ದಕ್ಷಿಣ ಭಾರತದ ಜನಪ್ರಿಯ ನಟ ನಾಗ ಚೈತನ್ಯ ಮತ್ತು ನಟಿ ಕೃತಿ ಶೆಟ್ಟಿ ಅಭಿನಯದ 'ಕಸ್ಟಡಿ' ಸಿನಿಮಾ ಇಂದು ತೆರೆಕಂಡಿದೆ. ವೆಂಕಟ್ ಪ್ರಭು ನಿರ್ದೇಶನದ 'ಕಸ್ಟಡಿ' ಚಿತ್ರತಂಡ ಈಗಾಗಲೇ ಹಲವೆಡೆ ತಮ್ಮ ಸಿನಿಮಾ ಪ್ರಚಾರ ಕಾರ್ಯ ನಡೆಸಿಕೊಟ್ಟಿದೆ. ಪ್ರಚಾರದ ಭಾಗವಾಗಿ ನಾಗಚೈತನ್ಯ ಹಲವು ಸಂದರ್ಶನಗಳಲ್ಲಿ ಭಾಗವಹಿಸಿದ್ದರು. ಸಂದರ್ಶನವೊಂದರಲ್ಲಿ ಮಾಜಿ ಪತ್ನಿ, ನಟಿ ಸಮಂತಾ ರುತ್ ಪ್ರಭು ಬಗ್ಗೆ ಕೇಳಿದಾಗ, ಸಕಾರಾತ್ಮಕವಾಗಿಯೇ ಪ್ರತಿಕ್ರಿಯಿಸಿದರು.
ಸಂದರ್ಶನದಲ್ಲಿ, ನಾಗ ಚೈತನ್ಯ 'ಜೋಶ್' ನಂತರ ತಾವು ಕೆಲಸ ಮಾಡಿದ ಚಿತ್ರಗಳ ಕೋಸ್ಟಾರ್‌ಗಳಲ್ಲಿ ಅವರು ಇಷ್ಟಪಡುವ ಗುಣಗಳ ಬಗ್ಗೆ ಮಾತನಾಡಿದ್ದಾರೆ. ಇದರ ಭಾಗವಾಗಿ ಅವರು ತಮ್ಮ ಸಹನಟಿ, ಮಾಜಿ ಪತ್ನಿ ಸಮಂತಾ ಬಗ್ಗೆಯೂ ಆಸಕ್ತಿದಾಯಕ ಕಾಮೆಂಟ್ ಮಾಡಿದ್ದಾರೆ.
ಮಾಜಿ ಪತ್ನಿಯ ಗುಣಗಾನ: ಸಮಂತಾ ಕಠಿಣ ಪರಿಶ್ರಮಿ. ತಮ್ಮ ಕೆಲಸಗಳಲ್ಲಿ ತಮ್ಮನ್ನು ಶೇ.100ರಷ್ಟು ತೊಡಗಿಸಿಕೊಳ್ಳುತ್ತಾರೆ. ಯಾವುದೇ ಸಂದರ್ಭಗಳು ಎದುರಾದರೂ ದೃಢಸಂಕಲ್ಪದಿಂದ ಹೆಜ್ಜೆ ಹಾಕುತ್ತಾರೆ. ಏನನ್ನಾದರೂ ಮಾಡಲು ಬಯಸಿದರೆ, ಅದನ್ನು ಖಂಡಿತವಾಗಿ ಮಾಡುತ್ತಾರೆ. 'ಮಜಿಲಿ' ನಂತರ ಸ್ಯಾಮ್ ಅವರ 'ಫ್ಯಾಮಿಲಿಮ್ಯಾನ್' ಮತ್ತು 'ಓ ಬೇಬಿ' ಚಿತ್ರಗಳು ನನಗೆ ಇಷ್ಟವಾದವು. ಇತ್ತೀಚೆಗಷ್ಟೇ ಬಿಡುಗಡೆಯಾದ 'ಯಶೋದಾ' ಸಿನಿಮಾವನ್ನೂ ನೋಡಿದ್ದೇನೆ ಎಂದು ನಾಗ ಚೈತನ್ಯ ತಿಳಿಸಿದರು.
ನಟಿ ಪೂಜಾ ಹೆಗ್ಡೆ ಬಗ್ಗೆ ಏನಂತೀರಿ?: ನನಗೆ ಪೂಜಾ ಅವರ ಸ್ಟೈಲ್ ಇಷ್ಟ. ಅವರು ಸೆಟ್‌ಗಳಲ್ಲಿ ತುಂಬಾ ಸಕ್ರಿಯರಾಗಿರುತ್ತಾರೆ ಎಂದರು.
