ಕನ್ನಡ ಚಿತ್ರರಂಗದ ಯುವರತ್ನ ಪುನೀತ್ ರಾಜ್ಕುಮಾರ್ ನಮ್ಮನ್ನಗಲಿ ಒಂದು ವರ್ಷ ಕಳೆದಿದೆ. ಪರಮಾತ್ಮನನ್ನು ವಿವಿಧ ರೂಪದಲ್ಲಿ ಸ್ಮರಿಸುವ ಕಾರ್ಯ ಆಗುತ್ತಿದೆ. ಇದೀಗ ಕಾಂತಾರ ಕಲ್ಪನೆಯಲ್ಲಿ ಅಪ್ಪು ಅರಳಿದ್ದಾರೆ. ಅಭಿಮಾನಿಗಳ ಅಪ್ಪು ಕಾಂತಾರ ಕಲ್ಪನೆಯನ್ನು ಕಂಡು ದೊಡ್ಮೆನೆ ಮಂದಿ ಭಾವುಕರಾಗಿದ್ದಾರೆ.
ಕಾಂತಾರ ಕನ್ನಡ ಚಿತ್ರರಂಗವನ್ನು ಉತ್ತುಂಗಕ್ಕೇರಿಸಿದ ಚಿತ್ರ. ನಿರೀಕ್ಷೆಗೂ ಮೀರಿ ಯಶಸ್ಸು ಸಾಧಿಸಿದ ಸಿನಿಮಾವಿದು. ಈ ಪಾತ್ರದಲ್ಲಿ ರಿಷಬ್ ಬಿಟ್ಟು ಬೇರೆ ಯಾರು ಸೂಕ್ತ ಎನಿಸುತ್ತದೆ ಎಂಬ ಪ್ರಶ್ನೆಗೆ, ಪುನೀತ್ ರಾಜ್ಕುಮಾರ್ ಎಂದು ಕಾಂತಾರ ಸಾರಥಿ ರಿಷಬ್ ಶೆಟ್ಟಿ ಉತ್ತರಿಸಿದ್ದರು. ಇದೀಗ ಕಾಂತಾರ ಸಿನಿಮಾದ ಪಂಜುರ್ಲಿ ದೈವದ ಚಿತ್ರದಲ್ಲಿ ಪುನೀತ್ ರಾಜ್ಕುಮಾರ್ರನ್ನು ಕಲ್ಪಿಸಿಕೊಳ್ಳಲಾಗಿದೆ.
ಅಪ್ಪು ಒಂದು ವೇಳೆ ಕಾಂತಾರ ಸಿನಿಮಾದಲ್ಲಿ ನಟಿಸಿದ್ದರೆ ಹೇಗಿರುತ್ತಿತ್ತು ಎಂದು ಅಭಿಮಾನಿಯೊಬ್ಬರ ಕಲ್ಪನೆಯಲ್ಲಿ ಮೂಡಿಬಂದ ಈ ಪೋಸ್ಟರ್ ಎಲ್ಲೆಡೆ ವೈರಲ್ ಆಗುತ್ತಿದ್ದು, ಕರುನಾಡ ಮಂದಿ ದೈವ ರೂಪದಲ್ಲಿ ಅಪ್ಪುನನ್ನು ಕಂಡು ಕೈಮುಗಿಯುತ್ತಿದ್ದಾರೆ. ಅಪ್ಪು ಅಗಲಿ ಒಂದು ವರ್ಷ ಕಳೆದಿದ್ದು, ಅವರನ್ನು ವಿವಿಧ ರೂಪದಲ್ಲಿ ಕಲ್ಪಿಸಿಕೊಳ್ಳಲಾಗುತ್ತಿದೆ. ಇದೀಗ ಪಂಜುರ್ಲಿ ದೈವ ಹೋಲಿಸಿರೋದನ್ನು ಕಂಡರೆ ಅಭಿಮಾನಿಗಳ ಪ್ರೀತಿ ಎಂಥಹದ್ದು ಎಂದು ಗೊತ್ತಾಗುತ್ತದೆ.
ಇದನ್ನೂ ಓದಿ: ಪುಷ್ಪ ಚಿತ್ರದ ಗಳಿಕೆಯ ದಾಖಲೆ ಮುರಿದ ಕಾಂತಾರ.. ಕರ್ನಾಟಕದಲ್ಲಿ ಒಂದು ಕೋಟಿ ಟಿಕೆಟ್ ಮಾರಾಟ!!
ಇನ್ನೂ ಕಾಂತಾರ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಒಟ್ಟು 350 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಸಿನಿ ಪ್ರೇಕ್ಷಕರು ಈಗಲೂ ಥಿಯೇಟರ್ಗಳಿಗೆ ಮುಗಿಬಿದ್ದು ಈ ಚಿತ್ರವನ್ನು ವೀಕ್ಷಿಸುತ್ತಿದ್ದಾರೆ.