ಗ್ಲ್ಯಾಮರ್ ಹಾಗೂ ಆ್ಯಕ್ಷನ್ ಸಿನಿಮಾಗಳಿಂದಲೇ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟಿ ರಾಗಿಣಿ ದ್ವಿವೇದಿ. ತುಪ್ಪದ ಬೆಡಗಿ ಅಂತಾನೇ ಫೇಮಸ್ ಈ ವೈಯಾರಿ. ಕೆಲ ವೈಯಕ್ತಿಕ ವಿಚಾರಗಳಿಂದ ಬಹಳ ನೊಂದಿದ್ದ ಅವರು ಪ್ರಸ್ತುತ ಬಹುಭಾಷಾ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಸದ್ಯ ಕನ್ನಡ, ತಮಿಳು, ಮಲೆಯಾಳಂ ಹಾಗೂ ಹಿಂದಿ ಸಿನಿಮಾಗಳಲ್ಲಿ ಅಭಿನಯಿಸುತ್ತಿರುವ ರಾಗಿಣಿ ದ್ವಿವೇದಿ ಕ್ಯಾಚೀ ಟೈಟಲ್ ಹೊಂದಿರುವ ಬಿಂಗೊ ಸಿನಿಮಾದಲ್ಲಿ ನಟಿಸುತ್ತಿರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವೇ. ಸದ್ಯ ಬಿಂಗೊ ಚಿತ್ರದ ಶೂಟಿಂಗ್ ಬೆಂಗಳೂರಿನಲ್ಲಿ ಭರದಿಂದ ಸಾಗಿದೆ. ಇದೀಗ ರಾಗಿಣಿ ದ್ವಿವೇದಿ ಲುಕ್ ಅನಾವರಣಗೊಂಡಿದ್ದು, ಸಖತ್ ಬೋಲ್ಡ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಎರಡು ಶೇಡ್ನಲ್ಲಿ ರಾಗಿಣಿ ದ್ವಿವೇದಿ: ವಿಭಿನ್ನ ಕಥಾಹಂದರ ಹೊಂದಿರುವ ಈ ಬಿಂಗೊ ಚಿತ್ರದ ಪ್ರಮುಖ ಪಾತ್ರದಲ್ಲಿ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಎರಡು ಶೇಡ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕನಾಗಿ ಆರ್ ಕೆ ಚಂದನ್ ನಟಿಸುತ್ತಿದ್ದಾರೆ. ಈಗಾಗಲೇ ಎರಡು ಹಂತಗಳ ಚಿತ್ರೀಕರಣ ಮುಗಿಸಿರುವ " ಬಿಂಗೊ" ಚಿತ್ರತಂಡ ಮೂರನೇ ಹಂತದ ಚಿತ್ರೀಕರಣವನ್ನು ಬೆಂಗಳೂರಿನಲ್ಲಿ ನಡೆಸುತ್ತಿದೆ. ನಗರದ ಹೊರವಲಯದಲ್ಲಿರುವ ದೇವರಾಜ್ ಎಸ್ಟೇಟ್ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ರಾಗಿಣಿ ದ್ವಿವೇದಿ, ಆರ್ ಕೆ ಚಂದನ್ ಹಾಗೂ ಚಿತ್ರದಲ್ಲಿ ಅಭಿನಯಿಸಿರುವ ಬಹುತೇಕ ಕಲಾವಿದರು ಈ ಹಂತದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.
