ಬಿಗ್ ಬಾಸ್ ಶೋ ಬಳಿಕ ಕನ್ನಡಿಗರಿಗೆ ಪರಿಚಿತರಾದ ಪ್ರಥಮ್ ಸಿನಿಮಾ ನಿರ್ದೇಶನದ ಜೊತೆಗೆ ನಾಯಕನಾಗಿ ನಟಿಸುತ್ತಿದ್ದಾರೆ. 'ನಟ ಭಯಂಕರ' ಚಿತ್ರದ ಬಳಿಕ 'ಫಸ್ಟ್ ನೈಟ್ ವಿತ್ ದೆವ್ವದ ಕಥೆ' ಹೇಳೋದಕ್ಕೆ ಸಜ್ಜಾಗಿದ್ದಾರೆ. ಇದು ಪ್ರಥಮ್ ನಟನೆಯ ಮುಂಬರುವ ಸಿನಿಮಾದ ಹೆಸರು. ಪಿ.ವಿ.ಆರ್ ಸ್ವಾಮಿ ಗೂಗಾರದೊಡ್ಡಿ ನಿರ್ದೇಶನದ ಈ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ನೆರವೇರಿತು. ಹಿರಿಯ ನಟ ಶ್ರೀನಿವಾಸ ಮೂರ್ತಿ ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರುವ ಮೂಲಕ ಸಾಥ್ ನೀಡಿದರು.
ಈ ವೇಳೆ ಮಾತನಾಡಿದ ನಟ ಪ್ರಥಮ್, "ಫಸ್ಟ್ ನೈಟ್ ವಿತ್ ದೆವ್ವದ ಕಥೆ' ಹಾರರ್ ವಿತ್ ಕಾಮಿಡಿ ಜಾನರ್ನ ಚಿತ್ರ. ಈ ಸಿನಿಮಾಗೆ ನಾನೇ ಕಥೆ ಬರೆದಿದ್ದೇನೆ. ನನಗೆ ಕಥೆ ಬರೆಯಲು 'ವಿಕ್ರಮ್ ಮತ್ತು ಬೇತಾಳ' ಸ್ಟೋರಿ ಸ್ಫೂರ್ತಿ. ಈಗಾಗಲೇ ಸಾಕಷ್ಟು ಹಾರರ್ ಚಿತ್ರಗಳು ಬಂದಿವೆ. ಆದರೆ ನಾವು ಸ್ವಲ್ಪ ವಿಭಿನ್ನವಾಗಿ ತೋರಿಸುತ್ತಿದ್ದೇವೆ. ನಿಖಿತ ಅವರು ನನ್ನ ಪತ್ನಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಿರಿಯ ನಟರಾದ ಶ್ರೀನಿವಾಸ ಮೂರ್ತಿ, ಸಂಗೀತಾ, ಹರೀಶ್ ರಾಜ್, ತನುಜಾ ಮುಂತಾದವರು ತಾರಾ ಬಳಗದಲ್ಲಿದ್ದಾರೆ. ಮಾನ್ಯ ಸಿಂಗ್ ದೆವ್ವದ ಪಾತ್ರ ಮಾಡುತ್ತಿದ್ದಾರೆ" ಎಂದು ತಿಳಿಸಿದರು.
ಬಳಿಕ ನಿರ್ದೇಶಕ ಪಿ.ವಿ.ಆರ್.ಸ್ವಾಮಿ ಮಾತನಾಡಿ, "ಪ್ರಥಮ್ ಬರೆದಿರುವ ಕಥೆ ಚೆನ್ನಾಗಿದೆ. ನಾನು ಛಾಯಾಗ್ರಹಣದೊಂದಿಗೆ ನಿರ್ದೇಶನವನ್ನು ಮಾಡುತ್ತಿದ್ದೇನೆ. ಇಂದಿನಿಂದ ಬೆಂಗಳೂರಿನಲ್ಲಿ ಚಿತ್ರೀಕರಣ ಆರಂಭವಾಗಿದೆ. ಹಾಡಿನ ಶೂಟಿಂಗ್ ಹೊರ ದೇಶದಲ್ಲಿ ನಡೆಯಲಿದೆ" ಎಂದರು.
