ಸಿನಿಮಾ ಎಂಬ ಗ್ಲ್ಯಾಮರ್ ಪ್ರಪಂಚಕ್ಕೆ ಸಾಕಷ್ಟು ಮಂದಿ ಕಲಾವಿದರು ಬರುತ್ತಾರೆ. ಅವರಲ್ಲಿ ಕೆಲವರು ಮಾತ್ರ ಜನರ ಮನಸ್ಸಲ್ಲಿ ಜಾಗ ಗಿಟ್ಟಿಸಿಕೊಳ್ಳುತ್ತಾರೆ. ಆದರೆ ಸ್ಟಾರ್ ಕಿಡ್ಸ್ ಹಾಗಲ್ಲ. ಅವರು ಅವರು ಹುಟ್ಟುವಾಗಲೇ ಅವರಿಗೆ ಅಭಿಮಾನಿಗಳು ಕೂಡ ಹುಟ್ಟಿಕೊಂಡು ಬಿಡುತ್ತಾರೆ. ಸಿನಿಮಾ, ಡ್ಯಾನ್ಸ್, ಮೇಕಪ್ ಏನೂ ಬೇಕಾಗಿಲ್ಲ. ಕ್ರೇಜ್ ಅನ್ನೋದು ತಾನಾಗಿಯೇ ಅವರನ್ನು ಹಿಂಬಾಲಿಸಿಕೊಂಡು ಬರುತ್ತದೆ. ಇತ್ತೀಚೆಗೆ ಈ ಸ್ಟಾರ್ ಕಿಡ್ಸ್ ಚಿತ್ರರಂಗಕ್ಕೆ ಎಂಟ್ರಿ ಕೊಡೋದು ಟ್ರೆಂಡ್ ಆಗಿಬಿಟ್ಟಿದೆ.
ಇದೀಗ ಮನೆ ದೇವ್ರು, ಹಾಲುಂಡ ತವರು, ಕರುಳಿನ ಕೂಗು ಹೀಗೆ ಹಲವಾರು ಸೂಪರ್ ಹಿಟ್ ಸಿನಿಮಾಗಳ ನಿರ್ಮಾಪಕ ವೈಜಾಕ್ ರಾಜು ಅವರ ಪುತ್ರ ಕಾರ್ತಿಕ್ ರಾಜು 'ಅಥರ್ವ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಸದ್ಯ ಟೈಟಲ್ನಿಂದಲೇ ಸದ್ದು ಮಾಡುತ್ತಿರುವ 'ಅಥರ್ವ' ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿದಿದ್ದು ಬಿಡುಗಡೆಗೆ ಸಜ್ಜಾಗಿದೆ.
ಈ ಬಗ್ಗೆ ಮಾತನಾಡಿರುವ 'ಅಥರ್ವ' ಚಿತ್ರದ ನಿರ್ದೇಶಕ ಮಹೇಶ್ ರೆಡ್ಡಿ, "ನಾನು ಮೂಲತಃ ಸಾಫ್ಟ್‌ವೇರ್ ಎಂಜಿನಿಯರ್. ಅನೇಕ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದೇನೆ. ನಿರ್ದೇಶಕನಾಗಿ ಇದು ನನ್ನ ಚೊಚ್ಚಲ ಚಿತ್ರ. ಕ್ಲೂಸ್ ಡಿಪಾರ್ಟ್ಮೆಂಟ್ ಎಂಬುದು ಪೊಲೀಸ್ ಡಿಪಾರ್ಟ್ಮೆಂಟ್ ವ್ಯಾಪ್ತಿಗೆ ಬರುತ್ತದೆ. ಈ ಕ್ಲೂಸ್ ಡಿಪಾರ್ಟ್ಮೆಂಟ್ ಬಳಸಿಕೊಂಡು ಹೆಚ್ಚಿನ ಸಿನಿಮಾಗಳು ಬಂದಿಲ್ಲ. ನಮ್ಮ ಚಿತ್ರದಲ್ಲಿ ಒಂದು ಕೊಲೆಯ ಸತ್ಯವನ್ನು ತಿಳಿಯಲು ಕ್ಲೂಸ್ ಡಿಪಾರ್ಟ್ಮೆಂಟ್ ಎಷ್ಟು ಮುಖ್ಯ ಎಂಬುದನ್ನು ತೋರಿಸಿದ್ದೇವೆ" ಎಂದು ತಿಳಿಸಿದರು.
