ತೆಲುಗು ಸೂಪರ್ಸ್ಟಾರ್ ಪವನ್ ಕಲ್ಯಾಣ್ ಮತ್ತು ನಟಿ ರೇಣು ದೇಸಾಯಿ ದಂಪತಿಯ ಪುತ್ರ ಅಕಿರಾ ನಂದನ್ ಶನಿವಾರ 19ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ಸಂದರ್ಭದಲ್ಲಿ ರೇಣು ದೇಸಾಯಿ ತಮ್ಮ ಮಗನಿಗೆ ಹುಟ್ಟುಹಬ್ಬದ ಶುಭಾಶಯ ಕೋರುವ ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ಗೆ ಪವನ್ ಅಭಿಮಾನಿಗಳು ಕಾಮೆಂಟ್ ಮಾಡಿದ್ದು, ರೇಣು ದೇಸಾಯಿ ಎಲ್ಲಾ ಪ್ರತಿಕ್ರಿಯೆಗಳಿಗೂ ಕೊಂಚ ಗರಂ ಆಗಿಯೇ ಉತ್ತರಿಸಿದ್ದಾರೆ. ನೀವು ಮಾಡುತ್ತಿರುವ ಇಂತಹ ಟ್ವೀಟ್ಗಳಿಂದ ನನಗೆ ನೋವಾಗುತ್ತಿದೆ ಎಂದು ಹೇಳಿದ್ದಾರೆ.
ತಮ್ಮ ಮಗನ ಬರ್ತ್ಡೇ ಸಲುವಾಗಿ ರೇಣು ದೇಸಾಯಿ ಶೇರ್ ಮಾಡಿರುವ ವಿಡಿಯೋಗೆ ಪವನ್ ಅಭಿಮಾನಿಯೊಬ್ಬರು, "ಮೇಡಂ, ಒಮ್ಮೆ ನಮ್ಮ ಅಕಿರಾ ಅವರನ್ನು ಸರಿಯಾಗಿ ತೋರಿಸಿ. ನಾವು ಒಮ್ಮೆಯಾದರೂ ನಮ್ಮ ಅಣ್ಣನ ಮಗನನ್ನು ನೋಡುತ್ತೇವೆ" ಎಂದು ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಅಸಹನೆ ವ್ಯಕ್ತಪಡಿಸಿದ ರೇಣು, "ನಿಮ್ಮ ಅಣ್ಣನ ಮಗ? ಅಕಿರಾ ಮೈ ಬಾಯ್. ನೀವು ಅವರ ದೊಡ್ಡ ಅಭಿಮಾನಿ ಆಗಿರಬಹುದು. ಆದರೆ ಹೇಗೆ ಮಾತನಾಡಬೇಕೆಂದು ಮೊದಲು ಕಲಿಯಿರಿ. ನಾನು ಯಾವಾಗಲೂ ಇಂತಹ ಸಂದೇಶ ಮತ್ತು ಕಾಮೆಂಟ್ಗಳನ್ನು ನಿರ್ಲಕ್ಷಿಸುತ್ತೇನೆ. ಆದರೆ ನಿಮ್ಮಂತ ಕೆಲವರು ಪುನಃ ಇದನ್ನೇ ಮಾಡುತ್ತಿದ್ದಾರೆ. ಇದು ನಿಜಕ್ಕೂ ಕಠಿಣ" ಎಂದು ಉತ್ತರಿಸಿದ್ದಾರೆ.
- " class="align-text-top noRightClick twitterSection" data="
">
ಇದರೊಂದಿಗೆ ಈ ರೀತಿಯ ಕಾಮೆಂಟ್ಗಳ ಸ್ಕ್ರೀನ್ಶಾಟ್ ತೆಗೆದು ರೇಣು ದೇಸಾಯಿ ಇನ್ಸ್ಟಾ ಸೋರಿ ಹಾಕಿಕೊಂಡಿದ್ದಾರೆ. "ಅಕಿರಾ ಹುಟ್ಟುಹಬ್ಬದ ದಿನವೂ ನನ್ನ ಇನ್ಸ್ಟಾಗ್ರಾಮ್ ಖಾತೆಗೆ ಬಂದು ನಕಾರಾತ್ಮಕ ಕಮೆಂಟ್ಗಳನ್ನು ಯಾಕೆ ಮಾಡುತ್ತಿದ್ದೀರಿ? 11 ವರ್ಷಗಳಿಂದ ಇದುವೇ ಆಯಿತು. ಇಂದು ನಿಮ್ಮ ಕಮೆಂಟ್ಗಳಿಂದ ತಾಯಿಯಾಗಿ ನನಗೆ ನೋವಾಗಿದೆ. ನನಗೆ ಏನಾಗುತ್ತಿದೆ ಎಂದೇ ಅರ್ಥವಾಗುತ್ತಿಲ್ಲ. ಜನರಿಗೆ ನಾನು 11 ವರ್ಷಗಳಿಂದ ಖಳನಾಯಕಿಯಾಗಿ ಕಾಣಿಸುತ್ತಿದ್ದೇನೆ. ನಾನು ಸಂಪೂರ್ಣವಾಗಿ ದಣಿದಿದ್ದೇನೆ. ಈ ರೀತಿಯ ವಿಷಯಗಳಿಗೆ ಪ್ರತಿಕ್ರಿಯಿಸದೇ ಇದ್ದಲ್ಲಿ, ಅದು ನನಗೆ ಮಾನಸಿಕವಾಗಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ" ಎಂದು ಬರೆದಿದ್ದಾರೆ.
