ್ಸ್ನಲ್ಲಿ ತೋರಿಸಿರುವ ಹಾಗೆ ಚಾರ್ಲಿ ಹೆಸರಲ್ಲಿ ಭಾರತದ್ಯಾಂತ ಇರುವ ಬೀದಿ ನಾಯಿಗಳ ಪರವಾಗಿ ಕೆಲಸ ಮಾಡುವ ಸಂಸ್ಥೆಗಳಿಗೆ ಇದರಿಂದ ಹಣ ಕೊಡ್ತಾ ಇದ್ದೀವಿ. ಚಾರ್ಲಿ ಹೆಸರಲ್ಲಿ ಬ್ಯಾಂಕ್ನಲ್ಲಿ 5 ಕೋಟಿ ಹಣ ಠೇವಣಿ ಇಟ್ಟು, ಅದರಿಂದ ಬರುವ ಬಡ್ಡಿ ಹಣದಿಂದ ಎನ್ಜಿಒಗಳಿಗೆ ಕೊಡಲು ನಿರ್ಧಾರ ಮಾಡಿದ್ದೀವಿ ಎಂದು ತಿಳಿಸಿದರು.
(ಇದನ್ನೂ ಓದಿ: ಥಿಯೇಟರ್ನಲ್ಲಿ ರಾಖಿ ಜೊತೆ 'ಚಾರ್ಲಿ' ವೀಕ್ಷಣೆ: ಜನಾರ್ದನ ರೆಡ್ಡಿ ಭಾವುಕ ಪೋಸ್ಟ್)
ಕಳೆದ ಐದು ವರ್ಷಗಳಿಂದ ಈ ಸಿನಿಮಾಕ್ಕಾಗಿ ಕೆಲಸ ಮಾಡಿದ ತಂತ್ರಜ್ಞರು, ಸೆಟ್ ಬಾಯ್ಸ್, ಕಲಾವಿದರೆಲ್ಲರಿಗೂ ಸೇರಿ 10 ಕೋಟಿ ರೂಪಾಯಿ ಹಣ ಕೊಡುವ ಮೂಲಕ ಚಾರ್ಲಿ 777 ಸಿನಿಮಾದ ಸಕ್ಸಸ್ ಆಚರಣೆ ಮಾಡ್ತಾ ಇದ್ದೀವಿ ಎಂದು ನಟ ರಕ್ಷಿತ್ ಶೆಟ್ಟಿ ಹೇಳಿದರು.
ವಿದೇಶದಲ್ಲೂ ಡಿಮ್ಯಾಂಡ್: ಈ ಸಿನಿಮಾದ ವಿತರಕ ಕಾರ್ತಿಕ್ ಗೌಡ ಮಾತನಾಡಿ, ಈ ಸಿನಿಮಾಗೆ ಕರ್ನಾಟಕ ಅಲ್ಲದೇ ವಿದೇಶಗಳಲ್ಲೂ ಬಾರಿ ಡಿಮ್ಯಾಂಡ್ ಇದೆ. ಇವತ್ತಿಗೂ ಅಮೆರಿಕ, ಆಸ್ಟ್ರೇಲಿಯಾ, ದುಬೈನ ಚಿತ್ರಮಂದಿರಗಳಲ್ಲಿ ದಿನಕ್ಕೆ ಎರಡು ಶೋಗಳು ಪ್ರದರ್ಶನ ಆಗುತ್ತಿವೆ. ವಿದೇಶಗಳಲ್ಲೂ ಚಾರ್ಲಿ 777 ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ ಎಂದರು.