ಸ್ಯಾಂಡಲ್ವುಡ್ನಲ್ಲಿ ಚಿತ್ರೀಕರಣ ಶುರುವಾದಾಗಿನಿಂದಲೂ, ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಿಸಿರುವ ಚಿತ್ರಗಳಲ್ಲಿ 'ಅನ್‌ಲಾಕ್ ರಾಘವ' ಕೂಡ ಒಂದು. ಈ ಸಿನಿಮಾ ಈಗಾಗಲೇ ಡಬ್ಬಿಂಗ್ ಮುಗಿಸಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸ ಭರದಿಂದ ಸಾಗುತ್ತಿದೆ. ವಿಶೇಷವೆಂದರೆ ಈ ಸಿನಿಮಾದ ಫೈಟ್‌ಗಳು ಈಗಾಗಲೇ ಎಲ್ಲರ ಗಮನ ಸೆಳೆದಿದೆ.
ಯುವ ನಟ ಮಿಲಿಂದ್ ಗೌತಮ್ ಹಾಗೂ ರೇಚಲ್ ಡೇವಿಡ್ ಮುಖ್ಯ ಭೂಮಿಕೆಯಲ್ಲಿರುವ 'ಅನ್‌ಲಾಕ್ ರಾಘವ' ಚಿತ್ರದ ಹಾಡಿನಲ್ಲಿ ಫೈಟ್ ಸಿಕ್ವೇನ್ಸ್ ಅನ್ನು ಶೂಟ್ ಮಾಡಲಾಗಿದೆ. ಈ ಚಿತ್ರದಲ್ಲಿ ನಾಲ್ಕೂವರೆ ಫೈಟ್ಗಳಿವೆ. ಈ ಅರ್ಧ ಫೈಟ್ ಒಂದು ಹಾಡಿನ ನಡುವೆ ಬರುತ್ತದೆ. ಈ ಬಗ್ಗೆ ನಿರ್ದೇಶಕ ದೀಪಕ್ ಮಧುವನಹಳ್ಳಿ, ಹಾಡಿನಲ್ಲಿ ಹೇಗೆ ಆಕ್ಷನ್ ಸನ್ನಿವೇಶನ್ನು ಬಳಸಿಕೊಂಡರು ಎಂಬ ಬಗ್ಗೆ ಮಾಹಿತಿ ನೀಡಿದ್ದಾರೆ.
"ಚಿತ್ರಕತೆಯ ಹಂತದಲ್ಲಿ ಈ ಹಾಡನ್ನು ನಾವು ಸೇರಿಸಿರಲಿಲ್ಲ. ಬಳಿಕ ಆ ಸೀಕ್ವೆನ್ಸ್ನಲ್ಲಿ ಒಂದು ಹಾಡಿದ್ದರೆ ಹೇಗೆ ಎಂಬ ಆಲೋಚನೆ ಬಂತು. ಅದನ್ನು ಇನ್ ಕಾರ್ಪೋರೇಟ್ ಮಾಡಿದಾಗ ಈ ಸೀಕ್ವೆನ್ಸ್ ತುಂಬಾ ಬ್ಯೂಟಿಫುಲ್ ಆಗಿ ಮೂಡಿ ಬಂದಿದೆ. ನಮ್ಮ ಚಿತ್ರದಲ್ಲಿ ಅಭಿನಯಿಸಿರುವ ಎಲ್ಲ ಕಲಾವಿದರು ಡಬ್ಬಿಂಗ್ ಸಮಯದಲ್ಲಿ ಆ ಹಾಡನ್ನು ನೋಡಿ ಬಹಳ ಮೆಚ್ಚಿದ್ದಾರೆ. ಜೊತೆಗೆ ಆ ಹಾಡು, ಸಿನಿಮಾದ ಟ್ರಂಪ್ ಕಾರ್ಡ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
"ಈ ಆಲೋಚನೆಗೆ ಸಾಥ್ ಕೊಟ್ಟ ನಿರ್ಮಾಪಕರಾದ ಮಂಜುನಾಥ ಡಿ ಅವರು, ಸಂಗೀತ ನಿರ್ದೇಶಕರಾದ ಅನೂಪ್ ಸೀಳಿನ್, ಡಿಒಪಿ ಲವಿತ್, ಸಾಹಸ ನಿರ್ದೇಶಕರಾದ ಅರ್ಜುನ್ ಮಾಸ್ಟರ್, ನೃತ್ಯ ನಿರ್ದೇಶಕರಾದ ಮುರುಳಿ ಮಾಸ್ಟರ್, ಎಡಿಟರ್ ಅಜಯ್ ಎಲ್ಲರಿಗೂ ತುಂಬಾ ಥ್ಯಾಂಕ್ಸ್. ಕಾಂತಾರ ಸಿನಿಮಾದ ವರಾಹ ರೂಪಂ ಹಾಡನ್ನು ಹಾಡಿರುವ ಸಾಯಿ ವಿಘ್ನೇಶ್ ಈ ಹಾಡನ್ನು ಹಾಡಿರುವುದು ಮತ್ತೊಂದು ವಿಶೇಷ" ಎಂದಿದ್ದಾರೆ.
"ಎಡಿಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್‌ಗೆ ಹೋಗುವ ಮುನ್ನ ಅನ್‌ಲಾಕ್ ರಾಘವ ಸಿನಿಮಾವನ್ನು ನೋಡಿರುವ ಚಲನಚಿತ್ರ ನಿರ್ಮಾಪಕರು ಹಾಗೂ ಚಿತ್ರತಂಡ ಸಂತೋಷ ಪಟ್ಟಿದ್ದಾರೆ. ಈ ವರ್ಷದ ನಿರೀಕ್ಷಿತ ಚಲನಚಿತ್ರಗಳಲ್ಲಿ ನಮ್ಮ ಅನ್‌ಲಾಕ್ ರಾಘವ ಸಿನಿಮಾ ಸೇರುವುದರಲ್ಲಿ ಯಾವುದೇ ಸಂಶಯ ಇಲ್ಲ" ಎಂದು ನಿರ್ಮಾಪಕರು ಹರ್ಷ ವ್ಯಕ್ತಪಡಿಸಿದ್ದಾರೆ.
"ಇಡೀ ಸಿನಿಮಾದಲ್ಲಿ ನಾಯಕರಾದ ಮಿಲಿಂದ್ ಗೌತಮ್ ಅವರು ತುಂಬಾ ಹ್ಯಾಂಡ್ಸಮ್ ಆಗಿ ಮಿಂಚಿದ್ದಾರೆ. ಬಹಳ ಮುಖ್ಯವಾಗಿ ಸಾಹಸ ಸೀಕ್ವೆನ್ಸ್ ಗಳನ್ನು ನೋಡಿದಾಗ ನಮ್ಮ ಕನ್ನಡಕ್ಕೆ ಪ್ರಾಮಿಸಿಂಗ್ ಕಮರ್ಷಿಯಲ್ ಹೀರೋ ಆಗುವುದರಲ್ಲಿ ಅನುಮಾನವೇ ಇಲ್ಲ. ಜೊತೆಗೆ ಬ್ಯೂಟಿಫುಲ್ ಆಗಿರೋ ನಾಯಕಿ ರೇಚಲ್ ಡೇವಿಡ್ ಅವರೊಂದಿಗಿನ ಎಲ್ಲ ಸೀನ್‌ಗಳು ಮ್ಯಾಜಿಕಲ್ ಆಗಿ ಮೂಡಿಬಂದಿವೆ" ಎನ್ನುತ್ತಿದೆ ಚಿತ್ರತಂಡ.
ಚಿತ್ರದಲ್ಲಿ ಮಿಲಿಂದ್ ಗೌತಮ್ ಹಾಗೂ ರೇಚಲ್ ಡೇವಿಡ್ ಜೊತೆಗೆ ಸಾಧುಕೋಕಿಲ, ಅವಿನಾಶ್, ಶೋಭರಾಜ್, ರಮೇಶ್ ಭಟ್, ವೀಣಾ ಸುಂದರ್, ಸುಂದರ್, ಧರ್ಮಣ್ಣ ಕಡೂರು, ಸಾಯಿ ಕುಡ್ಲ, ಭೂಮಿ ಶೆಟ್ಟಿ, ಮೂಗು ಸುರೇಶ್, ಅಥರ್ವ ಪ್ರಕಾಶ್, ಶ್ರೀದತ್ತ, ಬೃಂದಾ ವಿಕ್ರಮ್ ಮೊದಲಾದವರು ನಟಿಸಿದ್ದಾರೆ.
ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಸತ್ಯಪ್ರಕಾಶ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದು, ಲವಿತ್ ಛಾಯಾಗ್ರಾಹಣ, ಅನೂಪ್ ಸೀಳಿನ್ ಸಂಗೀತ, ಅಜಯ್ ಕುಮಾರ್ ಸಂಕಲನ ಚಿತ್ರಕ್ಕಿದೆ. ಮುರಳಿ ಮಾಸ್ಟರ್ ಹಾಗೂ ಧನಂಜಯ್ ಮಾಸ್ಟರ್ ನೃತ್ಯ ನಿರ್ದೇಶನದಲ್ಲಿ ಹಾಡುಗಳು ಮೂಡಿ ಬಂದಿದ್ದು, ವಿನೋದ್ ಮಾಸ್ಟರ್ ಮತ್ತು ಅರ್ಜುನ್ ಮಾಸ್ಟರ್ ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದಾರೆ. ಮಯೂರ ಮೋಷನ್ ಪಿಕ್ಚರ್ಸ್ ಬ್ಯಾನರ್ ಅಡಿ ಮಂಜುನಾಥ ಡಿ ಹಾಗೂ ಗಿರೀಶ್ ಕುಮಾರ್ ಜಂಟಿಯಾಗಿ ನಿರ್ಮಿಸುತ್ತಿದ್ದು, ದೀಪಕ್ ಮಧುವನಹಳ್ಳಿ ನಿರ್ದೇಶಿಸಿದ್ದಾರೆ.
ಇದನ್ನೂ ಓದಿ: Vamana: 'ವಾಮನ' ಚಿತ್ರದ 'ಮುದ್ದು ರಾಕ್ಷಸಿ' ಹಾಡು ಬಿಡುಗಡೆ