ಕೆ.ಜಿ.ಎಫ್, ಕಾಂತಾರ, ಚಾರ್ಲಿ777, ವಿಕ್ರಾಂತ್ ರೋಣನಂತಹ ಚಿತ್ರಗಳು ಕನ್ನಡ ಚಿತ್ರರಂಗದತ್ತ ಜಗತ್ತು ತಿರುಗಿ ನೋಡುವಂತೆ ಮಾಡಿವೆ. ಇದರ ಜೊತೆಗೆ ಕನ್ನಡ ಚಿತ್ರದ ಮಾರುಕಟ್ಟೆಯೂ ವಿಸ್ತಾರವಾಗಿದೆ. ಚಿತ್ರಗಳಿಗೆ ಚಿನ್ನದ ಬೆಲೆಯೂ ಸಿಕ್ಕಿದ್ದು, ಡಿಮ್ಯಾಂಡ್ ಕೂಡ ಹೆಚ್ಚಾಗಿದೆ. ಹೀಗೆಂದು ಯಾರಾದರೂ ಅಂದುಕೊಂಡಿದ್ದರೆ ಅದು ಕೇವಲ ಭ್ರಮೆ ಅಷ್ಟೇ. ಯಾಕೆಂದರೆ ಇದರ ವಾಸ್ತವವೇ ಬೇರೆ ಇದೆ.
ಸದ್ಯ ಕನ್ನಡ ಚಿತ್ರರಂಗದ ಸ್ಥಿತಿ ಶೋಚನಿಯವಾಗಿದೆ. ಯಾಕೆಂದರೆ ನಮ್ಮಲ್ಲಿ ವಾರಕ್ಕೆ ಅರ್ಧ ಡಜನ್ ಸಿನಿಮಾ ಬರುತ್ತಿದೆ. ಆದರೆ ಚಿತ್ರಮಂದಿರ ಮಾತ್ರ ಅರ್ಧದಷ್ಟು ಭರ್ತಿಯಾಗುತ್ತಿಲ್ಲ. ಚಿತ್ರಮಂದಿರಕ್ಕೆ ಮೊದಲಿನಂತೆ ಪ್ರೇಕ್ಷಕರು ಆಗಮಿಸುತ್ತಿಲ್ಲ. ಇದು ಒಂದು ಕಡೆಯಾದರೆ, ಮತ್ತೊಂದು ಕಡೆ ಬಲು ಬೇಗ ಪ್ರೇಕ್ಷಕನನ್ನು ತಲುಪುತ್ತಿರುವ ಒಟಿಟಿಯಲ್ಲಿ ಕೇವಲ ದೊಡ್ಡವರಿಗಷ್ಟೇ ಮಣೆ ಹಾಕುವ ಸಂಪ್ರದಾಯ ಆರಂಭವಾಗಿದೆ. ಹೊಸಬರ ಚಿತ್ರಗಳನ್ನು ಅಮೆಜಾನ್, ನೆಟ್ ಫ್ಲಿಕ್ಸ್ ಕೊಳ್ಳುತ್ತಿದ್ದು, ಹೊಸಬರ ಚಿತ್ರಗಳನ್ನು ಇಂತಹ ದೈತ್ಯ ಸಂಸ್ಥೆಗಳು ತಿರುಗಿಯೂ ನೋಡುತ್ತಿಲ್ಲ.
