ಇನ್ನೆರಡು ದಿನಗಳಲ್ಲಿ ಪ್ರತಿಷ್ಟಿತ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಸಂಭ್ರಮಾಚರಣೆಯ ಸಮಯ ಸಮೀಪಿಸುತ್ತಿದ್ದಂತೆ ಆರ್‌ಆರ್‌ಆರ್ ಚಿತ್ರತಂಡ ಸರಣಿ ಸಂದರ್ಶನಗಳಲ್ಲಿ ಬ್ಯುಸಿಯಾಗಿದೆ. ವಿದೇಶಿ ಅಭಿಮಾನಿಗಳ ಪ್ರೀತಿಗೆ ಭಾರತೀಯ ಸೆಲೆಬ್ರಿಟಿಗಳು ಪಾತ್ರರಾಗಿದ್ದಾರೆ.
ಆಸ್ಕರ್ ಸಮಾರಂಭದಲ್ಲಿ ಪಾಲ್ಗೊಳ್ಳಲು ಇತ್ತೀಚೆಗಷ್ಟೇ ಅಮೆರಿಕ ತಲುಪಿರುವ ನಟ ಜೂನಿಯರ್ ಎನ್‌ಟಿಆರ್ ಅಲ್ಲಿನ ಅಭಿಮಾನಿಗಳೊಂದಿಗೆ ಗುರುತಿಸಿಕೊಂಡಿದ್ದಾರೆ. ರಾಮ್ ಚರಣ್ ಬಳಿಕ ಇವರೂ ಕೂಡ ಸಂದರ್ಶನಗಳನ್ನು ನೀಡುತ್ತಾ ಚಿತ್ರತಂಡಕ್ಕೆ, ಅಭಿಮಾನಿಗಳಿಗೆ ಉತ್ಸಾಹ ತುಂಬುತ್ತಿದ್ದಾರೆ. ಆಸ್ಕರ್ ಸಮಾರಂಭದಲ್ಲಿ ತಮ್ಮ ಮೆಚ್ಚಿನ ನಟರು ರೆಡ್ ಕಾರ್ಪೆಟ್ ಮೇಲೆ ನಡೆಯುವ ದಿನಕ್ಕಾಗಿ ಸಿನಿ ಪ್ರೇಮಿಗಳು ಕೂಡ ಕಾಯುತ್ತಿದ್ದಾರೆ. ಇತ್ತೀಚೆಗಷ್ಟೇ ವಿದೇಶಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಆರ್‌ಆರ್‌ಆರ್ ತಂಡ ಆಸ್ಕರ್ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದೆ.
ನಾಟು ನಾಟು ನೃತ್ಯ ಮಾಡಲು ಸಾಧ್ಯವಿಲ್ಲ: ಸಂದರ್ಶನದಲ್ಲಿ ಮಾತನಾಡಿರುವ ಜೂನಿಯರ್ ಎನ್‌ಟಿಆರ್, ಆಸ್ಕರ್ ರೆಡ್ ಕಾರ್ಪೆಟ್ ಮೇಲೆ ಜೂನಿಯರ್ ಎನ್‌ಟಿಆರ್ ಅಥವಾ ಕೊಮುರಂ ಭೀಮ್ ನಡೆಯುತ್ತಾರೆ ಎಂದು ನಾನು ಭಾವಿಸುವುದಿಲ್ಲ. ಹಾಗೆಯೇ ರಾಜಮೌಳಿ ಅಥವಾ ರಾಮ್ ಚರಣ್ ಎಂದು ಸಹ ನಾನು ಭಾವಿಸುವುದಿಲ್ಲ. ನಾವು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುವಾಗ ಇಡೀ ಭಾರತವನ್ನು ನಮ್ಮ ಹೃದಯದಲ್ಲಿ ಹೊತ್ತುಕೊಳ್ಳಲಿದ್ದೇವೆ. ಆ ಕ್ಷಣಕ್ಕಾಗಿ ನಾನು ಎದುರು ನೋಡುತ್ತಿದ್ದೇನೆ. ಇನ್ನೂ ಆಸ್ಕರ್ ವೇದಿಕೆಯಲ್ಲಿ ನಾಟು ನಾಟು ಹಾಡನ್ನು ಲೈವ್ ಆಗಿ ನೋಡಲು ನಾನು ಉತ್ಸುಕನಾಗಿದ್ದೇನೆ. ನಾವು ನಮ್ಮ ಆ ಹಾಡಿಗೆ ನೃತ್ಯ ಮಾಡುತ್ತೇವೆ ಎಂದು ನಾನು ಖಚಿತವಾಗಿ ಹೇಳಲಾರೆ. ರಾಮ್ ಚರಣ್ ಮತ್ತು ನನಗೆ ರಿಹರ್ಸಲ್ ಮಾಡಲು ಸಮಯದ ಅಭಾವವಿದೆ. ಹಾಗಾಗಿ ನಾವು ಆಸ್ಕರ್ ವೇದಿಕೆಯಲ್ಲಿ ನೃತ್ಯ ಮಾಡಲು ಸಾಧ್ಯವಿಲ್ಲ. ಆದ್ರೆ ಆ ಹಾಡನ್ನು ಕೇಳಿದಾಗಲೆಲ್ಲ ನನ್ನ ಕಾಲುಗಳು ನೃತ್ಯ ಮಾಡಲು ಪ್ರಾರಂಭಿಸುತ್ತದೆ ಎಂದು ತಿಳಿಸಿದರು.
