ಸಂದೇಶ ಸಾರುವ ಜೊತೆಗೆ ಸಿನಿ ಪ್ರೇಮಿಗಳಿಗೆ ಇಷ್ಟ ಆಗುವಂತಹ ಚಿತ್ರಗಳನ್ನು ನಿರ್ದೇಶನ ಮಾಡಿ ಯಶಸ್ಸು ಕಂಡ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್. ಕೆಲ ದಿನಗಳ ಹಿಂದೆ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನ ಮಾಡಿರೋ ಸಿನಿಮಾಗಳು ಶ್ರೀಲಂಕಾದ ಕನ್ನಡ ಚಲನಚಿತ್ರ ಉತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ ಅಂತಾ ಹೇಳಲಾಗಿತ್ತು. ಅದೇ ರೀತಿ ಶ್ರೀಲಂಕಾದ ಫಿಲ್ಮ್ ಕಾರ್ಪೋರೇಶನ್, ಅಲ್ಲಿನ ಪ್ರವಾಸೋದ್ಯಮ ಇಲಾಖೆ, ಏಷ್ಯನ್ ಮೀಡಿಯಂ ಕಲ್ಚರಲ್ ಅಸೋಸಿಯೇಶನ್ ಸಹಯೋಗದಲ್ಲಿ ಏಪ್ರಿಲ್ 27ರಿಂದ ಮೇ 4ರ ವರೆಗೆ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶಿಸಿದ ಸಿನಿಮಾಗಳನ್ನು ಪ್ರದರ್ಶಿಸಿದೆ.
ಶ್ರೀಲಂಕಾದಲ್ಲಿ ನಡೆದ ಕನ್ನಡ ಚಲನಚಿತ್ರ ಉತ್ಸವಕ್ಕೆ ಅಲ್ಲಿನ ವಾರ್ತಾ ಮತ್ತು ಸಾರಿಗೆ ಸಚಿವರಾದ ಡಾ. ಬಂದುಲ ಗುಣವರ್ಧನೆ ಚಾಲನೆ ನೀಡಿ, ಕನ್ನಡ ಸಿನಿಮಾಗಳ ಗುಣಮಟ್ಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆ ಸಂದರ್ಭದಲ್ಲಿ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಏಷ್ಯಾ ಮಾಧ್ಯಮ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷರಾದ ಉಪುಲ್ ಜಯಸಿಂಘೆ, ಶ್ರೀಲಂಕಾ ಚಲನಚಿತ್ರ ಮಂಡಳಿಯ ಅಧ್ಯಕ್ಷ ದೀಪಲ್ ಚಂದ್ರರತ್ನೆ, ವಿವೇಕಾನಂದ ಸಾಂಸ್ಕೃತಿಕ ಸಂಸ್ಥೆ ನಿರ್ದೇಶಕರಾದ ಪ್ರೊ ಅಂಕುರನ್ ದತ್ತ, ಪತ್ರಕರ್ತರಾದ ಜಿ.ಎನ್ ಮೋಹನ್, ಹೆಚ್.ಬಿ ಮದನಗೌಡ ಭಾಗವಹಿಸಿದ್ದರು.
ನಿರ್ದೇಶಕ ಹಾಗೂ ಬರಹಗಾರ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಅಮೆರಿಕ ಅಮೆರಿಕ, ಮಾತಾಡ್ ಮಾತಾಡ್ ಮಲ್ಲಿಗೆ, ಕೋಟ್ರೇಶಿ ಕನಸು, ಇಷ್ಟಕಾಮ್ಯ ಚಿತ್ರಗಳು ಅಲ್ಲಿ ಪ್ರದರ್ಶನ ಮಾಡಲಾಗಿದೆ. ಹಾಗೇ ಸಿನಿಮಾ ಕಥೆ, ನಿರೂಪಣೆ, ಚಿತ್ರಕಥೆ ರಚನೆ, ಛಾಯಾಗ್ರಹಣ, ಸಂಕಲನ ಮುಂತಾದ ವಿಷಯಗಳ ಬಗ್ಗೆ ಶ್ರೀಲಂಕಾದ ಸಿನಿಮಾಸಕ್ತ ವಿದ್ಯಾರ್ಥಿಗಳೊಂದಿಗೆ ನಾಗತಿಹಳ್ಳಿ ಚಂದ್ರಶೇಖರ್ ಸಂವಾದ ನಡೆಸಿದ್ದಾರೆ. ಅಷ್ಟೇ ಅಲ್ಲ ಶ್ರೀಲಂಕಾದ ಸಿನಿ ಪ್ರೇಮಿಗಳು ಕನ್ನಡ ಚಿತ್ರಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸಲ್ಮಾನ್-ಶಾರುಖ್ನ ಆ ಒಂದು ಸೀನ್ಗೆ 35 ಕೋಟಿಯ ಸೆಟ್ ನಿರ್ಮಾಣ.. ಹಾಗಾದ್ರೆ ನಟರ ಸಂಭಾವನೆ?