ಮಂಸೋರೆ ಹೇಳಿದ್ದೇನು?: ಈ ಕುರಿತು ಕನ್ನಡದ ಖ್ಯಾತ ನಿರ್ದೇಶಕ ಮಂಸೋರೆ, ಒಟಿಟಿ ಸಂಸ್ಥೆಗಳ ವಿರುದ್ಧ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಅಮೆಜಾನ್ ಹಾಗೂ ನೆಟ್ ಫ್ಲಿಕ್ಸ್ನವರ ಪ್ರತಿಕ್ರಿಯೆಯನ್ನು ಸಾಮಾಜಿಕ ಜಾಲತಾಣದಲ್ಲಿ ಬರೆದು ಹಂಚಿಕೊಂಡಿದ್ದಾರೆ. ಒಟಿಟಿಯ ತಾತ್ಸಾರ ಮನೋಭಾವದ ಬಗ್ಗೆ ತಮ್ಮ ಮನಸ್ಸಿ ಮಾತನ್ನು ಹಂಚಿಕೊಂಡಿರುವ ಮಂಸೋರೆ, ಫ್ರೈಮ್ ವಿಡಿಯೋ ಅವರಿಗೆ ನಮ್ಮ ರಿಯಲಿಸ್ಟಿಕ್ ಸಿನಿಮಾ ಬೇಡವಂತೆ, ನೆಟ್ ಫ್ಲಿಕ್ಸ್ ಅವರು ಕನ್ನಡ ಸಿನಿಮಾ ತೆಗೆದುಕೊಳ್ಳುವುದಿಲ್ಲವಂತೆ. ನಮ್ಮ ಸಿನಿಮಾವನ್ನು ಒಮ್ಮೆಯೂ ನೋಡದೆ ಮೇಲಿನಂತೆ ಪ್ರತಿಕ್ರಿಯೆ ನೀಡಿದ್ದಾರೆ ಎಂದಿರುವ ಈ ಮೂಲಕ ಮತ್ತೊಮ್ಮೆ ಚರ್ಚೆಗೆ ನಾಂದಿ ಹಾಡಿದ್ದಾರೆ.
ಮಂಸೋರೆ 19.20.21 ಚಿತ್ರ ಮಾಡಿದ್ದು ಅದರ ಬಗ್ಗೆ ಸಾಕಷ್ಟು ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು. ಆದರೆ, ಆ ಅಭಿಮಾನ ಆ ಕ್ಷಣಕ್ಕಷ್ಟೇ ಸೀಮಿತ. ಹೀಗಾಗಿಯೇ ಮಂಸೋರೆ ತಮ್ಮ ಚಿತ್ರವನ್ನ ತೆಗೆದುಕೊಂಡು ಅಮೆಜಾನ್ ಹಾಗೂ ನೆಟ್ ಪ್ಲಿಕ್ಸ್ ನವರ ಬಾಗಿಲು ಬಡಿದು ಬಡಿದು ಸುಸ್ತಾಗಿದ್ದಾರೆ. ಆ ಸಂಸ್ಥೆಗಳ ಅಸಡ್ಡೆ ಮನೋಭಾವದಿಂದ ಅವರು ಕೆರಳಿದ್ದಾರೆ.
ಮಂಸೋರೆ ನಿರ್ದೇಶನದ ಹಿಂದಿನ ಚಿತ್ರ ಆಕ್ಟ್ 1978 ಚಿತ್ರವನ್ನ ಇದೇ ಅಮೆಜಾನ್ ಸಂಸ್ಥೆ ಖರೀದಿಸಿತ್ತು. ಲಾಭದಲ್ಲಿ ಸುಮಾರು 90 ಲಕ್ಷ ರೂ ಪಾಲನ್ನೂ ಚಿತ್ರದ ನಿರ್ಮಾಪಕರಿಗೆ ನೀಡಿತ್ತು. ಆದರೂ, ಮಂಸೋರೆ ಅವರ 19.20.21 ಚಿತ್ರವನ್ನ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದೆ. ಮಂಸೋರೆಯ ಹಿಂದಿನ ಸಿನಿಮಾ ಆಕ್ಟ್ 1978 ಚಿತ್ರವನ್ನು ಹೇಳದೆ ಕೇಳದೆ ತನ್ನ ವೇದಿಕೆಯಿಂದ ತೆಗೆದು ಹಾಕಿದೆ. ಈ ಬೆನ್ನಲ್ಲೇ ಮಂಸೋರೆ ಟ್ವಿಟ್ ವೈರಲ್ ಆಗಿದೆ. ಆಕ್ಟ್ 1978 ಚಿತ್ರವನ್ನ ಅಮೆಜಾನ್ ನಲ್ಲಿ ಹುಡುಕುತ್ತಿರುವ ಸಿನಿಪ್ರೇಮಿಗಳ ಸಂಖ್ಯೆಯೂ ಹೆಚ್ಚಾಗಿದೆ.
