ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಚಿತ್ರ ಕೆಜಿಎಫ್-2 ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಚಿತ್ರ ಬಿಡುಗಡೆಗೆ ತಡೆ ಕೋರಿ ಬೆಂಗಳೂರಿನ ಕ್ಯಾನ್ಸರ್ ರೋಗಿಗಳ ನೆರವು ಸಂಘ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಸಿಜೆ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ಅರ್ಜಿ ವಿಚಾರಣೆ ವೇಳೆ ಸರ್ಕಾರದ ಪರ ವಕೀಲ ವಿಜಯಕುಮಾರ್ ಪಾಟೀಲ್ ವಾದಿಸಿ, ಕೆಜಿಎಫ್-2 ಚಿತ್ರ ಬಿಡುಗಡೆಗೆ ತಡೆ ಕೋರಿ ಮನವಿ ಮಾಡಲಾಗಿತ್ತು. ಆದರೆ, ಕೆಜಿಎಫ್-2 ಚಲನಚಿತ್ರ ಕಳೆದ ಏಪ್ರಿಲ್ 14ರಂದೇ ಬಿಡುಗಡೆಯಾಗಿದೆ. ಇದರಿಂದಾಗಿ ಅರ್ಜಿ ವಿಚಾರಣಾ ಮಾನ್ಯತೆ ಕಳೆದುಕೊಂಡಿದೆ ಎಂದು ತಿಳಿಸಿದರು.
ಸರ್ಕಾರ ವಾದ ಪರಿಗಣಿಸಿದ ಪೀಠ: ಸರ್ಕಾರದ ಪರ ವಕೀಲರ ವಾದ ಪರಿಗಣಿಸಿದ ಪೀಠ, ಈಗಾಗಲೇ ಕೆಜಿಎಫ್-2 ಸಿನಿಮಾ ಬಿಡುಗಡೆಯಾಗಿದ್ದು, ಅರ್ಜಿ ವಿಚಾರಣಾ ಮಾನ್ಯತೆ ಕಳೆದುಕೊಂಡಿದೆ ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿದೆ.
ಅರ್ಜಿದಾರರ ಪರ ವಾದ ಏನಿತ್ತು?: ಕೆಜಿಎಫ್-2 ಚಲನಚಿತ್ರದಲ್ಲಿ ಧೂಮಪಾನ ವಿಜೃಂಭಿಸಲಾಗಿದೆ. ಅಲ್ಲದೆ, ಚಿತ್ರದಲ್ಲಿ ಯಾವುದೇ ಸಮಾಜಿಕ ಕಳಕಳಿ ಇಲ್ಲ. ಸಿನಿಮಾ ಬಿಡುಗಡೆಯಾದರೆ ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ, ಚಿತ್ರ ಬಿಡುಗಡೆ ಮಾಡದಂತೆ ತಡೆ ಹಿಡಿಯಲು ಸರ್ಕಾರಕ್ಕೆ ನಿರ್ದೇಶಿಸಬೇಕು. ಚಿತ್ರಕ್ಕೆ ವಿತರಿಸಿರುವ ಯು/ಎ ಸೆನ್ಸಾರ್ ಪ್ರಮಾಣ ಪತ್ರವನ್ನು ಹಿಂಪಡೆಯಲು ಕೇಂದ್ರ ಸೆನ್ಸಾರ್ ಮಂಡಳಿಗೆ ನಿರ್ದೇಶಿಸಬೇಕು ಎಂದು ಕೋರಿ ಅರ್ಜಿದಾರ ಸಂಘ 2022ರ ಮಾರ್ಚ್ 11ರಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.
ಇದನ್ನೂ ಓದಿ: ಹೆಚ್ಚಿನ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಲಿರುವ ಟಿ ರಾಜೇಂದರ್, ಮಗ ಸಿಲಂಬರಸನ್ ಸ್ಪಷ್ಟನೆ