ಸಿನಿಮಾ ಹೀರೋ ಅಂದ್ರೆ ಆರಡಿ ಹೈಟ್, ಕಟ್ಟುಮಸ್ತಾದ ಮೈಕಟ್ಟು, ಹಾಡುಗಳಿಗೆ ಮಸ್ತ್ ಡ್ಯಾನ್ಸ್, ಸಾಹಸ ದೃಶ್ಯಗಳಲ್ಲಿ ಜಬರ್‌ದಸ್ತ್ ಫೈಟ್, ಖಡಕ್ ಡೈಲಾಗ್ ಹೊಡೆಯಲೇಬೇಕು... ಹೀಗೆ ನಾನಾ ತೆರನಾದ ಸೂತ್ರಗಳು ಇನ್ನೂ ಸಿನಿಮಾರಂಗದಲ್ಲಿ ಚಾಲ್ತಿಯಲ್ಲಿವೆಯೇನೋ?. ಆದ್ರೆ, ಇವೆಲ್ಲಕ್ಕಿಂತಲೂ ಹೆಚ್ಚಾಗಿ ಒಂದೊಳ್ಳೆ ಕಥೆಯೇ ಹೀರೋ ಎಂದು ಚೊಚ್ಚಲ ಚಿತ್ರದಲ್ಲೇ ಪ್ರೂವ್ ಮಾಡಿದ ನಟ ರಾಜ್ ಬಿ. ಶೆಟ್ಟಿ. 'ಗರುಡ ಗಮನ ವೃಷಭವಾಹನ' ಚಿತ್ರದ ಬಳಿಕ ಟೋಬಿ ಅವತಾರದಲ್ಲಿ ವರಮಹಾಲಕ್ಷ್ಮಿ ಹಬ್ಬದಂದೇ ರಾಜ್ ಬಿ.ಶೆಟ್ಟಿ ಸಿಲ್ವರ್ ಸ್ಕ್ರಿನ್ ಮೇಲೆ ಅಬ್ಬರಿಸಿದ್ದಾರೆ.
ಟೋಬಿ ಸಿನಿಮಾ ಬಿಡುಗಡೆ: 'ನಾನು ನೋಡಲು ಸಿಂಪಲ್, ಆದ್ರೆ ನನ್ನಲ್ಲಿ ಒಬ್ಬ ಮಾಸ್ ನಟನಿದ್ದಾನೆ' ಅನ್ನೋದನ್ನು ರಾಜ್ ಬಿ.ಶೆಟ್ಟಿ ಮತ್ತೊಮ್ಮೆ ಟೋಬಿ ಚಿತ್ರದಲ್ಲಿ ಸಾಬೀತುಪಡಿಸಿದ್ದಾರೆ. ಟ್ರೇಲರ್ನಿಂದ ಸಾಕಷ್ಟು ಕುತೂಹಲ ಮೂಡಿಸಿದ್ದ ಟೋಬಿ ಇದೀಗ ರಾಜ್ಯಾದ್ಯಾಂತ ಬಿಡುಗಡೆಯಾಗಿ ಸಿನಿರಸಿಕರಿಂದ ಅದ್ಭುತ ರೆಸ್ಪಾನ್ಸ್ ಪಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆ.ಜಿ ರಸ್ತೆಯಲ್ಲಿರುವ ನರ್ತಕಿ ಚಿತ್ರಮಂದಿರಕ್ಕೆ ರಾಜ್ ಬಿ.ಶೆಟ್ಟಿ, ನಟಿಯರಾದ ಚೈತ್ರಾ ಆಚಾರ್, ಸಂಯುಕ್ತಾ ಹೊರನಾಡು ಮತ್ತು ಇಡೀ ಚಿತ್ರತಂಡ ಆಗಮಿಸಿ ಪ್ರೇಕ್ಷಕರ ಜೊತೆ ಸಿನಿಮಾ ನೋಡಿ ಎಂಜಾಯ್ ಮಾಡಿದರು.
