ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳ ಮೂಲಕ ಕನ್ನಡಿಗರ ಮನಗೆದ್ದಿರುವ ನಟ ನೀನಾಸಂ ಸತೀಶ್ ಇದೀಗ ತಮ್ಮ ಕೆರಿಯರ್ ನಲ್ಲಿಯೇ ಬಹುಕೋಟಿ ವೆಚ್ಚದ ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಅಶೋಕ ಬ್ಲೇಡ್ ಅಂತಾ ಮಾಸ್ ಟೈಟಲ್ ಇಟ್ಟಿದ್ದು, ಇತ್ತೀಚೆಗೆ ಧರ್ಮಗಿರಿ ಶ್ರೀಮಂಜುನಾಥಸ್ವಾಮಿ ದೇವಸ್ಥಾನದಲ್ಲಿ ಈ ಚಿತ್ರ ಸೆಟ್ಟೇರಿದೆ. ಚಿತ್ರದ ಮೊದಲ ಸನ್ನಿವೇಶಕ್ಕೆ ಪಿ.ಶೇಷಾದ್ರಿ ಕ್ಲಾಪ್ ಮಾಡಿದರೆ, ಟಿ.ಎನ್.ಸೀತಾರಾಂ ಆ್ಯಕ್ಷನ್ ಹೇಳಿ, ಈ ಚಿತ್ರಕ್ಕೆ ಶುಭಾ ಹಾರೈಯಿಸಿದ್ದಾರೆ.
ಈ ಸಂದರ್ಭದಲ್ಲಿ ಈ ಚಿತ್ರದ ವಿಶೇಷತೆ ಬಗ್ಗೆ ಮಾತನಾಡಿರೋ ನೀನಾಸಂ ಸತೀಶ್, ದಿನ ಬೆಳಗಾದರೆ ಹಲವು ನಿರ್ದೇಶಕರು ಬಂದು ಕಥೆ ಹೇಳುತ್ತಾರೆ. ಆದರೆ, ಈ ಕಥೆ ಹುಡುಕಿದ್ದು ನಾನೇ. ಸ್ನೇಹಿತರ ಮೂಲಕ ದಯಾನಂದ್ ಅವರ ಬಳಿ ಒಳ್ಳೆಯ ಕಥೆ ಇದೆ ಎಂದು ಕೇಳಿದೆ. ತರಿಸಿ ಓದಿದೆ. ತಕ್ಷಣ ಈ ಚಿತ್ರವನ್ನು ಮಾಡಬೇಕು ಎಂದನಿಸಿತು.
ಇದೊಂದು ದೊಡ್ಡ ಕ್ಯಾನ್ವಾಸ್ನ ಚಿತ್ರ. ಒಂದು ಐತಿಹಾಸಿಕ ಯುದ್ಧವಿದೆ. 10 ನಿಮಿಷಗಳ ಕಾಲ ಸಾವಿರ ಜನ ಭಾಗವಹಿಸುವ ಯುದ್ಧ. ಅದನ್ನು ವಿನೋದ್ ಸಮರ್ಥವಾಗಿ ತೆರೆಯ ಮೇಲೆ ತರುತ್ತಾರೆ ಎಂಬ ನಂಬಿಕೆ ಇದೆ. ಈ ಯುದ್ಧದಲ್ಲಿ ಒಬ್ಬ ಸೂಪರ್ ಸ್ಟಾರ್ ಕಾಣಿಸಿಕೊಳ್ಳಲಿದ್ದಾರೆ. ನನ್ನ ಸಿನಿಮಾ ಜರ್ನಿಯಲ್ಲಿ 16 ಕೋಟಿ ಬಜೆಟ್ ನಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತವಿದ್ದು, ಲವಿತ್ ಅವರ ಛಾಯಾಗ್ರಾಹವಿದೆ. ವೃದ್ಧಿ ಕ್ರಿಯೇಷನ್ಸ್ ಹಾಗೂ ಸತೀಶ್ ಪಿಕ್ಚರ್ ಹೌಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ.
ಇದನ್ನೂ ಓದಿ: ಕಾಂಗ್ರೆಸ್ನ ಭಾರತ್ ಜೋಡೋ ಶತಮಾನದ ದೊಡ್ಡ ವ್ಯಂಗ್ಯ: ಬಿಜೆಪಿ ಟೀಕೆ