ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಸಂದೇಶ ಸಾರುವ ಸಿನಿಮಾಗಳ ಜೊತೆಗೆ ಸಿನಿ ಪ್ರೇಮಿಗಳಿಗೆ ಇಷ್ಟ ಆಗುವ ಚಿತ್ರಗಳನ್ನು ನಿರ್ದೇಶನ ಮಾಡಿ ತನ್ನದೇ ಬೇಡಿಕೆ ಹೊಂದಿರುವ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್. ಸದ್ಯ ಟೆಂಟ್ ಸಿನಿಮಾ ಮೂಲಕ ಹೊಸ ಪ್ರತಿಭೆಗಳಿಗೆ ಅಭಿನಯದ ತರಬೇತಿ ನೀಡುತ್ತಿರುವ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನ ಮಾಡಿರೋ ಚಿತ್ರಗಳಿಗೆ ಅಂತಾರಾಷ್ಟ್ರೀಯ ಮನ್ನಣೆ ಸಿಗುತ್ತಿದೆ.
ಇದೀಗ ಶ್ರೀಲಂಕಾದ ಫಿಲಂ ಕಾರ್ಪೋರೇಶನ್, ಅಲ್ಲಿನ ಪ್ರವಾಸೋದ್ಯಮ ಇಲಾಖೆ, ಏಷ್ಯನ್ ಮೀಡಿಯಂ ಕಲ್ಚರಲ್ ಅಸೋಸಿಯೇಶನ್ ಮತ್ತು ಶ್ರೀಲಂಕಾದ ಭಾರತೀಯ ರಾಯಭಾರಿ ಕಚೇರಿ ಇವುಗಳ ಸಹಯೋಗದಲ್ಲಿ ಏಪ್ರಿಲ್ 27 ರಿಂದ ಮೇ 3 ರವರೆಗೆ ಶ್ರೀಲಂಕಾದಲ್ಲಿ ಅದ್ದೂರಿಯಾದ ನಾಗತಿಹಳ್ಳಿ ಚಂದ್ರಶೇಖರ್ ಚಲನಚಿತ್ರೋತ್ಸವ, ಚಲನಚಿತ್ರ ಕಾರ್ಯಾಗಾರ ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಲಿವೆ.
ನಿರ್ದೇಶಕ ಹಾಗೂ ಬರಹಗಾರ ನಾಗತಿಹಳ್ಳಿ ಚಂದ್ರಶೇಖರ್ ಅವರ ಪ್ರಶಸ್ತಿ ಪುರಸ್ಕೃತ ಹಾಗೂ ಮಹತ್ವದ ಚಿತ್ರಗಳಾದ ಅಮೆರಿಕ ಅಮೆರಿಕ, ಮಾತಾಡ್ ಮಾತಾಡ್ ಮಲ್ಲಿಗೆ, ಕೋಟ್ರೇಶಿ ಕನಸು, ಇಷ್ಟಕಾಮ್ಯ ಚಿತ್ರಗಳು ಅಲ್ಲಿ ಪ್ರದರ್ಶನಗೊಳ್ಳಲಿವೆ. ಕಥಾ ನಿರೂಪಣೆ, ಚಿತ್ರಕಥೆ ರಚನೆ, ಛಾಯಾಗ್ರಹಣ, ಸಂಕಲನ ಮುಂತಾದ ವಿಷಯಗಳ ಬಗ್ಗೆ ಶ್ರೀಲಂಕಾದ ಸಿನಿಮಾಸಕ್ತ ವಿದ್ಯಾರ್ಥಿಗಳೊಂದಿಗೆ ಕಾರ್ಯಾಗಾರವನ್ನು ನಾಗತಿಹಳ್ಳಿ ಚಂದ್ರಶೇಖರ್ ಅವರು ನಡೆಸಿಕೊಡಲಿದ್ದಾರೆ.
ಈ ಚಿತ್ರೋತ್ಸವದಲ್ಲಿ ನಾಗತಿಹಳ್ಳಿ ಅವರೊಟ್ಟಿಗೆ ನಟ ನಿರೂಪ್ ಭಂಡಾರಿ, ನಟಿ ಕಾವ್ಯಾ ಶೆಟ್ಟಿ, ಛಾಯಾಗ್ರಾಹಕ ಎಸ್. ಕೆ. ರಾವ್, ನಿರ್ಮಾಪಕ ವೈ.ಎನ್ ಶಂಕರೇಗೌಡ ಮತ್ತು ಮಾಧ್ಯಮ ಕ್ಷೇತ್ರದ ಮದನ್‌ಗೌಡ, ಜಿ.ಎನ್ ಮೋಹನ್ ಭಾಗವಹಿಸಲಿದ್ದಾರೆ. ಈ ಮುಖಾಂತರ ಕನ್ನಡ ಚಿತ್ರಗಳು ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿರೋದು ಗಮನಾರ್ಹ.
