ಹೈದರಾಬಾದ್: 2022ರಲ್ಲಿ ತೆರೆಕಂಡು ಭಾರಿ ಜನಮೆಚ್ಚುಗೆ ಗಳಿಸಿದ್ದ ಆರ್‌ಆರ್‌ಆರ್ ಚಿತ್ರದ 'ನಾಟು ನಾಟು' ಹಾಡು 2023 ರ ಗೋಲ್ಡನ್ ಗ್ಲೋಬ್‌ನಲ್ಲಿ ಅತ್ಯುತ್ತಮ ಮೂಲ ಗೀತೆ ಪ್ರಶಸ್ತಿಯನ್ನು ಪಡೆದುಕೊಂಡಿದ್ದು, ಈ ಹಾಡಿನ ರಚನೆಕಾರ ಚಂದ್ರಬೋಸ್ ಅವರು ಇಡೀ ಚಿತ್ರತಂಡಕ್ಕೆ ಮತ್ತು ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೇ, ಈ ಹಾಡು ಬರೆಯಲು ಎಷ್ಟು ಸಮಯ ತೆಗೆದುಕೊಂಡರು ಎನ್ನುವ ಮಾಹಿತಿಯನ್ನೂ ಹಂಚಿಕೊಂಡರು.
ಮಾಧ್ಯಮಗಳ ಜೊತೆ ಮಾತನಾಡಿದ ಚಂದ್ರಬೋಸ್, "ಇಂದು ನಾನು ತುಂಬಾ ಸಂತೋಷವಾಗಿದ್ದೇನೆ. ಇದು ನನಗೆ ಮರೆಯಲಾಗದ ಕ್ಷಣ. ನಾಟು ನಾಟು ಹಾಡು ಗೋಲ್ಡನ್ ಗ್ಲೋಬ್ ಪ್ರಶಸ್ತಿ ಗೆದ್ದಿರುವುದು ದೊಡ್ಡ ವಿಷಯ. ಇದನ್ನು ನಾನು ನಿರೀಕ್ಷಿಸಿರಲಿಲ್ಲ. ಆರ್‌ಆರ್‌ಆರ್‌ಗಾಗಿ ಹಾಡು ಬರೆಯಲು ನನಗೆ ಅವಕಾಶ ನೀಡಿದ ನಿರ್ದೇಶಕ ಎಸ್.ಎಸ್.ರಾಜಮೌಳಿ ಮತ್ತು ಹಿರಿಯ ಸಂಗೀತ ನಿರ್ದೇಶಕ ಎಂ.ಎಂ.ಕೀರವಾಣಿ ಅವರಿಗೆ ಮೊದಲನೇಯದಾಗಿ ಧನ್ಯವಾದ ಹೇಳಲು ಬಯಸುತ್ತೇನೆ. ವಾಸ್ತವವಾಗಿ, ಈ ಹಾಡನ್ನು ರಚಿಸುವಾಗ ಬಹಳ ಸಮಯ ಹಿಡಿಯಿತು. ನಾನು ಶೇ 90 ರಷ್ಟು ಹಾಡನ್ನು ಅರ್ಧ ದಿನದಲ್ಲಿ ಬರೆದೆ. ಉಳಿದ ಶೇ 10 ರಷ್ಟು ಹಾಡು ಬರೆಯಲು 1 ವರ್ಷ 7 ತಿಂಗಳು ಬೇಕಾಯಿತು(19 ತಿಂಗಳು). ನನ್ನ ಪ್ರಯತ್ನ, ಕಠಿಣ ಪರಿಶ್ರಮ, ತಾಳ್ಮೆಗೆ ಕೊನೆಗೂ ಫಲ ಸಿಕ್ಕಿದೆ" ಎಂದು ಸಂತಸ ಹಂಚಿಕೊಂಡರು.
