ಈ ಸಿನಿಮಾ ಎಂಬ ಬಣ್ಣದ ಲೋಕಕ್ಕೆ ಪ್ರತಿ ದಿನ ಸಾಕಷ್ಟು ಜನರು ಬರುತ್ತಾರೆ. ಆದರೆ ಕೆಲ ನಟ, ನಟಿಯರು ಮಾತ್ರ ಈ ಗ್ಲ್ಯಾಮರ್ ಲೋಕದಲ್ಲಿ ಯಶಸ್ಸು ಕಾಣ್ತಾರೆ. ಈ ವರ್ಷ ಸ್ಯಾಂಡಲ್‌ವುಡ್‌ಗೆ ಅದೃಷ್ಟದ ವರ್ಷವೇ ಸರಿ. ಹಲವು ಸೂಪರ್ ಹಿಟ್ ಚಿತ್ರಗಳನ್ನು ಕೊಡುವ ಮೂಲಕ ಇಡೀ ಭಾರತೀಯ ಚಿತ್ರರಂಗ ತನ್ನತ್ತ ತಿರುಗಿ ನೋಡುವಂತೆ ಮಾಡಿದೆ ಕನ್ನಡ ಚಿತ್ರರಂಗ.
ಹೌದು, ಈ ಸಾಲಿನಲ್ಲಿ ಹೊಸ ಹೊಸ ಪ್ರತಿಭೆಗಳು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಸ್ಟಾರ್ ನಟರ ಮಕ್ಕಳ ಜೊತೆಗೆ ಸಿನಿಮಾ ಹಿನ್ನೆಲೆ ಇಲ್ಲದವರು, ಕಿರುತೆರೆಯಲ್ಲಿ ಮಿಂಚಿದವರು ಸಹ ಈ ಸಾಲಿನಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಆ ಪೈಕಿ ಕೆಲವರು ಭವಿಷ್ಯದ ಸೂಪರ್ ಸ್ಟಾರ್ಸ್ ಎನ್ನುವ ಭರವಸೆ ಮೂಡಿಸಿದ್ದಾರೆ. ಹಾಗಾದ್ರೆ ಈ ವರ್ಷದಲ್ಲಿ ಅದೃಷ್ಟ ಪರೀಕ್ಷೆಗಿಳಿದ ಹೊಸ ನಟ ನಟಿಯರು ಇವರೇ ನೋಡಿ.
ನಟಿ ರಕ್ಷಿತಾ ಸಹೋದರ ರಾಣಾ: ಜೇಮ್ಸ್, ಕೆಜಿಎಫ್ ಚಾಪ್ಟರ್ 2, 777 ಚಾರ್ಲಿ, ವಿಕ್ರಾಂತ್ ರೋಣ, ಕಾಂತಾರ ಚಿತ್ರಗಳ ಆರ್ಭಟವೇ ಈ ವರ್ಷ ಜೋರಾಗಿತ್ತು. ಹಾಗಾಗಿ ಈ ಮಧ್ಯೆ ಬಂದು ಹೋದ ಹೊಸಬರ ಸಿನಿಮಾಗಳು ಅಷ್ಟಾಗಿ ಸದ್ದು ಮಾಡಲಿಲ್ಲ. ಈ ಸಾಲಿನಲ್ಲಿ ಬಂದ ಹೊಸ ಪ್ರತಿಭೆಯ ಚಿತ್ರ ಏಕ್ ಲವ್ ಯಾ ಕೊಂಚ ಸದ್ದು ಮಾಡಿದೆ. ಈ ಸಿನಿಮಾ ಮೂಲಕ ನಟಿ ರಕ್ಷಿತಾ ಪ್ರೇಮ್ ಸಹೋದರ ರಾಣಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಜೋಗಿ ಪ್ರೇಮ್ ನಿರ್ದೇಶನದ ಏಕ್ ಲವ್‌ಯಾ ಸಿನಿಮಾ ಒಂದು ಮಟ್ಟಿಗೆ ಸೌಂಡ್ ಮಾಡಿತ್ತು. ರಾಣಾ ಹಾಗೂ ರೀಷ್ಮಾ ನಾಣಯ್ಯ, ರಚಿತಾ ರಾಮ್ ಮುಖ್ಯ ಭೂಮಿಕೆಯಲ್ಲಿದ್ದ ಈ ಚಿತ್ರದಲ್ಲಿ ರಾಣಾ ತಮ್ಮ ಉತ್ತಮ ಅಭಿನಯದಿಂದ ಗಮನ ಸೆಳೆದರು. ಇದೀಗ ಪ್ರೇಮ್ ಶಿಷ್ಯ ವಿಜಯ್ ಈಶ್ವರ್ ಅವರ ನಿರ್ದೇಶನದ ಚಿತ್ರದಲ್ಲಿ ರಾಣಾ ಅಭಿನಯಿಸುತ್ತಿದ್ದಾರೆ.
