ಕನ್ನಡ ಸಿನಿಮಾಗಳು ವಿಶ್ವಮಟ್ಟದಲ್ಲಿ ಸೌಂಡ್ ಮಾಡುತ್ತಿರುವ ಬೆನ್ನಲ್ಲೇ ಚೆಂದನವನದ ತಾರೆಯರಿಗೆ, ನಿರ್ದೇಶಕರಿಗೆ ಮತ್ತು ತಂತ್ರಜ್ಞರಿಗೆ ಪರಭಾಷೆಗಳಲ್ಲಿ ಬೇಡಿಕೆ ಹೆಚ್ಚಾಗಿದೆ. ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಸಂಗೀತ ನಿರ್ದೇಶಕ ರವಿ ಬಸ್ರೂರ್ ಬಳಿಕ ಇದೀಗ ಈ ಪಟ್ಟಿಗೆ ಮತ್ತೊಬ್ಬರು ಸೇರಿಕೊಂಡಿದ್ದಾರೆ.
ವಿಕ್ಟರಿ, ಅಧ್ಯಕ್ಷ, ರನ್ನ, ಮುಕುಂದ ಮುರಾರಿ ಅಂತಹ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿ ಸೈ ಎನ್ನಿಸಿಕೊಂಡಿರುವ ಕನ್ನಡದ ಕ್ರಿಯೇಟಿವ್ ನಿರ್ದೇಶಕ ನಂದ ಕಿಶೋರ್ ಅವರು ಮಲಯಾಳಂನ ಸೂಪರ್ ಸ್ಟಾರ್ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುವ ಮೂಲಕ ತಮ್ಮ ವಿಸ್ತಾರವನ್ನು ಹೆಚ್ಚಿಸಿಕೊಂಡಿದ್ದಾರೆ.

ಹೌದು, ಕನ್ನಡದಲ್ಲಿ ಸ್ಟಾರ್ ನಟರ ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿ ಸಕ್ಸಸ್ ಕಂಡಿರುವ ನಂದ ಕಿಶೋರ್ ಈಗ ಬಹುಭಾಷಾ ಚಿತ್ರವೊಂದಕ್ಕೆ ನಿರ್ದೇಶನ ಮಾಡಲು ಸಜ್ಜಾಗಿದ್ದಾರೆ. ಈ ಚಿತ್ರದಲ್ಲಿ ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ನಟ ಮೋಹನ್ ಲಾಲ್ ನಟಿಸಲಿದ್ದಾರೆ. ಈ ಮೂಲಕ ಕನ್ನಡದ ಮತ್ತೊಬ್ಬ ನಿರ್ದೇಶಕ ನಂದ ಕಿಶೋರ್ ಪ್ಯಾನ್ ಇಂಡಿಯಾ ಸಿನಿಮಾ ಮಾಡಿದವರ ಪಟ್ಟಿಗೆ ಸೇರಲಿದ್ದಾರೆ.

ನಂದ ಕಿಶೋರ್ ತಮ್ಮ ಸಿನಿಮಾಗೆ ನಿರ್ದೇಶನ ಮಾಡುತ್ತಿರುವ ಬಗ್ಗೆ ಸ್ವತಃ ನಟ ಮೋಹನಲಾಲ್ ಟ್ವೀಟ್ ಮಾಡಿ ಹಂಚಿಕೊಂಡಿದ್ದಾರೆ. 'ನಾನು ವೃಷಭ ಚಿತ್ರಕ್ಕೆ ಸಹಿ ಹಾಕಲು ಕಾತರನಾಗಿದ್ದೇನೆ. ಇದು AVS ಸ್ಟುಡಿಯೋಸ್ ನಿರ್ಮಾಣದ ಮೊದಲ ಸಿನಿಮಾ ಆಗಿದೆ. ಈ ಚಿತ್ರವನ್ನು ನಂದ ಕಿಶೋರ್ ನಿರ್ದೇಶನ ಮಾಡುತ್ತಿದ್ದಾರೆ. ಅಭಿಷೇಕ್ ವ್ಯಾಸ್, ಪ್ರವೀಣ್ ಸಿಂಗ್ ಮತ್ತು ಶ್ಯಾಮ್ ಸುಂದರ್ ಬಂಡವಾಳ ಹೂಡುತ್ತಿದ್ದಾರೆ. ಈ ಬಹುಭಾಷಾ ಸಿನಿಮಾ ಆ್ಯಕ್ಷನ್ ಮತ್ತು ಭಾವನೆಗಳಿಂದ ತುಂಬಿದೆ. ನಿಮ್ಮೆಲ್ಲರ ಬೆಂಬಲ, ಆಶೀರ್ವಾದವನ್ನು ನಾನು ಕೋರುತ್ತೇನೆ' ಎಂದು ನಟ ಮೋಹನ್ ಲಾಲ್ ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ.

ಇದೊಂದು ಔಟ್ ಆ್ಯಂಡ್ ಔಟ್ ಕಮರ್ಷಿಯಲ್ ಎಂಟರ್‌ಟೈನರ್ ಸಿನಿಮಾವಂತೆ. ಈ ಚಿತ್ರದಲ್ಲಿ ಮೋಹನ್ ಲಾಲ್ ವಿಭಿನ್ನ ಶೇಡ್ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಇದರ ಜೊತೆಗ ಈ ಚಿತ್ರದಲ್ಲಿ ತೆಲುಗಿನ ದೊಡ್ಡ ಸ್ಟಾರ್ ಒಬ್ಬರು ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರಂತೆ. ಈ ಚಿತ್ರದ ಶೂಟಿಂಗ್ ಜುಲೈ 2023ರಲ್ಲಿ ಪ್ರಾರಂಭವಾಗಲಿದೆ.

ಹಲವು ಹಂತಗಳಲ್ಲಿ ಸಿನಿಮಾ ಶೂಟಿಂಗ್ ನಡೆಸಲು ಸಿನಿಮಾ ತಂಡ ಪ್ಲಾನ್ ಮಾಡಿಕೊಂಡಿದೆ. ಇನ್ನು, ನಿರ್ದೇಶಕ ನಂದ ಕಿಶೋರ್ ಅವರು ಶ್ರೇಯಸ್ ಮಂಜು ಮತ್ತು ರೀಷ್ಮಾ ನಾಣಯ್ಯ ಅಭಿನಯದ 'ರಾಣಾ' ಚಿತ್ರದಲ್ಲಿ ಬ್ಯುಸಿಯಾಗಿದ್ದು, ಈ ಸಿನಿಮಾ ಮುಗಿದ ಬಳಿಕ ಮಲಯಾಳಂ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡಲಿದ್ದಾರೆ ಎನ್ನಲಾಗ್ತಿದೆ.
ಇದನ್ನೂ ಓದಿ: ಕರಾವಳಿಯಲ್ಲಿ ಕಳೆಗಟ್ಟಿದ ಗಣೇಶ ಚತುರ್ಥಿ: ಗಣಪನ ಜೊತೆ ಗಮನ ಸೆಳೆದ ಪುನೀತ್ ರಾಜ್ಕುಮಾರ್ ಮೂರ್ತಿ