ನಟಿ ಕೃತಿ ಶೆಟ್ಟಿ ಅಂದ್ರೆ?: ಕೃತಿ ಅವರು ಬಹಳ ಮುಗ್ಧರು. ಅವರಿಗೆ ಅತ್ಯುತ್ತಮ ಚಿತ್ರಗಳಲ್ಲಿ ನಟಿಸುವ ಆಸೆ ಇದೆ. ಪ್ರತಿದಿನ ಸೆಟ್‌ಗೆ ಬಂದಾಗ ಪಾತ್ರ ಮತ್ತು ದೃಶ್ಯಗಳ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಾರೆ ಎಂದು ತಿಳಿಸಿದರು.
ನಟಿ ಸಾಯಿ ಪಲ್ಲವಿ ಬಗ್ಗೆ..: ಅದ್ಭುತ ನೃತ್ಯಗಾರ್ತಿ. 'ಲವ್ ಸ್ಟೋರಿ' ಸಿನಿಮಾದಲ್ಲಿ ಅವರ ಇರುವಿಕೆಯಿಂದಾಗಿ ಡ್ಯಾನ್ಸ್ ರಿಹರ್ಸಲ್ಗಾಗಿ ನಾನು ಹೆಚ್ಚು ಸಮಯ ಮೀಸಲಿಟ್ಟಿದ್ದೆ ಎಂದು ಹೇಳಿದರು.
ನಟಿ ಶ್ರುತಿ ಹಾಸನ್ ಅವರಲ್ಲಿ ಏನಿಷ್ಟ?: ಶ್ರುತಿ ಬಹುಮುಖ ಪ್ರತಿಭೆ. ನಾನು ಅವರ ಹಾಡುಗಳನ್ನು ಇಷ್ಟಪಡುತ್ತೇನೆ ಎಂದು ನಾಗಚೈತನ್ಯ ತಿಳಿಸಿದರು.
ಇದನ್ನೂ ಓದಿ: ವಿಚ್ಛೇದನಕ್ಕಿಂತಲೂ ಹೆಚ್ಚು ನೋವಾಗಿದ್ದು ನನ್ನ ಹೆಸರು ಬೇರೆಯವರೊಂದಿಗೆ ತಳುಕು ಹಾಕಿದಾಗ; ನಾಗ ಚೈತನ್ಯ
ಬಳಿಕ ಸಮಂತಾ ಅವರಿಂದ ಬೇರ್ಪಟ್ಟ ಬಗ್ಗೆ ಪ್ರತಿಕ್ರಿಯಿಸಿ, "ನಮ್ಮ ನಡುವೆ ನಡೆದಿರುವ ವಿಚಾರಗಳು ದುರದೃಷ್ಟಕರ. ನಾವು ಬೇರ್ಪಟ್ಟಾಗ ಹಲವು ವದಂತಿಗಳು ಹಬ್ಬಿದ್ದವು. ಕೆಲವರು ಗಾಸಿಪ್ ಸೃಷ್ಟಿಸಿ ಸುದ್ದಿ ಬರೆದರು. ಅವನ್ನು ನೋಡಿ ನನಗೆ ತುಂಬಾ ಮುಜುಗರವಾಯಿತು. ನಮ್ಮ ಬಗ್ಗೆ ಏಕೆ ಇಷ್ಟೊಂದು ಸುದ್ದಿ ಸೃಷ್ಟಿಸುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಟಿಆರ್‌ಪಿಗಾಗಿ ಕೆಲ ಚಾನೆಲ್‌ಗಳು ಏಕೆ ಹೀಗೆ ಮಾಡುತ್ತಿವೆ? ಇದೆಲ್ಲ ಅನಗತ್ಯ ಎನಿಸಿತು. ದಿನಗಳು ಕಳೆದಂತೆ, ನಾನು ಆ ಬಗ್ಗೆ ಗಮನ ಹರಿಸುವುದನ್ನು ನಿಲ್ಲಿಸಿದೆ. ನಾನು ಚಿತ್ರರಂಗಕ್ಕೆ ಕಾಲಿಟ್ಟಿದ್ದು ನನ್ನ ವೃತ್ತಿಪರ ಬದುಕಿನೊಂದಿಗೆ ಪ್ರೇಕ್ಷಕರನ್ನು ರಂಜಿಸಲು ಹೊರತು ವೈಯಕ್ತಿಕ ಬದುಕಿನ ವಿಚಾರವಾಗಿ ಮನರಂಜನೆ ನೀಡಲು ಅಲ್ಲ. ಹಾಗಾಗಿ ವೃತ್ತಿಜೀವನದತ್ತ ಹೆಚ್ಚು ಗಮನಹರಿಸಿ ಮುನ್ನಡೆಯುತ್ತಿದ್ದೇನೆ" ಎಂದರು.
ಇದನ್ನೂ ಓದಿ: 'ಸಮಂತಾ ಹೃದಯವಂತಳು, ಯಾವಾಗಲೂ ಸಂತೋಷವಾಗಿರಬೇಕು': ಮಾಜಿ ಪತ್ನಿ ಕೊಂಡಾಡಿದ ನಾಗ ಚೈತನ್ಯ