'ಫಸ್ಟ್ ನೈಟ್ ವಿತ್ ದೆವ್ವದ ಕಥೆ' ಚಿತ್ರದಲ್ಲಿ ಪ್ರಥಮ್ಗೆ ಜೋಡಿಯಾಗಿ ನಿಖಿತ ಹಾಗೂ ಮಾನ್ಯ ಸಿಂಗ್ ನಟಿಸಲಿದ್ದಾರೆ. ಇವರ ಜೊತೆ ಶ್ರೀನಿವಾಸ ಮೂರ್ತಿ, ಸಂಗೀತ, ಹರೀಶ್ ರಾಜ್, ತನುಜಾ ಸೇರಿದಂತೆ ಸಾಕಷ್ಟು ಕಲಾವಿದರು ಇದ್ದಾರೆ. ಕಥೆ, ಚಿತ್ರಕಥೆಯನ್ನು ಪ್ರಥಮ್ ಬರೆದಿದ್ದಾರೆ. ಅದ್ವಿಕ್ ವರ್ಮ ಸಂಗೀತ ನಿರ್ದೇಶನದ ಜೊತೆಗೆ ಸಂಭಾಷಣೆ ಬರೆಯುತ್ತಿದ್ದಾರೆ. ನಾಗೇಶನ ಸಂಕಲನ ಮಾಡುತ್ತಿದ್ದಾರೆ. ನವೀನ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ತಿಂಗಳಿನಿಂದ ಚಿತ್ರೀಕರಣ ಶುರು ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.
'ನಟ ಭಯಂಕರ'ನಿಗೆ ಮೆಚ್ಚುಗೆ: ಪ್ರಥಮ್ ನಿರ್ದೇಶನದ ಮೊದಲ ಸಿನಿಮಾ 'ನಟ ಭಯಂಕರ'. ಇದು ಭಾರಿ ಅಹಂಕಾರವಿರುವ ಮನುಷ್ಯ ಒಬ್ಬರಿಗೆ ಮಾತು ಕೊಟ್ಟಾಗ ಹೇಗೆ ಬದಲಾಗುತ್ತಾನೆ ಎಂಬುದೇ ಚಿತ್ರದ ಮುಖ್ಯ ಕಥಾವಸ್ತು. ಇನ್ನೊಂದು ಕಡೆ ಸ್ಟುಪಿಡ್ ಸೂಪರ್ ಸ್ಟಾರ್ ಹಾಗೂ ಕುರುಡಿ ದೆವ್ವದ ನಡುವೆ ನಡೆಯುವ ಕಥೆ ಕೂಡ ಅನ್ನಬಹುದು. ಚಿತ್ರದಲ್ಲಿ ಪ್ರಥಮ್ಗೆ ಜೋಡಿಯಾಗಿ ಫ್ರಾನ್ಸ್ ನಿವಾಸಿ ನಿಹಾರಿಕ ಕಾಣಿಸಿಕೊಂಡಿದ್ದಾರೆ. ಪ್ರಮುಖ ಪಾತ್ರವೊಂದರಲ್ಲಿ ಚಂದನ ನಟಿಸಿದ್ದಾರೆ. ಈ ಸಿನಿಮಾ ಬಿಡುಗಡೆಯಾಗಿ ಮೆಚ್ಚುಗೆ ಪಡೆದುಕೊಂಡಿತು.
ಇದನ್ನೂ ಓದಿ: 'ಕರ್ನಾಟಕದ ಅಳಿಯ' ಸಿನಿಮಾ ಹಾಡು ಮೆಚ್ಚಿದ 'ಮುದ್ದಿನ ಅಳಿಯ'