ಭಾರತೀಯ ಚಿತ್ರರಂಗದಲ್ಲಿ ಬಿಗ್ ಬಜೆಟ್ ಸಿನಿಮಾಗಳು ನಿರ್ಮಾಣಗೊಳ್ಳುತ್ತಿವೆ. ತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿರುವ ವಿಶ್ವದ ಅತಿ ದೊಡ್ಡ ಚಿತ್ರನಗರಿ ''ರಾಮೋಜಿ ಫಿಲ್ಮ್ ಸಿಟಿ''ಯಲ್ಲಿ ಬಿಗ್ ಬಜೆಟ್ ಚಿತ್ರಗಳ ಚಿತ್ರೀಕರಣ ಚುರುಕುಗೊಂಡಿದೆ. ಬಹುನಿರೀಕ್ಷಿತ ಸಿನಿಮಾಗಳ ಶೂಟಿಂಗ್ ಜೊತೆ ಜೊತೆಗೆ ಪ್ರವಾಸಿಗರ ಆಗಮನದಿಂದ ರಾಮೋಜಿ ಫಿಲ್ಮ್ ಸಿಟಿ ಜಗಮಗಿಸುತ್ತಿದೆ.
ಒಂದೆಡೆ ರಾಷ್ಟ್ರಪ್ರಶಸ್ತಿ ವಿಜೇತ ಅಲ್ಲು ಅರ್ಜುನ್ ಹಾಗೂ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ 2 ಚಿತ್ರದ ಶೂಟಿಂಗ್ ದೃಶ್ಯಗಳಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಮತ್ತೊಂದೆಡೆ, ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅಭಿನಯದ 'ಸಲಾರ್' ತಂಡ ಕೂಡ ಶೂಟಿಂಗ್ನಲ್ಲಿ ಬ್ಯುಸಿಯಾಗಿದೆ. ಇವೆರಡೂ ಕೂಡ ಭಾರತೀಯ ಚಿತ್ರರಂಗದ ಮುಂದಿನ ಬಹುನಿರೀಕ್ಷಿತ, ಬಿಗ್ ಬಜೆಟ್ ಸಿನಿಮಾಗಳು.
'ಪುಷ್ಪ 2: ದಿ ರೂಲ್' ಸಿನಿಮಾದಲ್ಲಿ ಜಾತ್ರೆಯ ಹಿನ್ನೆಲೆಯಲ್ಲಿ ಮೂಡಿಬರುವ ಹಾಡಿನ ಚಿತ್ರೀಕರಣದಲ್ಲಿ ತಂಡ ಬ್ಯುಸಿಯಾಗಿದೆ ಎಂದು ಮೂಲಗಳು ತಿಳಿಸಿವೆ. ಹಾಡಿನಲ್ಲಿ ಸುಮಾರು ಸಾವಿರ ನೃತ್ಯಗಾರರು ಇದ್ದಾರೆ ಎಂದು ತಿಳಿದು ಬಂದಿದೆ. 'ಪುಷ್ಪ 2' ಹಾಡಿಗೆ ಖ್ಯಾತ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ನೃತ್ಯ ನಿರ್ದೇಶನ ಮಾಡುತ್ತಿದ್ದಾರೆ. ರಾಮೋಜಿ ಫಿಲ್ಮ್ ಸಿಟಿಯಲ್ಲಿ ಒಂದು ತಿಂಗಳ ಶೆಡ್ಯೂಲ್ ಹಾಕಿಕೊಳ್ಳಲಾಗಿದ್ದು, ಹಾಡಿನ ಜೊತೆ ಜೊತೆಗೆ ಫೈಟ್ ಮತ್ತು ಕೆಲ ಪ್ರಮುಖ ದೃಶ್ಯಗಳನ್ನು ಸಹ ಚಿತ್ರೀಕರಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಈ ಹಿಂದೆಯೂ ಪುಷ್ಪ 2 ಶೂಟಿಂಗ್ ಅನ್ನು ರಾಮೋಜಿ ಫಿಲ್ಮ್ ಸಿಟಿಯಲ್ಲಿಯೇ ನಡೆಸಲಾಗಿದೆ.
ಪುಷ್ಪ 2 ದಿ ರೂಲ್ ಸಿನಿಮಾಗೆ ಸುಕುಮಾರ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇದು 2021ರ ಬ್ಲಾಕ್ಬಸ್ಟರ್ ಹಿಟ್ ಪುಷ್ಪ ದಿ ರೈಸ್ ಚಿತ್ರದ ಮುಂದುವರಿದ ಭಾಗ. ಮೈತ್ರಿ ಮೂವೀ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ನವೀನ್ ಎರ್ನೇನಿ ಮತ್ತು ವೈ ರವಿಶಂಕರ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ದೇವಿಶ್ರೀಪ್ರಸಾದ್ ಸಂಗೀತ ಸಂಯೋಜಿಸಿದ್ದಾರೆ.
ಇದನ್ನೂ ಓದಿ: ಕಾರ್ತಿಕ್ ಆರ್ಯನ್ ಜೊತೆ ಬ್ರೇಕ್ಅಪ್ ವದಂತಿ: ಸಾರಾ ಅಲಿ ಖಾನ್ ಹೇಳಿದ್ದಿಷ್ಟು!
ಇನ್ನೂ 'ಸಲಾರ್' ಸೂಪರ್ ಸ್ಟಾರ್ ಪ್ರಭಾಸ್ ಅಭಿನಯದ ಬಹು ನಿರೀಕ್ಷಿತ ಚಿತ್ರ. ಚಿತ್ರವನ್ನು ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶಿಸುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್ ನಿರ್ಮಿಸುತ್ತಿರುವ 'ಸಲಾರ್' ಸಿನಿಮಾದ ಶೂಟಿಂಗ್ ಕೂಡ ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆಯುತ್ತಿದೆ. ಬಹುತೇಕ ಚಿತ್ರೀಕರಣ ಮುಗಿದಿದ್ದು, ಕೆಲ ದೃಶ್ಯಗಳಷ್ಟೇ ಬಾಕಿ ಇವೆ. ಸಿಮ್ರತ್ ಕೌರ್ ಮುಖ್ಯಭೂಮಿಕೆಯಲ್ಲಿ ಸ್ಪೆಷಲ್ ಸಾಂಗ್ ಶೂಟಿಂಗ್ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. ಈ ಹಾಡಿಗೆ ರಾಜು ಸುಂದರಂ ಮಾಸ್ಟರ್ ನೃತ್ಯ ನಿರ್ದೇಶನ ಮಾಡುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಈ ಚಿತ್ರದಲ್ಲಿ ಶ್ರುತಿ ಹಾಸನ್ ನಾಯಕಿಯಾಗಿ ಮತ್ತು ಪೃಥ್ವಿರಾಜ್ ಖಳನಾಯಕನಾಗಿ ನಟಿಸಿದ್ದಾರೆ. ಡಿಸೆಂಬರ್ 22 ರಂದು ಸಿನಿಮಾ ಬಿಡುಗಡೆಯಾಗಲಿದ್ದು, ಶಾರುಖ್ ಖಾನ್ ಅವರ ಡಂಕಿ ಸಿನಿಮಾ ಜೊತೆ ಪೈಪೋಟಿ ನಡೆಸಲಿದೆ.
ಇದನ್ನೂ ಓದಿ: ಮೊಣಕಾಲು ಶಸ್ತ್ರಚಿಕಿತ್ಸೆ: ಇಟಲಿಯಿಂದ ಹೈದರಾಬಾದ್ಗೆ ಮರಳಿದ ಸಲಾರ್ ನಟ ಪ್ರಭಾಸ್