ಉಕ್ರೇನ್‌ನಲ್ಲಿ ಆರ್‌ಆರ್‌ಆರ್ ಚಿತ್ರೀಕರಣ: ಹಿರಿಯ ಸಂಗೀತ ನಿರ್ದೇಶಕ ಎಂ.ಎಂ.ಕೀರವಾಣಿ ಸಂಯೋಜಿಸಿದ ಹಾಡು ಇದಾಗಿದೆ. ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಅಭಿನಯದ 'ಆರ್‌ಆರ್‌ಆರ್' ಸಿನಿಮಾ ಬಿಡುಗಡೆಯಾದಾಗಿನಿಂದ ಹಾಡು ಸೂಪರ್‌ಹಿಟ್ ಆಗಿತ್ತು. ಉಕ್ರೇನ್‌ನಲ್ಲಿ 20 ದಿನಗಳ ಕಾಲ ನಾಟು ನಾಟು ಚಿತ್ರೀಕರಣ ನಡೆದಿತ್ತು. ಹಾಡಿನ ಫೈನಲ್ ಕಟ್ ಅನ್ನು ಅನುಮೋದಿಸುವ ಮೊದಲು 43 ರೀ ಟೇಕ್‌ಗಳನ್ನು ತೆಗೆದುಕೊಳ್ಳಲಾಗಿತ್ತು ಎಂದು ಚಿತ್ರತಂಡ ಹೇಳಿದೆ.
ಇದನ್ನೂ ಓದಿ: ಆರ್‌ಆರ್‌ಆರ್ ಚಿತ್ರದ 'ನಾಟು ನಾಟು' ಹಾಡಿಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ!
'ನಾಟು ನಾಟು' ಹಾಡನ್ನು ಗಾಯಕರಾದ ಸಿಪ್ಲಿಗುಂಜ್ ಮತ್ತು ಭೈರವ ಹಾಡಿದ್ದಾರೆ. ಪ್ರೇಮ್ ರಕ್ಷಿತ್ ನೃತ್ಯ ಸಂಯೋಜನೆ ಮಾಡಿದ್ದರು. ಹಿಂದಿಯಲ್ಲಿ 'ನಾಚೋ ನಾಚೋ', ತಮಿಳಿನಲ್ಲಿ 'ನಾಟ್ಟು ಕೂತು', ಕನ್ನಡದಲ್ಲಿ 'ಹಳ್ಳಿ ನಾಟು' ಮತ್ತು ಮಲಯಾಳಂನಲ್ಲಿ 'ಕಾರಿಂತೋಲ್' ಎಂಬ ಹೆಸರಿನಲ್ಲಿ ಹಾಡು ಬಿಡುಗಡೆಯಾಗಿತ್ತು. ಇದರ ಹಿಂದಿ ಆವೃತ್ತಿಯನ್ನು ರಾಹುಲ್ ಸಿಪ್ಲಿಗುಂಜ್ ಮತ್ತು ವಿಶಾಲ್ ಮಿಶ್ರಾ ಹಾಡಿದ್ದರು.
ಚಿತ್ರತಂಡಕ್ಕೆ ಶುಭಾಶಯಗಳ ಮಹಾಪೂರ: ಎಸ್.ಎಸ್.ರಾಜಮೌಳಿ ನಿರ್ದೇಶನದಲ್ಲಿ ಮೂಡಿಬಂದ ಸೂಪರ್ ಹಿಟ್ ಆರ್‌ಆರ್‌ಆರ್ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪಡೆದು ಭಾರತದ ಕೀರ್ತಿ ಹೆಚ್ಚಿಸಿದೆ. ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಮಂಗಳವಾರ ರಾತ್ರಿ ನಡೆದ ವರ್ಣರಂಜಿತ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಚಿತ್ರತಂಡ ಭಾಗಿಯಾಗಿತ್ತು. ಇದೀಗ ಚಿತ್ರತಂಡಕ್ಕೆ ಎಲ್ಲೆಡೆಯಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಚಿತ್ರರಂಗದ ಅನೇಕ ನಟ ನಟಿಯರು ಈಗಾಗಲೇ ಶುಭಕೋರಿದ್ದಾರೆ.
ಇದನ್ನೂ ಓದಿ: ಆರ್‌ಆರ್‌ಆರ್ ಚಿತ್ರಕ್ಕೆ ಅಂತಾರಾಷ್ಟ್ರೀಯ ಮಟ್ಟದ ಗೌರವ: ಚಿತ್ರಗಳಲ್ಲಿ ನೋಡಿ