ಪ್ರಜ್ವಲ್ ದೇವರಾಜ್ ಮುಖ್ಯಭೂಮಿಕೆಯ 'ಚೀತಾ' ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಚಿತ್ರಕ್ಕಾಗಿ ನಗರದ ಹೆಚ್.ಎಂ.ಟಿ. ಫ್ಯಾಕ್ಟರಿ ಆವರಣದಲ್ಲಿ ಬೃಹತ್ ಮಾರ್ಕೆಟ್ ಸೆಟ್ ಹಾಕಲಾಗಿದೆ. ನೃತ್ಯ ನಿರ್ದೇಶಕ ರಾಜ ಕಲೈ ಕುಮಾರ್ ಚೊಚ್ಚಲ ಬಾರಿಗೆ ಈ ಸಿನಿಮಾ ನಿರ್ದೇಶಿಸುತ್ತಿದ್ದಾರೆ.
ರಾಜ ಕಲೈ ಕುಮಾರ್ ಮಾತನಾಡಿ, "ಕಳೆದ 23 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಡ್ಯಾನ್ಸರ್ ಆಗಿ, ಡ್ಯಾನ್ಸ್ ಮಾಸ್ಟರ್ ಆಗಿ ಕೆಲಸ ಮಾಡುತ್ತಿದ್ದೇನೆ. ಇದು ನನ್ನ ನಿರ್ದೇಶನದ ಮೊದಲ ಚಿತ್ರ. ನಾನು ನೃತ್ಯ ನಿರ್ದೇಶಕನಾಗಿ ಮೊದಲು ಪ್ರಜ್ವಲ್ ಜೊತೆ ಕೆಲಸ ಮಾಡಿದ್ದೆ. ಈಗ ನನ್ನ ಮೊದಲ ನಿರ್ದೇಶನದ ಚಿತ್ರಕ್ಕೂ ಅವರೇ ನಾಯಕ. ಚೀತಾ ಮಾರುಕಟ್ಟೆಯಲ್ಲೇ ನಡೆಯುವ ಕಥೆ. ಇದು ಮಾರುಕಟ್ಟೆಯಲ್ಲೇ ಹುಟ್ಟಿಬೆಳೆದ ಹುಡುಗನೊಬ್ಬನ ಜೀವನಗಾಥೆಯೂ ಹೌದು. ಪ್ರಜ್ವಲ್ರದ್ದು ಮಾರುಕಟ್ಟೆಯಲ್ಲಿ ನಡೆಯುವ ಅವ್ಯವಹಾರಗಳ ವಿರುದ್ದ ಹೋರಾಟ ಮಾಡುವ ಹೋರಾಟಗಾರನ ಪಾತ್ರ. ಅಲ್ಲಿಯೇ ಬೆಳೆದು ಅಲ್ಲೇ ಇರುವ ಆ ಹುಡುಗನ ಕಂಡರೆ ಅಲ್ಲಿನ ಜನರಿಗೆ ಅಚ್ಚುಮೆಚ್ಚು".
"ಈಗಿನ ಜನರಿಗೆ ಬೇಕಾಗುವ ಎಲ್ಲಾ ರೀತಿಯ ಅಂಶಗಳು ಚಿತ್ರದಲ್ಲಿವೆ. ಕಲಾ ನಿರ್ದೇಶಕ ಶಿವಕುಮಾರ್ ಬೃಹತ್ ಮಾರುಕಟ್ಟೆ ಸೆಟ್ ಹಾಕಿದ್ದಾರೆ. ಸುಮಾರು ಎರಡು ತಿಂಗಳ ಕಾಲ ಇನ್ನೂರಕ್ಕೂ ಅಧಿಕ ಜನರ ಪರಿಶ್ರಮದಲ್ಲಿ ಅದ್ಧೂರಿ ಸೆಟ್ ನಿರ್ಮಾಣವಾಗಿದೆ. ಹೆಚ್ಚಿನ ಚಿತ್ರೀಕರಣ ಇದೇ ಜಾಗದಲ್ಲಿ ನಡೆಯುತ್ತದೆ. ಒಂದು ವಾರಗಳ ಕಾಲ ಮಾತ್ರ ಮೈಸೂರಿನಲ್ಲಿ ಚಿತ್ರೀಕರಣ ಮಾಡಲಿದ್ದೇವೆ. ಹಿರಿಯ ನೃತ್ಯ ನಿರ್ದೇಶಕ ಚಿನ್ನಿಪ್ರಕಾಶ್ ನಮ್ಮ ಚಿತ್ರದ ಪ್ರಮುಖಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ" ಎಂದರು.