ಆ ಪೈಕಿ ಅಮೆರಿಕ ಅಮೆರಿಕ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮೈಲಿಗಲ್ಲು ಸಾಧಿಸಿರೋ ಚಿತ್ರ. ಈ ಸಿನಿಮಾ ಬಿಡುಗಡೆಯಾಗಿ ಬರೋಬ್ಬರಿ 25 ವರ್ಷ ಕಳೆದಿದೆ. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶಿಸಿದ್ದ ಹಾಗೂ ರಮೇಶ್ ಅರವಿಂದ್, ಅಕ್ಷಯ್ ಆನಂದ್, ಹೇಮಾ ಪಂಚಮುಖಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದ ಈ ಸಿನಿಮಾ ತ್ರಿಕೋನ ಪ್ರೇಮ ಕಥೆಯ ಜೊತೆಗೆ ಭಾರತ ಹಾಗೂ ಅಮೆರಿಕ ಸಂಸ್ಕೃತಿಯನ್ನು ಎತ್ತಿ ಹಿಡಿದ ಮಾಸ್ಟರ್ ಪೀಸ್ ಚಿತ್ರ.
ಇದನ್ನೂ ಓದಿ: ರೊಮ್ಯಾಂಟಿಕ್ ಮೂಡ್ನಲ್ಲಿ ಸಮಂತಾ - ವಿಜಯ್ ದೇವರಕೊಂಡ
ನಾಗತಿಹಳ್ಳಿ ಚಂದ್ರಶೇಖರ್ ಅವರ ಬತ್ತಳಿಕೆಯಿಂದ ಬಂದ ಅಮೆರಿಕ..ಅಮೆರಿಕ ಸಿನಿಮಾ ಬಿಡುಗಡೆಯಾಗಿ 25 ವರ್ಷ ಕಳೆದರೂ ಇಂದಿಗೂ ಕೋಟ್ಯಂತರ ಸಿನಿಮಾ ಪ್ರಿಯರ ಅಚ್ಚುಮೆಚ್ಚಿನ ಚಿತ್ರವಾಗಿದೆ. 1997ರಲ್ಲಿ ರಿಲೀಸ್ ಆಗಿದ್ದ ಈ ಚಿತ್ರವನ್ನು ಆ ಕಾಲದಲ್ಲೇ ನಿರ್ಮಾಪಕ ನಂದಕುಮಾರ್ ಬರೋಬ್ಬರಿ 70 ರಿಂದ 75 ಲಕ್ಷ ರೂಪಾಯಿಯಲ್ಲಿ ನಿರ್ಮಾಣ ಮಾಡಿದ್ದರು. ಅವಾಗಲೇ 5 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ, ಹಲವು ಚಿತ್ರಮಂದಿರಗಳಲ್ಲಿ ಒಂದು ವರ್ಷಗಳ ಕಾಲ ಪ್ರದರ್ಶನ ಕಂಡಿತ್ತು. ಇದೀಗ ಶ್ರೀಲಂಕಾದಲ್ಲೂ ಈ ಚಿತ್ರ ಪ್ರದರ್ಶನಗೊಂಡಿರುವುದು ಕನ್ನಡ ಸಿನಿಮಾಗಳ ಘನತೆ ಹೆಚ್ಚಿಸಿದೆ. ಸ್ಯಾಂಡಲ್ವುಡ್ ಕ್ವಾಲಿಟಿ ಕಥೆ ಹಾಗು ಮೇಕಿಂಗ್ ಬಗ್ಗೆ ಹೊರ ರಾಜ್ಯ ಹಾಗು ದೇಶಗಳಲ್ಲಿ ಚರ್ಚೆ ನಡೆಯುತ್ತಿರುವುದು ಹೆಮ್ಮಯ ವಿಚಾರ.