ಬೆಂಗಳೂರು: ವರನಟ ಡಾ.ರಾಜ್ ಕುಮಾರ್ ಕುಟುಂಬದ ಕಿರಿಯ ಪುತ್ರ, ನಟ ಪುನೀತ್ ರಾಜ್‍ಕುಮಾರ್ ಮೃತಪಟ್ಟು ಇಂದಿಗೆ ಎರಡು ವರ್ಷ. 2021ರ ಅಕ್ಟೋಬರ್ 29 ರಂದು ಇವರು ಅಕಾಲಿಕ ಮರಣ ಹೊಂದಿದ್ದು, ಅಂದು ಕರುನಾಡಿಗೆ ಬರಸಿಡಿಲು ಬಡಿದಂತಾಗಿತ್ತು. ಅಪ್ಪು ಇಹಲೋಕ ತ್ಯಜಿಸಿ ಹಲವು ದಿನಗಳೇ ಉರುಳಿದರೂ 'ರಾಜಕುಮಾರ' ಅಭಿಮಾನಿಗಳ ಮನದಲ್ಲಿ ಸದಾ ಜೀವಂತವಾಗಿದ್ದಾರೆ.
ನಗುಮೊಗದ ಒಡೆಯನ 2ನೇ ವರ್ಷದ ಪುಣ್ಯಸ್ಮರಣೆ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿಯಲ್ಲಿ ನಡೆಯಿತು. ರಾಘವೇಂದ್ರ ರಾಜ್ ಕುಮಾರ್ ಕುಟುಂಬ, ಅಶ್ವಿನಿ ಪುನೀತ್ ರಾಜ್‍ಕುಮಾರ್ ಹಾಗೂ ಕಿರಿಯ ಪುತ್ರಿ ವಂದಿತಾ, ಅಕ್ಕಂದಿರಾರ ಲಕ್ಷ್ಮೀ, ಪೂರ್ಣಿಮಾ ಮತ್ತು ವಿನಯ್ ರಾಜ್‍ಕುಮಾರ್, ಯುವ ರಾಜ್‍ಕುಮಾರ್ ಸೇರಿದಂತೆ ಬಂಧು ಮಿತ್ರರು ಆಗಮಿಸಿ ಪೂಜೆ ಸಲ್ಲಿಸಿದರು.
ಅಪ್ಪು ಇಷ್ಟದ ತಿನಿಸು ಅರ್ಪಣೆ: ಅಪ್ಪುಗೆ ಇಷ್ಟವಾದ ಬಿರಿಯಾನಿ, ಡ್ರೈ ಜಾಮೂನ್, ಚಿಕನ್ ಕೂರ್ಮಾ, ಮೊಸರನ್ನ, ಉದ್ದಿನ ವಡೆ ಸೇರಿದಂತೆ ಕೆಲ ಸಿಹಿ ತಿನಿಸುಗಳನ್ನಿಟ್ಟು ಪೂಜೆ ನೆರವೇರಿಸಲಾಯಿತು.