ಇದಕ್ಕೆ ಮತ್ತೊಬ್ಬ ನೆಟಿಜನ್ ಪ್ರತಿಕ್ರಿಯಿಸಿದ್ದಾರೆ. "ಮೇಡಂ, ತೆಲುಗು ರಾಜ್ಯಗಳಲ್ಲಿ ಯಾರ ಮಗು ಎಂದು ಕೇಳಿದರೆ ತಂದೆಯ ಹೆಸರು ಹೇಳುತ್ತೇವೆ. ಅದು ನಮ್ಮ ಸಂಸ್ಕೃತಿಯೂ ಹೌದು. ಹೀಗಾಗಿ ನೀವು ಅಭಿಮಾನಿಗಳೊಂದಿಗೆ ಕೋಪಗೊಳ್ಳಬೇಡಿ" ಎಂದು ಹೇಳಿದ್ದಾರೆ. ಈ ಸಂದೇಶಕ್ಕೆ ಉತ್ತರಿಸಿದ ರೇಣು, "ಜನ್ಮ ನೀಡಿದ ತಾಯಿಗೆ ಅಗೌರವ ತೋರುವುದು ನಿಮ್ಮ ಸಂಸ್ಕೃತಿಯೇ? ಭಾರತೀಯ ಸಂಸ್ಕೃತಿಯಲ್ಲಿ ತಾಯಿಗೆ ವಿಶೇಷ ಸ್ಥಾನವಿದೆ. ಆಕೆಯನ್ನು ದೇವರ ಸಮಾನವೆಂದೇ ಪರಿಗಣಿಸಲಾಗಿದೆ. ಬೇಕಿದ್ದರೆ ನಿಮ್ಮ ತಾಯಿಯನ್ನು ಕೇಳಿ ತಿಳಿದುಕೊಳ್ಳಿ. ನನ್ನ ಪೋಸ್ಟ್‌ಗಳಿಗೆ ಆಗಾಗ ಕಾಮೆಂಟ್ ಮಾಡಬೇಡಿ ಎಂದು ಅಭಿಮಾನಿಗಳಿಗೆ ಹೇಳಿ. ಅವರು ವಿನಾಕಾರಣ ಕಾಮೆಂಟ್ ಮಾಡುತ್ತಿದ್ದಾರೆ" ಎಂದು ಹೇಳಿದ್ದಾರೆ.
ಹಲವಾರು ವರ್ಷಗಳಿಂದ ಪ್ರೀತಿಸುತ್ತಿದ್ದ ಪವನ್ ಕಲ್ಯಾಣ್ ಮತ್ತು ರೇಣು ದೇಸಾಯಿ ಜೋಡಿ 2009 ರಲ್ಲಿ ವಿವಾಹವಾದರು. ಅವರಿಗೆ ಅಕಿರಾ ಮತ್ತು ಆದ್ಯಾ ಎಂಬ ಇಬ್ಬರು ಮಕ್ಕಳಿದ್ದಾರೆ. ವೈಯಕ್ತಿಕ ಕಾರಣಗಳಿಂದ ಪರಸ್ಪರ ಒಪ್ಪಿಗೆ ಮೇರೆಗೆ 2012 ರಲ್ಲಿ ಇಬ್ಬರು ಬೇರೆಯಾದರು. ಆದರೆ ಶುಭ ಸಂದರ್ಭಗಳಲ್ಲಿ ಪವನ್ ತಮ್ಮ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಮೂಲಕ ಶುಭ ಕೋರುತ್ತಾರೆ.
ಇದನ್ನೂ ಓದಿ: 'ಮಾಲ್ತಿ ಮೇರಿ ಮೊದಲ ಈಸ್ಟರ್': ಮಗಳ ಜೊತೆಗಿನ ಫೋಟೋ ಹಂಚಿಕೊಂಡ ಪ್ರಿಯಾಂಕಾ