ಸ್ಟಾರ್ ಬ್ಯಾನರ್ಗೆ ಮಾತ್ರ ಮಣೆ: ಚಿತ್ರವೊಂದು ಬಿಡುಗಡೆಯಾದ ಬಳಿಕ ಒಟಿಟಿಯಲ್ಲಿ ಮಾರಾಟವಾದಾಗ ಅಲ್ಲಿ ಕೂಡ ಕೆಲವು ಷರತ್ತುಗಳಿರುತ್ತವೆ. ವ್ಯಾಪಾರದಲ್ಲಿ ಒಟಿಟಿ ಸಂಸ್ಥೆಗಳಿಗೆ ಪಾಲನ್ನೂ ಕೊಡಬೇಕಾಗುತ್ತದೆ. ಮಿಕ್ಕಂತೆ ಪ್ರತಿಷ್ಟಿತ ನಿರ್ಮಾಣ ಸಂಸ್ಥೆ ಎನಿಸಿಕೊಂಡ ಹೊಂಬಾಳೆ, ಕೆ.ಆರ್.ಜಿ, ಪಿ.ಆರ್.ಕೆ. ಪ್ರೊಡಕ್ಷನ್ಸ್ ನಿರ್ಮಾಣದ ಚಿತ್ರಗಳಷ್ಟೇ ಅಮೆಜಾನ್ ಅಂಗಳಕ್ಕೆ ತಲುಪುತ್ತಿವ. ಗಮನಿಸಬೇಕಾದ ವಿಚಾರವೇನೆಂದರೆ ಮೇಲಿನ ಈ ಸಂಸ್ಥೆಗಳು ನಿರ್ಮಿಸಿದ ಸಿನಿಮಾಗಳನ್ನ ಜನ ಚಿತ್ರಮಂದಿರದಲ್ಲಿ ನೋಡಲಿ ಬಿಡಲಿ, ಬಿಡುಗಡೆಗೆ ಮುನ್ನವೇ ವ್ಯಾಪಾರ ವಹಿವಾಟು ಸಲೀಸಾಗಿ ನಡೆದು ಹೋಗುತ್ತದೆ.
ಆದರೆ ಹೊಸ ಚಿತ್ರಗಳಿಗೆ ಚಿತ್ರಮಂದಿರದಲ್ಲಿ ಎಷ್ಟೇ ಉತ್ತಮ ಪ್ರತಿಕ್ರಿಯೆ ಸಿಕ್ಕರು, ಸಾಮಾಜಿಕ ಜಾಲತಾಣ ಎಷ್ಟೇ ಕೊಂಡಾಡಿದರು. ಪ್ರತಿಷ್ಠಿತ ಒಟಿಟಿ ಸಂಸ್ಥೆಗಳ ಕಣ್ಣಿಗೆ ಕಾಣಿಸೋದು ಇಲ್ಲ. ಡೇರ್ ಡೆವಿಲ್ ಮುಸ್ತಾಫಾ ಇದಕ್ಕೆ ಸದ್ಯದ ಉದಾಹರಣೆ. ಹೀಗಾಗಿಯೇ. ಲಾಭ ಬಿಡಿ ನಿರ್ಮಾಪಕನಿಗೆ ಹಾಕಿದ ಬಂಡವಾಳ ಕೂಡ ಬರುತ್ತಿಲ್ಲ ಅನ್ನುವ ಮಾತು ಗಾಂಧಿನಗರದಲ್ಲಿ ಕೇಳುತ್ತಿದೆ. ನಿಜಕ್ಕೂ ಕನ್ನಡ ಚಿತ್ರರಂಗದ ಸ್ಥಿತಿ ಗಂಭೀರವಾಗಿದೆ.
