ಬಹುಭಾಷಾ ನಟ ನಟಿಯರು ಕನ್ನಡ ಚಿತ್ರರಂಗ ಪ್ರವೇಶಿಸೋದು ಬ್ಲ್ಯಾಕ್ ಅಂಡ್ ವೈಟ್ ಕಾಲದಿಂದಲೂ ಇದೆ. ಗ್ಲ್ಯಾಮರ್ ಜೊತೆಗೆ ಟ್ಯಾಲೆಂಟ್ ಇರುವ ನಟಿಮಣಿಯರು ಚಂದನವನಕ್ಕೆ ಆಗಮಿಸುತ್ತಾರೆ. ಲವ್ ಮಾಕ್ಟೇಲ್ 2 ಚಿತ್ರದ ಮೂಲಕ ಕನ್ನಡಿಗರ ಮನ ಗೆದ್ದಿರುವ ನಟಿ ರೆಚೆಲ್ ಡೇವಿಡ್. ಮೂಲತಃ ಬೆಂಗಳೂರಿನವರಾದರೂ ಮೊದಲ ಸಿನಿಮಾ ಬಂದಿದ್ದು ಮಲಯಾಳಂನಲ್ಲಿ. ಕನ್ನಡದ ಲವ್ ಮಾಕ್ಟೇಲ್ 2 ಚಿತ್ರದ ಬಳಿಕ ರೆಚೆಲ್ ಡೇವಿಡ್ ನಟ ಅನಿರುದ್ಧ್ ಜತ್ಕರ್ ಅಭಿನಯಿಸುತ್ತಿರುವ ''chef ಚಿದಂಬರ'' ಸಿನಿಮಾದ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಕುರಿತು ಪ್ರೇಕ್ಷಕರು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.
ಶೀರ್ಷಿಕೆಯಿಂದಲೇ ಪ್ರೇಕ್ಷಕರ ಗಮನ ಸೆಳೆದಿರುವ 'chef ಚಿದಂಬರ' ಸಿನಿಮಾ ಸದ್ದಿಲ್ಲದೇ ಚಿತ್ರೀಕರಣ ಮುಗಿಸಿದೆ. ಶೀಘ್ರ ಬಿಡುಗಡೆಗೆ ಚಿತ್ರತಂಡ ಸಿದ್ಧತೆ ನಡೆಸುತ್ತಿದೆ. ಎಂ. ಆನಂದರಾಜ್ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ "ಅನು" ಎಂಬ ಪಾತ್ರದಲ್ಲಿ ರೆಚೆಲ್ ಡೇವಿಡ್ ಕಾಣಿಸಿಕೊಳ್ಳಲಿದ್ದಾರೆ. ನಟಿಯ ಪಾತ್ರವನ್ನು ಪರಿಚಯಿಸುವ ಪೋಸ್ಟರ್ ಅನ್ನು ಇತ್ತೀಚಿಗೆ ಚಿತ್ರತಂಡ ಬಿಡುಗಡೆ ಮಾಡಿದೆ.
ಚಿತ್ರದ ತಾರಾಬಳಗ ಹೀಗಿದೆ; ಈ ಚಿತ್ರದಲ್ಲಿ ಅನಿರುದ್ಧ್ ಜತ್ಕರ್ ಅವರಿಗೆ ನಾಯಕಿಯರಾಗಿ ನಿಧಿ ಸುಬ್ಬಯ್ಯ ಹಾಗೂ ರೆಚೆಲ್ ಡೇವಿಡ್ ಅಭಿನಯಿಸಿದ್ದಾರೆ. ನಿಧಿ ಸುಬ್ಬಯ್ಯ ಪಾತ್ರದ ಕ್ಯಾರೆಕ್ಟರ್ ಪೋಸ್ಟರ್ ಅನ್ನೂ ಚಿತ್ರತಂಡ ಇತ್ತೀಚೆಗೆ ರಿವೀಲ್ ಮಾಡಿತ್ತು. ಇವರ ಜೊತೆಗೆ ಶರತ್ ಲೋಹಿತಾಶ್ವ, ಕೆ.ಎಸ್ ಶ್ರೀಧರ್, ಶಿವಮಣಿ ಸೇರಿದಂತೆ ಮೊದಲಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.
ಇದನ್ನೂ ಓದಿ: ಸಸ್ಪೆನ್ಸ್ ಥ್ರಿಲ್ಲರ್ ಕಥೆಯಲ್ಲಿ ಬಿಗ್ ಬಾಸ್ ಖ್ಯಾತಿಯ ಶೃತಿ ಪ್ರಕಾಶ್
ಡಾರ್ಕ್ ಕಾಮಿಡಿ ಜಾನರ್ನ ಈ ಚಿತ್ರದಲ್ಲಿ ಅನಿರುದ್ಧ್ 'chef' ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ದಮ್ತಿ ಪಿಕ್ಚರ್ಸ್ ಲಾಂಛನದಲ್ಲಿ ರೂಪ ಡಿ.ಎನ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ನಿರ್ದೇಶಕರೇ ಕಥೆ ಬರೆದಿದ್ದು, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಗಣೇಶ್ ಪರಶುರಾಮ್ ಬರೆದಿದ್ದಾರೆ. ಉದಯಲೀಲ ಛಾಯಾಗ್ರಹಣ, ರಿತ್ವಿಕ್ ಮುರಳಿಧರ್ ಸಂಗೀತ ನಿರ್ದೇಶನ, ವಿಜೇತ್ ಚಂದ್ರ ಅವರ ಸಂಕಲನ, ವಿಕ್ರಾಂತ್ ರೋಣ ಖ್ಯಾತಿಯ ಆಶಿಕ್ ಕುಸುಗೊಳ್ಳಿ ಡಿ.ಐ, ನರಸಿಂಹಮೂರ್ತಿ ಅವರ ಸಾಹಸ ನಿರ್ದೇಶನ ಹಾಗೂ ಮಾಧುರಿ ಪರಶುರಾಮ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
ಇದನ್ನೂ ಓದಿ: 500 ಕೋಟಿ ರೂ. ಗಡಿ ದಾಟಿದ ಪ್ರಭಾಸ್ ಮೂರನೇ ಸಿನಿಮಾ 'ಸಲಾರ್'
ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರುವ "chef ಚಿದಂಬರ" ಸದ್ಯದಲ್ಲೇ ತೆರೆ ಮೇಲೆ ರಾರಾಜಿಸಲಿದ್ದಾನೆ. ಈಗಾಗಲೇ ಪೋಸ್ಟರ್, ಕ್ಯಾರೆಕ್ಟರ್ ಟೀಸರ್ ಮೂಲಕ ಮನೆಮಾತಾಗಿರುವ ಈ ಚಿತ್ರದ ಬಿಡುಗಡೆಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಹೆಚ್ಚಿನ ಅಪ್ಡೇಟ್ಸ್ ಕೊಡುವಂತೆ ಬೇಡಿಕೆ ಇಡುತ್ತಿದ್ದಾರೆ.