ಟೋಬಿ ಮಾರಿ ಆಗೋ ಕಥೆ: ಒಬ್ಬ ಮುಗ್ಧ ಹುಡುಗ ಸಮಾಜದಲ್ಲಿ ಹೇಗೆ ಕೆಟ್ಟವನಾಗಿ ಬೆಳೆಯುತ್ತಾನೆ ಎಂಬ ಕಥೆ ಒಳಗೊಂಡ ಸಿನಿಮಾ ಟೋಬಿ. ತಮಗೆ ಅನ್ಯಾಯ ಮಾಡಿದ ದುಷ್ಟನ ವಿರುದ್ಧ ಸೇಡು ತೀರಿಸಿಕೊಳ್ಳಲು ಟೋಬಿ ಹೇಗೆ ಮಾರಿ ಆಗ್ತಾನೆ ಅನ್ನೋದು ಚಿತ್ರದ ಒನ್ ಲೈನ್ ಸ್ಟೋರಿ. ಟೋಬಿ ಅಂದರೆ ಹರಕೆ ಕುರಿಗೆ ಕರೆಯುವ ಹೆಸರು. ಟೋಬಿ ಎಂಬ ಹೆಸರನ್ನು ಏಕೆ ರಾಜ್ ಬಿ.ಶೆಟ್ಟಿ ಅವರಿಗೆ ಕರೆಯುತ್ತಾರೆ ಅನ್ನೋದನ್ನು ತಿಳಿಯಲು ನೀವು ಚಿತ್ರಮಂದಿರದಲ್ಲೇ ಸಿನಿಮಾ ನೋಡಬೇಕು.
ಮೂಗುತಿ ಚುಚ್ಚಿಸಿಕೊಂಡು ಅಭಿನಯ: ಚಿತ್ರದಲ್ಲಿ ರಾಜ್ ಬಿ.ಶೆಟ್ಟಿ ಅದ್ಭುತವಾಗಿ ನಟಿಸಿದ್ದಾರೆ. ಎರಡು ಆ್ಯಕ್ಷನ್ ಸೀನ್ಗಳಿದ್ದು ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಂದ ಚಪ್ಪಾಳೆ, ಶಿಳ್ಳೆ ಗಿಟ್ಟಿಸಿಕೊಳ್ಳುತ್ತಿವೆ. ಒಂದು ಅಚ್ಚರಿ ಅಂದ್ರೆ ರಾಜ್ ಶೆಟ್ರು ಮಾತು ಬರದವರ ಪಾತ್ರದಲ್ಲಿ ಅಮೋಘ ಅಭಿನಯ ತೋರಿದ್ದಾರೆ. ಮೂರು ಶೇಡ್ಗಳಲ್ಲಿ ಕಾಣಿಸಿಕೊಂಡಿರುವ ಶೆಟ್ರು, ಪ್ರೇಕ್ಷಕರನ್ನು ರಂಜಿಸುವ ದೃಷ್ಟಿಯಿಂದ ರಿಯಲ್ ಆಗಿ ಮೂಗಿಗೆ ಮೂಗುತಿ ಚುಚ್ಚಿಸಿಕೊಂಡು ಅಭಿನಯ ಚಾತುರ್ಯ ಮೆರೆದಿದ್ದಾರೆ. ಇದನ್ನು ಗಮನಿಸಿದ್ರೆ ನಟನ ಡೆಡಿಕೇಶನ್ ಎಂಥದ್ದು ಅನ್ನೋದು ಗೊತ್ತಾಗುತ್ತದೆ ಅನ್ನೋದು ಪ್ರೇಕ್ಷಕರ ಅಭಿಪ್ರಾಯ.