ಪುನೀತ್ ರಾಜ್‍ಕುಮಾರ್ ಸ್ಮಾರಕ: ಪುನೀತ್ ರಾಜ್‍ಕುಮಾರ್ 2ನೇ ವರ್ಷದ ಪುಣ್ಯಸ್ಮರಣೆ ಹಿನ್ನೆಲೆ, ಕಂಠೀರವ ಸ್ಟುಡಿಯೋದಲ್ಲಿ ವಿಶೇಷ ಸ್ಮಾರಕ (ಸಮಾಧಿ) ನಿರ್ಮಾಣ ಮಾಡಲಾಗಿದೆ. ರಾಜ್ ಕುಟುಂಬದಿಂದ ಈ ಸ್ಮಾರಕ ನಿರ್ಮಾಣಗೊಂಡಿದೆ. ಕಂಠೀರವ ಸ್ಟುಡಿಯೋದಲ್ಲಿ ತಂದೆ - ವರನಟ ಡಾ. ರಾಜ್‍ಕುಮಾರ್, ತಾಯಿ ಪಾರ್ವತಮ್ಮ ರಾಜ್‍ಕುಮಾರ್ ಸ್ಮಾರಕದ ಬಳಿ ಅಪ್ಪು ಸ್ಮಾರಕ ನಿರ್ಮಾಣಗೊಂಡಿದೆ. ಬಿಳಿ ಮಾರ್ಬಲ್ಸ್ನಲ್ಲಿ ಇದನ್ನು ನಿರ್ಮಾಣ ಮಾಡಲಾಗಿದ್ದು, ಪುನೀತ್ ರಾಜ್‍ಕುಮಾರ್ ಅವರ ಫೋಟೋ ಕೂಡ ಇದೆ. ತಂದೆ ರಾಜ್‍ಕುಮಾರ್ ಸ್ಮಾರಕ ರೀತಿಯಲ್ಲೇ ಪುನೀತ್ ರಾಜ್‍ಕುಮಾರ್ ಸ್ಮಾರಕವೂ ನಿರ್ಮಾಣಗೊಂಡಿದೆ..
ಇದನ್ನೂ ಓದಿ: ಪುನೀತ್ ರಾಜ್‍ಕುಮಾರ್ 2ನೇ ವರ್ಷದ ಪುಣ್ಯಸ್ಮರಣೆ: ಕಂಠೀರವ ಸ್ಟುಡಿಯೋದಲ್ಲಿರುವ ಸಮಾಧಿಗೆ ಕುಟುಂಬಸ್ಥರಿಂದ ಪೂಜೆ
ಪುನೀತ್ ಪಯಣ: ಡಾ. ರಾಜ್‍ಕುಮಾರ್ - ಪಾರ್ವತಮ್ಮ ದಂಪತಿಯ ಕಿರಿಯ ಪುತ್ರ. 1975ರ ಮಾರ್ಚ್ 17 ರಂದು ಚನ್ನೈನಲ್ಲಿ ಜನಿಸಿದರು. ಲೋಹಿತ್ ಇವರ ಮೂಲ ಹೆಸರು. ಬಾಲನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟು, ಬಳಿಕ ಯಶಸ್ವಿ ನಟನಾಗಿ ಚಿತ್ರರಂಗಕ್ಕೆ ಸಾಕ್ಷ್ಟು ಕೊಡುಗೆ ಕೊಟ್ಟಿದ್ದಾರೆ. 'ಅಪ್ಪು' ನಾಯಕನಟನಾಗಿ ಪುನೀತ್ ಅವರ ಚೊಚ್ಚಲ ಚಿತ್ರ. ಸಿನಿಮಾ ಸಾಧನೆ ಮಾತ್ರವಲ್ಲ, ಸಮಾಜ ಸೇವೆ ಕೂಡ ಅಪಾರ. ಕಿರಿವಯಸ್ಸಿನಲ್ಲೇ ಬೆಟ್ಟದಷ್ಟು ಸಾಧನೆ ಮಾಡಿ, ಶೀಘ್ರವೇ ಇಹಲೋಕ ತ್ಯಜಿಸಿಬಿಟ್ಟರು. 2021 ರ ಅಕ್ಟೋಬರ್ 29 ರಂದು ಹೃದಯಾಘಾತದಿಂದ ಇಹಲೋಕ ತ್ಯಜಿಸಿ, ಅಭಿಮಾನಿಗಳ ಕಣ್ಣೀರಿಗೆ ಕಾರಣರಾದರು. ಕನ್ನಡಿಗರೆದೆಯಲ್ಲಿ ಅಪ್ಪು ನೆನಪು ಸದಾ ಜೀವಂತ.
ಇದನ್ನೂ ಓದಿ: ನಗುಮೊಗದ 'ರಾಜಕುಮಾರ'ನ ನೆನೆದು ದೊಡ್ಮನೆ ಕುಟುಂಬ ಭಾವುಕ; ಅಭಿಮಾನಿಗಳ ನಮನ ಫೋಟೋಗಳು