ಕ್ರೇಜಿಸ್ಟಾರ್ ಪುತ್ರ ವಿಕ್ರಮ್ ರವಿಚಂದ್ರನ್: ಕನ್ನಡ ಚಿತ್ರರಂದ ಕನಸುಗಾರ ರವಿಚಂದ್ರನ್ ಎರಡನೇ ಮಗ ವಿಕ್ರಮ್ ರವಿಚಂದ್ರನ್ ಕೂಡ ತ್ರಿವಿಕ್ರಮ ಎಂಬ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸಹನಾ ಮೂರ್ತಿ ನಿರ್ದೇಶನದ ಈ ಸಿನಿಮಾ ಒಂದು ಮಟ್ಟಿಗೆ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ವಿಕ್ರಮ್ ಜೋಡಿಯಾಗಿ ಚಿತ್ರದಲ್ಲಿ ಆಕಾಂಕ್ಷ ಶರ್ಮಾ ನಾಯಕಿಯಾಗಿ ಮಿಂಚಿದ್ದರು. ಚೊಚ್ಚಲ ಚಿತ್ರದಲ್ಲಿ ವಿಕ್ರಮ್ ಅಭಿನಯ ಹಾಗು ಆ್ಯಕ್ಷನ್ ಸೀನ್ಗಳಲ್ಲಿ ಮಿಂಚು ಹರಿಸಿದ್ದು, ಭರವಸೆ ನಟನಾಗಿ ಹೊರ ಹೊಮ್ಮಿದರು.
ಶಶಿಕುಮಾರ್ ಪುತ್ರ ಅಕ್ಷಿತ್: ಕನ್ನಡ ಚಿತ್ರರಂಗದಲ್ಲಿ ಸುಪ್ರೀಂ ಹೀರೋ ಆಗಿ ಮಿಂಚಿದ ಶಶಿಕುಮಾರ್ ಪುತ್ರ ಅಕ್ಷಿತ್ ಕೂಡ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ. ಆದರೆ ಅಕ್ಷಿತ್ ನಟಿಸಿದ ಸೀತಾಯಣ ಬಂದು ಹೋಗಿದ್ದು ಗೊತ್ತಾಗಲೇ ಇಲ್ಲ. ಈ ಸಿನಿಮಾ ಏಕಕಾಲಕ್ಕೆ ತೆಲುಗಿನಲ್ಲೂ ತೆರೆಗೆ ಬಂದಿತ್ತು. ಆದರೆ ಚೊಚ್ಚಲ ಸಿನಿಮಾ ಅಕ್ಷಿತ್ ಶಶಿಕುಮಾರ್ ಕೈ ಹಿಡಿಯಲಿಲ್ಲ. ಇದೀಗ ಅಕ್ಷಿತ್ ಶಶಿಕುಮಾರ್ ಮತ್ತೆರೆಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಶಾಸಕ ಜಮೀರ್ ಅಹಮದ್ ಪುತ್ರ ಝೈದ್ ಖಾನ್: ರಾಜಕಾರಣಿ ಜಮೀರ್ ಅಹಮದ್ ಮಗ ಝೈದ್ ಖಾನ್ ಸಹ ಬನಾರಸ್ ಸಿನಿಮಾ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದರು. ಜಯತೀರ್ಥ ನಿರ್ದೇಶನದ ಬನಾರಸ್ ಚಿತ್ರ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ತೆರೆಗಪ್ಪಳಿಸಿತ್ತು. ಚಿತ್ರದಲ್ಲಿ ಸೋನಲ್ ಮಂಟೋರಿಯಾ ನಾಯಕಿಯಾಗಿ ಮಿಂಚಿದ್ದರು. ಕಾಶಿಯನ್ನು ಕೇಂದ್ರವಾಗಿಟ್ಟುಕೊಂಡು ಈ ಟೈಮ್ ಟ್ರಾವೆಲಿಂಗ್ ಕಥೆ ಹೇಳಲಾಗಿತ್ತು. ಝೈದ್ ಖಾನ್ ಮೊದಲ ಚಿತ್ರದಲ್ಲೇ ಅನುಭವಿ ನಟನ ರೀತಿ ನಟಿಸಿ ಮೆಚ್ಚುಗೆ ಗಳಿಸಿದ್ದರು. ಆದರೆ ಸಿನಿಮಾ ನಿರೀಕ್ಷೆ ತಲುಪುವಲ್ಲಿ ಹಿನ್ನೆಡೆ ಕಂಡಿತು.