ಜೆ.ಜೆ ಅಬ್ರಾಮ್ಸ್ ಜೊತೆ ರಾಮ್ಚರಣ್: ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಹಿನ್ನೆಲೆಯಲ್ಲಿ ಅಮೆರಿಕ ಪ್ರವಾಸದಲ್ಲಿರುವ ನಟ ರಾಮ್ ಚರಣ್ ಹಾಲಿವುಡ್ನ ಖ್ಯಾತ ಚಿತ್ರ ನಿರ್ದೇಶಕ, ನಿರ್ಮಾಪಕ ಜೆ.ಜೆ ಅಬ್ರಾಮ್ಸ್ (JJ Abrams) ಅವರನ್ನು ಭೇಟಿ ಮಾಡಿದ್ದಾರೆ. ಈ ಭೇಟಿಗೆ ಸಂಬಂಧಿಸಿದ ಫೋಟೋಗಳನ್ನು ಟ್ವಿಟರ್ನಲ್ಲಿ ಶೇರ್ ಮಾಡಿರುವ ನಟ ರಾಮ್ ಚರಣ್ ಅವರು, ತಮ್ಮನ್ನು ಜೆ.ಜೆ ಅಬ್ರಾಮ್ಸ್ ಅವರ ದೊಡ್ಡ ಅಭಿಮಾನಿ ಎಂದು ಹೇಳಿಕೊಂಡಿದ್ದಾರೆ. ಅಬ್ರಾಮ್ಸ್ ಅವರನ್ನು ಭೇಟಿಯಾಗಿರುವುದು ಬಹಳ ಸಂತಸ ಕೊಟ್ಟಿದೆ ಎಂದು ಸಹ ತಿಳಿಸಿದರು. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸಖತ್ ಸದ್ದು ಮಾಡುತ್ತಿದೆ. ಜಾಗತಿಕ ನಟ ರಾಮ್ ಚರಣ್ ಎಂದು ಆ ಫೋಟೋಗಳು ರೀಶೇರ್ ಆಗುತ್ತಿವೆ.
ಇದನ್ನೂ ಓದಿ: 'RRR ಪ್ರಚಾರಕ್ಕಾಗಿ ಖರ್ಚಾದ ಕಾಸಿನಲ್ಲಿ 8 ಸಿನಿಮಾ ಮಾಡಬಹುದು': ತಮ್ಮಾ ರೆಡ್ಡಿ ಟೀಕೆ
ಮಾರ್ವೆಲ್ ಸ್ಟುಡಿಯೋಸ್ ಚಿತ್ರಕ್ಕೆ ರಾಜಮೌಳಿ ನಿರ್ದೇಶನ?!: ನಿರ್ದೇಶಕ ಎಸ್ಎಸ್ ರಾಜಮೌಳಿ ಅವರಿಗೆ ಮಾರ್ವೆಲ್ ಸ್ಟುಡಿಯೋಸ್ ಚಿತ್ರ ನಿರ್ದೇಶಿಸುವ ಅವಕಾಶ ಸಿಕ್ಕರೆ ಅದ್ಧೂರಿ ಪಾರ್ಟಿ ಮಾಡುವುದಾಗಿ ಸಂದರ್ಶನವೊಂದರಲ್ಲಿ ರಾಮ್ ಚರಣ್ ತಿಳಿಸಿದ್ದಾರೆ. ಹಾಲಿವುಡ್ನ ಮಾರ್ವೆಲ್ ಅಥವಾ ಸ್ಟಾರ್ ವಾರ್ಸ್ ಫ್ರಾಂಚೈಸಿಯಲ್ಲಿ ನಟಿಸಲು ಬಯಸುತ್ತೀರಾ ಎಂಬ ಪ್ರಶ್ನೆಗೆ, ಚಿತ್ರವನ್ನು ಮೆಚ್ಚುವ ಯಾವುದೇ ದೇಶದಲ್ಲಿ ನಟಿಸಲು ಸಿದ್ಧ ಎಂದು ಹೇಳಿದರು.
ಇದನ್ನೂ ಓದಿ: ಪ್ರತಿಷ್ಟಿತ ಆಸ್ಕರ್ ಸಮಾರಂಭಕ್ಕೆ ಕ್ಷಣಗಣನೆ: ಅಮೆರಿಕಕ್ಕೆ ತೆರಳಿದ ದೀಪಿಕಾ ಪಡುಕೋಣೆ