ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಬ್ಲೆಸ್ಸಿ ಆ್ಯಕ್ಷನ್ ಕಟ್ ಹೇಳುತ್ತಿರುವ ಬಹುನಿರೀಕ್ಷಿತ ಸಿನಿಮಾ 'ಆಡುಜೀವಿತಂ'. ಪೃಥ್ವಿರಾಜ್ ಸುಕುಮಾರನ್, ಅಮಲಾ ಪೌಲ್ ತೆರೆ ಹಂಚಿಕೊಂಡಿರುವ 'ಆಡುಜೀವಿತಂ' ಸಿನಿಮಾದ ಟ್ರೇಲರ್ ಈಗಾಗಲೇ ಬಿಡುಗಡೆ ಆಗಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಬಹುತೇಕ ಶೂಟಿಂಗ್ ಮುಗಿಸಿರೋ ಆಡುಜೀವಿತಂ ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ನಾಳೆ ಘೋಷಿಸಲಿದೆ.
ಆಡುಜೀವಿತಂ ಚಿತ್ರದ ಕಥೆ ಕೆಲಸವನ್ನರಸಿ ವಲಸೆ ಹೋಗುವವರ ಸುತ್ತ ಸುತ್ತುತ್ತದೆ. ತಮ್ಮ ಹೊಟ್ಟೆಪಾಡಿಗಾಗಿ ಕೆಲಸ ಅರಸಿ ಸೌದಿ ಅರೇಬಿಯಾಗೆ ವಲಸೆ ಹೋಗುವ ನಜೀಬ್ ಮೊಹಮ್ಮದ್ ಎನ್ನುವ ಕೇರಳದ ವ್ಯಕ್ತಿ ಅಲ್ಲಿ ಅನುಭವಿಸುವ ಕಷ್ಟ, ಎದುರಿಸುವ ಸಮಸ್ಯೆಯೇ ಚಿತ್ರದ ಹೈಲೆಟ್ಸ್. ಆತನ ಪಾಸ್ ಪೋರ್ಟ್ ಕಸಿದು ಆತನಿಗೆ ಕೊಡುವ ಹಿಂಸೆ, ಆ ಬಿಸಿಲ ಪ್ರದೇಶದಲ್ಲಿ ಆತ ಪಡುವ ಯಾತನೆ ಕುರಿತು ಕಥೆ ಸಾಗುತ್ತದೆ.
ನಿರ್ದೇಶಕ ಬ್ಲೆಸ್ಸಿ ಅವರ ಹದಿನೈದು ವರ್ಷಗಳ ಕನಸಿನ ಕಥೆ ಇದು. ಅವರ ಕಲ್ಪನೆಯ ಪಾತ್ರದಲ್ಲಿ, ವಲಸಿಗ ವ್ಯಕ್ತಿಯಾಗಿ ಹೊಸ ಲುಕ್ ಮೂಲಕ ಕಾಣಿಸಿಕೊಂಡಿರುವ ಪೃಥ್ವಿರಾಜ್ ಸುಕುಮಾರನ್ ಅವರು ಈ ಚಿತ್ರಕ್ಕಾಗಿ ಸಾಕಷ್ಟು ದುಡಿದಿದ್ದಾರೆ. ಇಡೀ ಚಿತ್ರತಂಡ ಹಗಲು ರಾತ್ರಿ ಎನ್ನದೇ ಚಿತ್ರದ ಔಟ್ ಪುಟ್ಗಾಗಿ ಶ್ರಮ ವಹಿಸಿದೆ.
ಆಡುಜೀವಿತಂ 2008 ರಲ್ಲಿ ಬೆನ್ಯಾಮಿನ್ ಬರೆದ ಅದೇ ಹೆಸರಿನ ಮಲಯಾಳಂ ಕಾದಂಬರಿ ಆಧರಿಸಿರುವ ಸಿನಿಮಾ. ನಜೀಬ್ ಎಂಬ ವಲಸಿಗ ಕಾರ್ಮಿಕನ ಕಥೆ, ಸೌದಿ ಅರೇಬಿಯಾದ ಮರು ಭೂಮಿಯಲ್ಲಿ ಅವನು ಅನುಭವಿಸುವ ದುಃಸ್ಥಿತಿ ಮತ್ತು ಅಸಹಾಯಕತೆಯ ಕಥೆ ಚಿತ್ರದ ಸಾರಾಂಶ ಎನ್ನುತ್ತದೆ ಚಿತ್ರತಂಡ.
ಇದನ್ನೂ ಓದಿ: ಕನ್ನಡದಲ್ಲೂ ಬಿಡುಗಡೆಯಾಗಲಿದೆ ರಶ್ಮಿಕಾರ 'ಅನಿಮಲ್': ಬೆಂಗಳೂರಿನಲ್ಲಿ ಭರ್ಜರಿ ಪ್ರಚಾರ
ಪೃಥ್ವಿರಾಜ್ ಸುಕುಮಾರನ್ ಅವರು ನಜೀಬ್ ಪಾತ್ರ ನಿರ್ವಹಿಸಿದ್ದಾರೆ. ಈಗಾಗಲೇ ಮರುಭೂಮಿಯಲ್ಲಿ ಆಡುಗಳ ಹಿಂಡಿನ ಮಧ್ಯೆ ಪೃಥ್ವಿರಾಜ್ ಇರುವ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿದ್ದು, ಎಲ್ಲೆಡೆ ಮೆಚ್ಚುಗೆ ಪಡೆದಿದೆ. ನಜೀಬ್ ಪಾತ್ರಕ್ಕಾಗಿ ಪೃಥ್ವಿರಾಜ್ ಸಾಕಷ್ಟು ಶ್ರಮ ವಹಿಸಿದ್ದಾರೆ. ದೇಹ ದಂಡಿಸಿದ್ದಾರೆ. ಈ ಸಿನಿಮಾಗಾಗಿ ಸುಮಾರು 30 ಕೆ.ಜಿ ತೂಕ ಇಳಿಸಿಕೊಂಡಿದ್ದಾರೆ. ಇನ್ನು ಈ ಚಿತ್ರ ಕಳೆದ ಐದು ವರ್ಷಗಳಿಂದ ತಯಾರಾಗುತ್ತಿದೆ.
ಇದನ್ನೂ ಓದಿ: ಮತ್ತೆ ಪ್ರೇಮಕಥೆಯತ್ತ ದಿಯಾ ಹೀರೋ: ಪೃಥ್ವಿ ಅಂಬಾರ್ ಸಿನಿಮಾದ ಶೀರ್ಷಿಕೆಯೇನು?
ಟ್ರೇಲರ್ ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಎ.ಆರ್ ರೆಹಮಾನ್ ಅವರ ಸಂಗೀತ, ಸುನಿಲ್ ಕೆ.ಎಸ್ ಅವರ ಕ್ಯಾಮರಾ ಕೈಚಳಕ, ರೆಸುಲ್ ಪೂಕುಟ್ಟಿ ಅವರ ಸೌಂಡ್ ಡಿಸೈನ್ ಮತ್ತು ಶ್ರೀಕರ್ ಪ್ರಸಾದ್ ಅವರ ಸಂಕಲನ ಈ ಚಿತ್ರಕ್ಕಿದೆ. ಚಿತ್ರ ತೆರೆ ಕಾಣಲು ಸಜ್ಜಾಗಿದ್ದು, ಚಿತ್ರದ ರಿಲೀಸ್ ಡೇಟ್ ಅನ್ನು ನವೆಂಬರ್ 30ರಂದು ಚಿತ್ರತಂಡ ಅನೌನ್ಸ್ ಮಾಡಲಿದೆ.