ಇದನ್ನೂ ಓದಿ: ಆಸ್ಕರ್ 2024 ಪ್ರಶಸ್ತಿ ಸಮಾರಂಭಕ್ಕೆ ಮುಹೂರ್ತ ನಿಗದಿ: ಪ್ರಮುಖ ದಿನಾಂಕಗಳ ಪಟ್ಟಿ ಹೀಗಿದೆ..
ಅಮೆರಿಕ..ಅಮೆರಿಕ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮೈಲಿಗಲ್ಲು ಸಾಧಿಸಿರೋ ಚಿತ್ರ. ಈ ಸಿನಿಮಾ ಬಿಡುಗಡೆಯಾಗಿ ಬರೋಬ್ಬರಿ 25 ವರ್ಷ ಕಳೆದಿದೆ. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶಿಸಿದ್ದ ಹಾಗೂ ರಮೇಶ್ ಅರವಿಂದ್, ಅಕ್ಷಯ್ ಆನಂದ್, ಹೇಮಾ ಪಂಚಮುಖಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ ತ್ರಿಕೋನ ಪ್ರೇಮ ಕಥೆಯ ಜೊತೆಗೆ ಭಾರತ ಹಾಗೂ ಅಮೆರಿಕ ಸಂಸ್ಕೃತಿಯನ್ನು ಎತ್ತಿ ಹಿಡಿದ ಎವರ್ಗ್ರೀನ್ ಸಿನಿಮಾ ಇದು.
ನಾಗತಿಹಳ್ಳಿ ಚಂದ್ರಶೇಖರ್ ಅವರ ಬತ್ತಳಿಕೆಯಿಂದ ಬಂದ ಅಮೆರಿಕ.. ಅಮೆರಿಕ ಸಿನಿಮಾ ಬಿಡುಗಡೆಯಾಗಿ ಕಾಲು ಶತಮಾನ ಕಳೆದರೂ ಇಂದಿಗೂ ಕೋಟ್ಯಂತರ ಸಿನಿಮಾ ಪ್ರಿಯರ ಅಚ್ಚುಮೆಚ್ಚಿನ ಚಿತ್ರವಾಗಿದೆ. 1997ರಲ್ಲಿ ರಿಲೀಸ್ ಆಗಿದ್ದ ಈ ಚಿತ್ರ ಆ ಕಾಲದಲ್ಲಿ ನಿರ್ಮಾಪಕ ನಂದಕುಮಾರ್ ಬರೋಬ್ಬರಿ 70 ರಿಂದ 75 ಲಕ್ಷ ರೂಪಾಯಿಯಲ್ಲಿ ನಿರ್ಮಾಣ ಮಾಡಿದ್ದರು.
ಅವಾಗಲೇ 5 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ, ಹಲವು ಚಿತ್ರಮಂದಿರಗಳಲ್ಲಿ ಒಂದು ವರ್ಷಗಳ ಪ್ರದರ್ಶನ ಕಂಡಿತ್ತು. ಇದೀಗ ಶ್ರೀಲಂಕಾದಲ್ಲೂ ಈ ಚಿತ್ರ ಪ್ರದರ್ಶನ ಕಾಣಲಿದೆ. ಇದು ಇಡೀ ಕನ್ನಡ ಚಿತ್ರರಂಗಕ್ಕೆ ಹೆಮ್ಮೆಯ ವಿಚಾರವಾಗಿದೆ.
ಇದನ್ನೂ ಓದಿ: "ಬನ್- ಟೀ" ಟ್ರೈಲರ್ ಬಿಡುಗಡೆ ಮಾಡಿದ ನಾಗತಿಹಳ್ಳಿ ಚಂದ್ರಶೇಖರ್; ಹೊಸ ಪ್ರತಿಭೆಗಳ ಪ್ರಯತ್ನಕ್ಕೆ ಮೆಚ್ಚುಗೆ