ಆರು ಮುಖ್ಯ ಪಾತ್ರಗಳ ಸಿನಿಮಾ: ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಎಂದು ಹೇಳಬಹುದು. ಚಿತ್ರದಲ್ಲಿ ಆರು ಮುಖ್ಯ ಪಾತ್ರಗಳಿರುತ್ತವೆ. ಅದರಲ್ಲಿ ಅತೀ ಮುಖ್ಯ ಪಾತ್ರದಲ್ಲಿ ರಾಗಿಣಿ ದ್ವಿವೇದಿ ಅಭಿನಯಿಸುತ್ತಿದ್ದಾರೆ. ಆರ್ ಕೆ ಚಂದನ್ ನಾಯಕನಾಗಿ, ರಕ್ಷಾ ನಿಂಬರ್ಗಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ರಾಜೇಶ್ ನಟರಂಗ, ಪವನ್ ಮಜಾ ಟಾಕೀಸ್, ಮುರಳಿ ಪೂರ್ವಿಕ್, ಅಪೂರ್ವ, ಆಶಾ ಸುಜಯ್, ಶ್ರವಣ್, ವಿದ್ಯಾ, ಕುಮಾರ್ ಮುಂತಾದ ಕಲಾವಿದರು ಬಿಂಗೊ ಚಿತ್ರದಲ್ಲಿ ಪಾತ್ರ ವಹಿಸಿದ್ದಾರೆ.
ಇದನ್ನೂ ಓದಿ: ಇಂದೋರ್ ಮನೆಗೆ ವಿರಾಟ್ ಪತ್ನಿ ಭೇಟಿ: ಬಾಲ್ಯದ ದಿನಗಳನ್ನು ಮೆಲುಕು ಹಾಕಿದ ಅನುಷ್ಕಾ ಶರ್ಮಾ
ಶೀಘ್ರದಲ್ಲೇ ಶೂಟಿಂಗ್ ಕಂಪ್ಲೀಟ್: ಈ ಚಿತ್ರಕ್ಕೆ ಹಿತನ್ ಹಾಸನ್ ಸಂಗೀತವಿದ್ದು, ಛಾಯಾಗ್ರಾಹಕ ನಟರಾಜ್ ಮುದ್ದಾಲ್ ಛಾಯಾಗ್ರಹಣ ಇರಲಿದೆ. ಆರ್.ಕೆ ಸ್ಟುಡಿಯೋಸ್ ಮತ್ತು ಮುತರಾ ವೆಂಚರ್ಸ್ ಲಾಂಛನದಲ್ಲಿ ಲಲಿತಾಸ್ವಾಮಿ ಮತ್ತು ಆರ್ ಪರಾಂಕುಶ ಬಿಂಗೊ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಶೀಘ್ರದಲ್ಲಿ ಬಿಂಗೊ ಚಿತ್ರೀಕರಣ ಮುಗಿಸಿ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಹಾಕಿಕೊಂಡಿದೆ.
ಇದನ್ನೂ ಓದಿ: 'ನೋವಿನಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ': ಅಮಿತಾಭ್ ಬಚ್ಚನ್
ವಿಭಿನ್ನ ಪಾತ್ರದಲ್ಲಿ ತುಪ್ಪದ ಬೆಡಗಿ: ನನ್ನ ಪಾತ್ರ ಬಹಳ ಚೆನ್ನಾಗಿದೆ. ಪಾತ್ರದ ಕುರಿತು ಹೆಚ್ಚು ಹೇಳುವ ಹಾಗಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಮಾತನಾಡುತ್ತೇನೆ. ಈ ಹಿಂದೆ ಮಾಡಿರುವ ಪಾತ್ರಗಳಿಗಿಂತ ಇದು ಕೊಂಚ ಭಿನ್ನ. ಹೊಸ ನಿರ್ದೇಶಕರ ಜೊತೆ ಕೆಲಸ ಮಾಡಲು ಉತ್ಸುಕಳಾಗಿದ್ದೇನೆ ಎಂದು ನಟಿ ರಾಗಿಣಿ ದ್ವಿವೇದಿ ಈ ಹಿಂದೆ ತಿಳಿಸಿದ್ದರು. ಒಟ್ಟಿನಲ್ಲಿ ಕನ್ನಡ ಚಿತ್ರರಂಗ ಸಕ್ಸಸ್ ವೇನಲ್ಲಿ ಮುನ್ನುಗ್ಗುತ್ತಿದ್ದು, ಡಿಫ್ರೆಂಟ್ ಟೈಟಲ್ನ ಈ ಚಿತ್ರ ಹೆಚ್ಚಿನವರ ಗಮನ ಸೆಳೆದಿದೆ.