"ಚಿತ್ರದಲ್ಲಿ ನಾಯಕಿಯಾಗಿ ಮೇಘ ಶೆಟ್ಟಿ ನಟಿಸುತ್ತಿದ್ದಾರೆ. ಗುರು ಜಗ್ಗೇಶ್, ಶೃತಿ ಹರಿಹರನ್, ರಂಗಾಯಣ ರಘು, ಶಿವರಾಜ್ ಕೆ.ಆರ್.ಪೇಟೆ, ಸಿದ್ಲಿಂಗು ಶ್ರೀಧರ್, ಟೆನ್ನಿಸ್ ಕೃಷ್ಣ, 'ವಾಮನ' ಚಿತ್ರದ ನಿರ್ದೇಶಕ ಶಂಕರ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ದಿನನಿತ್ಯ ಸುಮಾರು 150ರಿಂದ 200 ಜನ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದೇವೆ. ಯಾವುದಕ್ಕೂ ಕೊರತೆ ಇರದ ಹಾಗೆ ನಿರ್ಮಾಣ ಮಾಡುತ್ತಿರುವ ನಿರ್ಮಾಪಕಿ ಪ್ರತಿಭಾ ನರೇಶ್ ಹಾಗೂ ಸಹಕಾರ ನೀಡುತ್ತಿರುವ ಇಡೀ ಚಿತ್ರತಂಡಕ್ಕೆ ಧನ್ಯವಾದ" ಎಂದು ಹೇಳಿದರು.
ಪ್ರಜ್ವಲ್ ದೇವರಾಜ್ ಮಾತನಾಡಿ, "ನಿರ್ದೇಶಕರು ಹೇಳಿದ ಹಾಗೆ ಮಾರ್ಕೆಟ್ನಲ್ಲೇ ಬೆಳೆಯುವ ಹುಡುಗನ ಪಾತ್ರ ನನ್ನದು. ಹಿರಿಯ ನಟರೊಂದಿಗೆ ಕೆಲಸ ಮಾಡುತ್ತಿರುವುದು ಖುಷಿಯಾಗಿದೆ. ಮಾರ್ಕೆಟ್ನಲ್ಲಿ ಎಲ್ಲಾ ಕೆಲಸಗಳು ವೇಗವಾಗಿ ನಡೆಯುತ್ತಿರುತ್ತದೆ. ನನ್ನ ಪಾತ್ರ ಕೂಡ ಅದೇ ರೀತಿ. ಹಾಗಾಗಿ ಚಿತ್ರಕ್ಕೆ 'ಚೀತಾ' ಎಂದು ಹೆಸರಿಡಲಾಗಿದೆ. ಚಿತ್ರದ ಕಥೆ ತುಂಬಾ ಚೆನ್ನಾಗಿದೆ" ಎಂದು ಮಾಹಿತಿ ನೀಡಿದರು.
ಹಿರಿಯ ನೃತ್ಯ ನಿರ್ದೇಶಕ ಚಿನ್ನಿಪ್ರಕಾಶ್ ಸಿನಿಮಾ ಕುರಿತು, "ನಾನು ನಿರ್ದೇಶಕರ ನಟ. ಅವರು ಹೇಳಿದ ಹಾಗೆ ಮಾಡುತ್ತಿದ್ದೇನೆ. ಹಿಂದೆ ತಮಿಳು ಚಿತ್ರವೊಂದರಲ್ಲಿ ನಟಿಸಿದ್ದೆ. ಬಹಳ ದಿನಗಳ ನಂತರ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದೇನೆ" ಎಂದು ತಿಳಿಸಿದರು.
ಗುರು ಪ್ರಸಾದ್ ಛಾಯಾಗ್ರಹಣವಿದೆ. ರಾಜಲಕ್ಷ್ಮಿ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಪ್ರತಿಭಾ ನರೇಶ್ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.
ಇದನ್ನೂ ಓದಿ: 'ಶಭ್ಬಾಷ್' ಮುಹೂರ್ತ: ಶಿಷ್ಯನ ಸಿನಿಮಾಗೆ ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್ ಕ್ಲಾಪ್