ಚೆನ್ನೈ: ಭಾರತೀಯ ಚಿತ್ರರಂಗಕ್ಕೆ ಇಂದು ಅದ್ಭುತ ಗಳಿಗೆ. ಪ್ಯಾನ್ ಇಂಡಿಯಾ ಸಿನಿಮಾ ಆರ್ಆರ್ಆರ್ನ ನಾಟು ನಾಟು ಹಾಡು, ದಿ ಎಲಿಫೆಂಟ್ ವಿಸ್ಪರರ್ಸ್ಗೆ ಆಸ್ಕರ್ ಪ್ರಶಸ್ತಿ ದಕ್ಕಿದೆ. ಇದೇ ವೇಳೆ ಪ್ರಶಸ್ತಿ ಪಡೆದ ಮತ್ತು ವಂಚಿತರಾದ ಸಿನಿಮಾ ಮತ್ತು ವ್ಯಕ್ತಿಗಳಿಗೆ ಕೋಟ್ಯಂತರ ರೂಪಾಯಿ ಮೌಲ್ಯದ ಗಿಫ್ಟ್ ಬ್ಯಾಗ್ ಮಾತ್ರ ಸಿಕ್ಕಿದೆ.
ಪ್ರಶಸ್ತಿಗೆ ನಾಮಿನೇಟ್ ಆದ ಸಿನಿಮಾ ಅಥವಾ ವ್ಯಕ್ತಿಗೆ ನೀಡಲಾದ ಗಿಫ್ಟ್ ಬ್ಯಾಗ್‌ನಲ್ಲಿ ದುಬಾರಿ ಬೆಲೆಯ ವಸ್ತುಗಳ ಜೊತೆಗೆ ಭಾರಿ ಮೌಲ್ಯದ ಗಿಫ್ಟ್ ವೋಚರ್ಗಳು ಕೂಡ ಸಿಕ್ಕಿವೆ. ಈ ಗಿಫ್ಟ್ ಬ್ಯಾಗ್ನ ಮೌಲ್ಯ 1.25 ಲಕ್ಷ ಡಾಲರ್ ಆಗಿದೆ. ಅಂದರೆ 1.03 ಕೋಟಿ ರೂಪಾಯಿಗಳಾಗಿವೆ. ಈ ಬಾರಿ 23 ವಿಭಾಗಗಳಿಗೆ ಪ್ರಶಸ್ತಿ ನೀಡಲಾಗಿದ್ದು, 23 ವಿಭಾಗಗಳಿಗೆ 120 ಕ್ಕಿಂತಲೂ ಹೆಚ್ಚಿನ ಸಿನಿಮಾ ಅಥವಾ ವ್ಯಕ್ತಿಗಳು ಪ್ರಶಸ್ತಿಗಾಗಿ ನಾಮಿನೇಟ್ ಆಗಿದ್ದರು. ಅವರೆಲ್ಲರಿಗೂ ಈ 1 ಕೋಟಿಗೂ ಹೆಚ್ಚು ಬೆಲೆಯ ಗಿಫ್ಟ್ ಬ್ಯಾಗ್ ಉಡುಗೊರೆಯಾಗಿ ನೀಡಲಾಗಿದೆ.
ಡಿಸ್ಟಿಂಕ್ಟಿವ್ ಅಸ್ಸೆಟ್ ಹೆಸರಿನ ಸಂಸ್ಥೆಯು ಈ ಗಿಫ್ಟ್ ಬ್ಯಾಗ್ಗಳನ್ನು ನೀಡಿದೆ. ಇದಕ್ಕೆ ‘ಎವರಿಬಡಿ ವಿನ್ಸ್’ ಎಂದು ಹೆಸರಿಸಲಾಗಿದೆ. 16 ಡಾಲರ್ ಬೆಲೆಯ ಚಾಕೊಲೇಟ್ನಿಂದ ಹಿಡಿದು 40 ಸಾವಿರ ಡಾಲರ್ ಮೌಲ್ಯದ ಗಿಫ್ಟ್ ವೋಚರ್ಗಳನ್ನು ಇದು ಒಳಗೊಂಡಿದೆ. ಗಿಫ್ಟ್ ಬ್ಯಾಗ್ ಪಡೆದವರು ವಿಮಾನದಲ್ಲಿ ಅದನ್ನು ಹೊತ್ತೊಯ್ಯಲು ಅನುಕೂಲವಾಗುವಂತೆ ವ್ಯವಸ್ಥಿತವಾಗಿ ಎರಡು ಸೂಟ್ಕೇಸ್ಗಳಲ್ಲಿ ಪ್ಯಾಕ್ ಮಾಡಿ ನೀಡಲಾಗಿದೆ. ನಾಮಿನಿಗಳು ಉಳಿದುಕೊಂಡಿರುವ ಹೋಟೆಲ್ಗೇ ಅಸ್ಸೆಟ್ ಸಂಸ್ಥೆಯವರು ಗಿಫ್ಟ್ ಬ್ಯಾಗ್ಗಳನ್ನು ತಂದು ನೀಡಿದ್ದಾರೆ.