ಆತಂಕ ಹೊರ ಹಾಕಿದ ರಮ್ಯಾ : ಮೊನ್ನೆ ಕನ್ನಡ ಚಿತ್ರರಂಗದ ಮೋಹಕ ತಾರೆ ರಮ್ಯ ಕೂಡ ಇದೇ ಗಂಭೀರ ಸಮಸ್ಯೆಯ ಬಗ್ಗೆ ಧ್ವನಿ ಎತ್ತಿದ್ದರು. ಒಟಿಟಿ ಸಂಸ್ಥೆಗಳಿಗೆ ಕನ್ನಡ ಚಿತ್ರರಂಗದ ಮೇಲಿರುವ ತಾತ್ಸಾರ ಮನೋಭಾವನೆಯ ಬಗ್ಗೆ ತಮ್ಮ ಮನದ ಮಾತನ್ನ ಹಂಚಿಕೊಂಡಿದ್ದರು. ನೆಟ್ ಫ್ಲಿಕ್ಸ್ನವರು ಕನ್ನಡದ ಚಿತ್ರ ಎಷ್ಟೇ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದರೂ ಆ ಚಿತ್ರವನ್ನ ಖರೀದಿಸುತ್ತಿಲ್ಲ. ಚಿತ್ರಮಂದಿರದಲ್ಲಿ ಚಿತ್ರ ತೆರೆಗೆ ಬಂದ ನಂತರವಷ್ಟೇ ಅಮೆಜಾನ್ ನವರು ಚಿತ್ರದ ಕುರಿತು ಆಲೋಚನೆ ಮಾಡುತ್ತಾರೆ. ರಾಷ್ಟ್ರೀಯ ವಾಹಿನಿಯ ವೇದಿಕೆಯಲ್ಲಿ ಕುಳಿತು ಆಡಿತ ಮಾತುಗಳು ನಮ್ಮಲ್ಲಿನ ನ್ಯಾಶನಲ್ ಸ್ಟಾರ್ಗಳಿಗೆ ಕೇಳಿಸಲೂ ಇಲ್ಲ.
ಕನ್ನಡದ ದೊಡ್ಡ ದೊಡ್ಡ ನಟರಿಗೆ ಇದರ ಗೊಡವೆ ಬೇಡವಾಗಿದೆ. ಹೊಸ, ಉತ್ಸಾಹಿಗಳನ್ನು ಉಳಿಸಿಕೊಳ್ಳುವ ಉಮೇದು ಅವರಲಿಲ್ಲ. ಇದೇ ಕಾರಣದಿಂದಾಗಿ ಎರಡು ಬಾರಿ ರಾಷ್ಟ್ರ ಪ್ರಶಸ್ತಿ ಗೆದ್ದ ಮಂಸೊರೆ ಕೂಡ ಹತಾಶರಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಯುವ ಪ್ರತಿಭೆಗಳ ಸ್ಥಿತಿ ಗತಿಗಳ ಬಗ್ಗೆ ಅವಲೋಕನ ಮಾಡಬೇಕಿದೆ. ಪ್ರತಿಷ್ಠಿತ ಓಟಿಟಿಗಳು ಹೊಸಬರ ಚಿತ್ರಕ್ಕೆ ಮಣೆಹಾಕದಿದ್ದರೆ, ಪರ್ಯಾಯವೇನು ಎಂದು ಚರ್ಚೆ ಮಾಡಬೇಕಿದೆ. ಕನ್ನಡ ಚಿತ್ರರಂಗ ಇದೆಲ್ಲವನ್ನೂ ಗಂಭೀರವಾಗಿ ತೆಗೆದುಕೊಳ್ಳುತ್ತಾ ಕಾದು ನೋಡಬೇಕು.
ಇದನ್ನೂ ಓದಿ: ಗುಳ್ಟು ಸಿನಿಮಾ ಖ್ಯಾತಿಯ ನವೀನ್ ಶಂಕರ್ ಹುಟ್ಟು ಹಬ್ಬಕ್ಕೆ ಸಿಕ್ತು ಭರ್ಜರಿ ಉಡುಗೊರೆ