ಅಭಿನಯ ಅದ್ಭುತ: ರಾಜ್ ಬಿ.ಶೆಟ್ಟಿ ಮಗಳ ಪಾತ್ರದಲ್ಲಿ ಚೈತ್ರಾ ಆಚಾರ್ ಕೂಡ ಪ್ರೇಕ್ಷಕರ ಮನಗೆದ್ದಿದ್ದಾರೆ. ಸಂಯುಕ್ತಾ ಹೊರನಾಡು ವೇಶ್ಯೆಯ ಪಾತ್ರಕ್ಕೆ ಜೀವ ತುಂಬಿದ್ದಾರೆ. ಖಳ ನಟನಾಗಿ ದೀಪಕ್ ಶೆಟ್ಟಿ ಗಮನ ಸೆಳೆದಿದ್ದಾರೆ. ಗೋಪಾಲ್ ದೇಶಪಾಂಡೆ ಕೂಡ ಕೊಟ್ಟ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಆದ್ರೆ ಸಿನಿಮಾದ ಅವಧಿ ಸ್ವಲ್ಪ ಜಾಸ್ತಿ ಅನಿಸುತ್ತಿದೆ.
ಇದನ್ನೂ ಓದಿ: ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಗಟ್ಟಿಮೇಳ ಧಾರಾವಾಹಿಯ ವೇದಾಂತ್: ಆ್ಯಕ್ಷನ್ ಕಟ್ ಹೇಳಲಿದ್ದಾರೆ ಜೇಮ್ಸ್ ಡೈರೆಕ್ಟರ್
ಕ್ಯಾಮರಾಮ್ಯಾನ್ ಪ್ರವೀಣ್ ಶ್ರೀಯನ್ ಮಂಗಳೂರಿನ ಸುಂದರ ತಾಣಗಳನ್ನು ಬಹಳ ಚೆನ್ನಾಗಿ ಚಿತ್ರೀಕರಿಸಿದ್ದಾರೆ. ಮಿಥುನ್ ಮುಕುಂದನ್ ಸಂಗೀತದ ಜೊತೆಗೆ ಹಿನ್ನೆಲೆ ಸಂಗೀತ ಚಿತ್ರಕ್ಕೆ ಪ್ಲಸ್ ಪಾಯಿಂಟ್. ಟಿ.ಕೆ.ದಯಾನಂದ್ ಕಥೆ ಬರೆದಿದ್ದು, ರಾಜ್ ಬಿ.ಶೆಟ್ಟಿ ರಚನೆ ಮತ್ತು ಬಾಸಿಲ್ ಅವರ ನಿರ್ದೇಶನವಿದೆ. ಲೈಟರ್ ಬುದ್ಧ ಫಿಲ್ಮ್ಸ್, ಅಗಸ್ತ್ಯ ಫಿಲ್ಮ್ಸ್ ಹಾಗೂ ಕಾಫಿ ಗ್ಯಾಂಗ್ ಸ್ಟುಡಿಯೋ ಲಾಂಛನದಡಿ ರವಿ ರೈ ಕಳಸ ಸಿನಿಮಾ ನಿರ್ಮಾಣ ಮಾಡಿದ್ದಾರೆ. ನೀವು ಕೊಟ್ಟ ದುಡ್ಡಿಗೆ ಮೋಸ ಆಗುವುದಿಲ್ಲ ಅನ್ನೋದು ಈಗಾಗಲೇ ಸಿನಿಮಾ ನೋಡಿದ ಪ್ರೇಕ್ಷಕರ ಅಭಿಪ್ರಾಯ.
ಇದನ್ನೂ ಓದಿ: 2ನೇ ಮಗುವಿನ ನಿರೀಕ್ಷೆಯಲ್ಲಿ ಧ್ರುವ ಸರ್ಜಾ ದಂಪತಿ - ಸ್ಪೆಷಲ್ ಪೋಸ್ಟ್ ಶೇರ್ ಮಾಡಿದ ಆ್ಯಕ್ಷನ್ ಪ್ರಿನ್ಸ್