ಇದನ್ನೂ ಓದಿ: ಸಿನಿ ಪ್ರೇಮಿಗಳಿಗೆ ಮನರಂಜನೆಯ ಮಹಾಹಬ್ಬ; ಇನ್ನು ಮೂರು ತಿಂಗಳಲ್ಲಿ ಸಾಲು ಸಾಲು ಸಿನಿಮಾಗಳು ತೆರೆಗೆ
ಬಳಿಕ ಯುವ ನಟ ಕಾರ್ತಿಕ್ ರಾಜು ಮಾತನಾಡಿ, "ನಮ್ಮ ತಂದೆ ವೈಜಾಕ್ ರಾಜು, ಕನ್ನಡದಲ್ಲಿ ಸಾಕಷ್ಟು ಯಶಸ್ವಿ ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ನಾನು ತೆಲುಗಿನಲ್ಲಿ ಕೆಲವು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದೇನೆ. ಕನ್ನಡದಲ್ಲಿ ಇದು ಮೊದಲ ಚಿತ್ರ. ಕನ್ನಡ ಚಿತ್ರದಲ್ಲಿ ನಾಯಕನಾಗಿ ನಟಿಸಬೇಕೆಂಬುದು ನನ್ನ ಬಹುದಿನ ಕನಸು. ಅದು ಈಗ ಈಡೇರಿದೆ. ಇದಕ್ಕೂ ಮೊದಲು ನಾನು ಪುನೀತ್ ರಾಜ್ಕುಮಾರ್ ಅವರ ವೀರ ಕನ್ನಡಿಗ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದೆ. ಅಥರ್ವ ಒಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ಮಹೇಶ್ ರೆಡ್ಡಿ ಈ ಚಿತ್ರದ ನಿರ್ದೇಶಕರು. ನುರಿತ ಕಲಾವಿದರು ಹಾಗೂ ತಂತ್ರಜ್ಞರು ಈ ಚಿತ್ರದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಈ ಸಿನಿಮಾ ಪ್ರೇಕ್ಷಕರಿಗೆ ಇಷ್ಟ ಆಗುತ್ತೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ಕಾರ್ತಿಕ್ ರಾಜು ಜೋಡಿಯಾಗಿ ಸಿಮ್ರಾನ್ ಅಭಿನಯಿಸಿದ್ದು, ಸಿನಿಮಾದಲ್ಲಿ ಪತ್ರಕರ್ತೆಯ ಪಾತ್ರ ಮಾಡಿದ್ದಾರೆ. ನಿರ್ಮಾಪಕ ಸುಭಾಷ್ ನೂತಲಪಾಟಿ , ಹಿರಿಯ ನಿರ್ಮಾಪಕ ವೈಜಾಕ್ ರಾಜು ಹಾಗೂ ವಿತರಕ ಮಾರ್ಸ್ ಸುರೇಶ್ ಈ ವೇಳೆ ಉಪಸ್ಥಿತರಿದ್ದರು. ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ನಿರ್ಮಾಣವಾಗಿರುವ 'ಅಥರ್ವ' ಸಿನಿಮಾ ನವೆಂಬರ್ನಲ್ಲಿ ತೆರೆಗೆ ತರಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.
ಇದನ್ನೂ ಓದಿ: ಕಿಚ್ಚ ಸುದೀಪ್ ಫಿಟ್ನೆಸ್ ಸೀಕ್ರೆಟ್ ಏನ್ ಗೊತ್ತಾ? ಅವರೇ ಹೇಳಿದ್ದಾರೆ ನೋಡಿ..