ಜೊತೆ ಜೊತೆಯಲಿ ಮೇಘಾ ಶೆಟ್ಟಿ: ಕಿರುತೆರೆಯ ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ನಟಿ ಮೇಘಾ ಶೆಟ್ಟಿ ಕೂಡ ಈ ಸಾಲಿನಲ್ಲಿ ಹಿರಿತೆರೆಗೆ ಆಗಮಿಸಿದ್ದಾರೆ. ಕಿರುತೆರೆಯಲ್ಲಿ ಹೆಚ್ಚು ಪ್ರಖ್ಯಾತಿ ಹೊಂದಿದ್ದ ಮೇಘಾ ಶೆಟ್ಟಿ ನಾಯಕಿಯಾಗಿ ನಟಿಸಿದ ಮೊದಲ ಸಿನಿಮಾ ತ್ರಿಬಲ್ ರೈಡಿಂಗ್. ಗೋಲ್ಡನ್ ಸ್ಟಾರ್ ಗಣೇಶ್ ಜೋಡಿಯಾಗಿ ಮೇಘಾ ಶೆಟ್ಟಿ ಗಮನ ಸೆಳೆದಿದ್ದಾರೆ. ಈ ಸಿನಿಮಾ ನಂತರ ಮೇಘಾ ಶೆಟ್ಟಿ ನಾಲ್ಕೈದು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ರಾಧನಾ ರಾಮ್: ದಿವಂಗತ ರಾಮು ಹಾಗೂ ಮಾಲಾಶ್ರೀ ಪುತ್ರಿ ರಾಧನಾ ರಾಮ್ ಕನ್ನಡ ಚಿತ್ರರಂಗಕ್ಕೆ ಆಗಮಿಸಿದ್ದಾರೆ. ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಹೆಸರಿಡದ ಚಿತ್ರದಲ್ಲಿ ರಾಧನಾ ರಾಮ್ ನಟಿಸುವ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಮೊದಲ ಸಿನಿಮಾ ಬಿಡುಗಡೆ ಆಗುವ ಮೊದಲೇ ರಾಧನಾ ರಾಮ್ಗೆ ಧ್ರುವ ಸರ್ಜಾ ಅವರ ಜೊತೆ ಸ್ಕ್ರೀನ್ ಶೇರ್ ಮಾಡುವ ಅವಕಾಶ ಸಿಕ್ಕಿದೆ.
ಇದನ್ನೂ ಓದಿ: 2022ರಲ್ಲಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟ ನಟಿಯರು
ಅಮೃತ ಪ್ರೇಮ್: ನೆನಪಿರಲಿ ಖ್ಯಾತಿಯ ಪ್ರೇಮ್ ಅವರ ಮಗಳು ಅಮೃತ ಪ್ರೇಮ್ ಡಾಲಿ ಪಿಕ್ಚರ್ಸ್ ನಿರ್ಮಾಣ ಸಂಸ್ಥೆ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಡಾಲಿ ಪಿಕ್ಚರ್ಸ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಟಗರು ಪಲ್ಯ ಸಿನಿಮಾದಲ್ಲಿ ನಾಯಕಿ ನಟಿಯಾಗಿ ಅಭಿನಯಿಸುತ್ತಿದ್ದಾರೆ.