ಗಿಫ್ಟ್ ಬ್ಯಾಗ್‌ನಲ್ಲಿ 9000 ಡಾಲರ್ ಬೆಲೆಯ ವೋಚರ್ ಇದೆ. ಈ ವೋಚರ್ ಬಳಸಿ ಇಟಲಿಯ ಫಾರಾ ಪುಂಟಾ ಇಂಪೆರೆಟರ್ ಹೋಟೆಲ್ನಲ್ಲಿ ಮೂರು ರಾತ್ರಿ-ಮೂರು ಹಗಲು ತಂಗಬಹುದು. 40,000 ವೋಚರ್ ಬಳಸಿ ಕೆನಡಾದ ಐಷಾರಾಮಿ ಒಟ್ಟಾಯ ಪ್ರಾಪರ್ಟಿಯಲ್ಲಿ ಕೆಲ ದಿನ ತಂಗಬಹುದು. ಅದೂ ಪ್ರಶಸ್ತಿ ರೇಸ್ನ ನಾಮಿನಿ ಸೇರಿದಂತೆ ಅವರ ಏಳು ಗೆಳೆಯರೊಟ್ಟಿಗೆ ಎಂಜಾಯ್ ಮಾಡಬಹುದು.
ಗಿಫ್ಟ್ ಬ್ಯಾಗ್‌ನಲ್ಲಿ ಇನ್ನೂ ಏನೇನಿವೆ?: ಡಾ ಥಾಮಸ್ ಸೂ ಸಂಸ್ಥೆಯ 12 ಸಾವಿರ ಡಾಲರ್ ಮೌಲ್ಯದ ತ್ವಚೆ ಅಂದಗಾಣಿಸುವ ಉತ್ಪನ್ನಗಳ ಕಿಟ್, ಕೂದಲ ಆರೋಗ್ಯಕ್ಕೆ ಬೇಕಾದ ವಸ್ತುಗಳು ಹಾಗೂ ವೈದ್ಯರ ಕನ್ಸಲ್ಟೇಶನ್ ವೋಚರ್, 10 ಸಾವಿರ ಡಾಲರ್ ಮೌಲ್ಯದ ಆರೋಗ್ಯ ಹಾಗೂ ಸೌಂದರ್ಯಕ್ಕೆ ಸಂಬಂಧಿಸಿದ ವಸ್ತುಗಳು ಹಾಗೂ ಚಿಕಿತ್ಸಾ ಕ್ರಮಗಳ ಮಾಹಿತಿ ಹಾಗೂ ಕೆಲವು ಸೋಪುಗಳು, ಟಿ ಶರ್ಟ್, ಚಪ್ಪಲಿ, ಟೋಪಿ, ಚಾಕೊಲೇಟ್ ಗಳನ್ನು ಈ ಗಿಫ್ಟ್ ಬ್ಯಾಗ್ ಒಳಗೊಂಡಿದೆ. ಗಿನ್ಝಾ ನಿಶಿಕಾವಾದಿಂದ 13.56 ಡಾಲರ್ ಮೌಲ್ಯದ ಪ್ಯಾಕ್ ಕ್ಲಿಫ್ ಥಿನ್ಸ್ ಮತ್ತು 18 ಡಾಲರ್ ಬೆಲೆಯ ಜಪಾನೀಸ್ ಹಾಲಿನ ಬ್ರೆಡ್ ಗಿಫ್ಟ್ ಐಟಂ ಕೂಡ ಇದೆ.
ಈ ಗಿಫ್ಟ್ ಬ್ಯಾಗ್ಗಳ ಮೇಲೆ ತೆರಿಗೆಯನ್ನು ಗಿಫ್ಟ್ ಪಡೆದವರೇ ತೆರಬೇಕಾಗುತ್ತದೆ. ತೆರಿಗೆ ಮೊತ್ತ ಆಯಾ ದೇಶದ ತೆರಿಗಾ ವಿಧಾನ ಹಾಗೂ ಮೊತ್ತದ ಮೇಲೆ ನಿರ್ಣಯವಾಗಿರುತ್ತದೆ. ಕುತೂಹಲಕಾರಿ ವಿಷಯವೆಂದರೆ 2016 ರ ಪ್ರಶಸ್ತಿ ಸಮಾರಂಭದ ವೇಳೆ ನೀಡಲಾದ ಗಿಫ್ಟ್ ಬ್ಯಾಗ್‌ನಲ್ಲಿ ಲೈಂಗಿಕ ಆಟಿಕೆಗಳು, ಗಾಂಜಾ ವೇಪ್ ಪೆನ್‌ಗಳು ಇಡಲಾಗಿತ್ತು. ಕಂಪನಿಯ ಈ ಗಿಫ್ಟ್ಗಳು ಪ್ರಶಸ್ತಿ ಸಮಿತಿಯ ಟೀಕೆಗೆ ಗುರಿಯಾಗಿತ್ತು. ಇದು ವಿವಾದಕ್ಕೆ ಕಾರಣವಾದ ಬಳಿಕ ಆಸ್ಕರ್ ಅಕಾಡೆಮಿ ವಿವಾದಿತ ಗಿಫ್ಟ್ಗಳನ್ನು ಇನ್ನು ಮುಂದೆ ಅನುಮತಿಸಲಾಗುವುದಿಲ್ಲ ಎಂದು ಹೇಳಿತ್ತು.
ಓದಿ: ಆಸ್ಕರ್ ವಿಜೇತ ಚಿತ್ರಗಳು ಓಟಿಟಿಯಲ್ಲಿ ಬಿಡುಗಡೆ: ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್