ಲವ್ ಮಾಕ್ಟೈಲ್ ಸಿನಿಮಾಗಳ ಯಶಸ್ಸಿನ ನಂತರ ಬೇಡಿಕೆ ಹೆಚ್ಚಿಸಿಕೊಂಡಿರುವ ನಟ ಡಾರ್ಲಿಂಗ್ ಕೃಷ್ಣ. ದಿಲ್ ಪಸಂದ್ ಚಿತ್ರದ ನಂತರ ಕೃಷ್ಣ ಅಭಿನಯಿಸಿರೋ ಬಹು ನಿರೀಕ್ಷಿತ ಚಿತ್ರ 'ಮಿಸ್ಟರ್ ಬ್ಯಾಚುಲರ್'. ಸದ್ಯ ಟ್ರೈಲರ್ ಹಾಗು ಹಾಡುಗಳಿಂದ ಸ್ಯಾಂಡಲ್ವುಡ್ನಲ್ಲಿ ಸೌಂಡ್ ಮಾಡುತ್ತಿರುವ ಈ ಮಿಸ್ಟರ್ ಬ್ಯಾಚುಲರ್ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. 2023ನೇ ವರ್ಷದ ಮೊದಲ ವಾರದಲ್ಲಿ ಬಿಡುಗಡೆಗೆ ರೆಡಿಯಾಗಿರೋ ಮಿಸ್ಟರ್ ಬ್ಯಾಚುಲರ್ ಚಿತ್ರದ ಬಗ್ಗೆ ನಟ ಡಾರ್ಲಿಂಗ್ ಕೃಷ್ಣ, ನಟಿಯರಾದ ಮಿಲನ ನಾಗರಾಜ್, ನಮಿತಾ ರತ್ನಾಕರ್, ನಿರ್ದೇಶಕ ನಾಯ್ಡು ಹಾಗು ಶ್ರೀನಿವಾಸ್, ಹನುಮಂತ ರಾವ್ ಹಾಗೂ ಸ್ವರ್ಣಲತ ಅವರು ಮಾಹಿತಿ ಹಂಚಿಕೊಂಡರು.
ಈ ಚಿತ್ರದ ಮೇಲೆ ವಿಶೇಷ ಪ್ರೀತಿಯಿದೆ: ಮೊದಲಿಗೆ ಮಾತನಾಡಿದ ಡಾರ್ಲಿಂಗ್ ಕೃಷ್ಣ, ನಾನು ಮೊದಲೇ ಹೇಳಿದ ಹಾಗೆ ಈ ಚಿತ್ರದ ಮೇಲೆ ನನಗೆ ವಿಶೇಷ ಪ್ರೀತಿ ಇದೆ. ಏಕೆಂದರೆ ನಾನು ಈ ಚಿತ್ರ ಒಪ್ಪಿಕೊಂಡ ನಂತರ ನಿರ್ಮಾಪಕನಾಗಿ "ಲವ್ ಮಾಕ್ಟೇಲ್" ಚಿತ್ರ ಮಾಡಿದ್ದು. ಇನ್ನು, ಚಿತ್ರದ ಬಗ್ಗೆ ಹೇಳಬೇಕೆಂದರೆ ನಿರ್ದೇಶಕ ನಾಯ್ಡು ಒಳ್ಳೆಯ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ಅವರು ಕಥೆ ಹೇಳಲು ಬಂದಾಗಲೇ ಅವರ ಬಾಯಿಂದ ಕಥೆ ಕೇಳಿ ಸಾಕಷ್ಟು ಎಂಜಾಯ್ ಮಾಡಿದ್ದೆ. ನಾನು ಇಲ್ಲಿಯವರೆಗೆ ಯಾವ ಚಿತ್ರದಲ್ಲೂ ಹಾಕಿರದಷ್ಟು ಬಟ್ಟೆಗಳನ್ನು ಈ ಚಿತ್ರದಲ್ಲಿ ಹಾಕಿದ್ದೇನೆ. ಅದಕ್ಕೆ ನಿರ್ದೇಶಕರೇ ಕಾರಣ. ಅವರಿಗೆ ಸಾಕಷ್ಟು ಅಭಿರುಚಿಯಿದೆ. ಮಿಲನ ನಾಗರಾಜ್ ಅವರು ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ನಿಮಿಕಾ ರತ್ನಾಕರ್ ಸೇರಿದಂತೆ ಎಲ್ಲಾ ಕಲಾವಿದರ ಅಭಿನಯ ಹಾಗೂ ತಂತ್ರಜ್ಞರ ಕಾರ್ಯವೈಖರಿ ಚೆನ್ನಾಗಿದೆ ಎಂದರು.
ಡಾರ್ಲಿಂಗ್ ದಂಪತಿ ನಟನೆ: ಇನ್ನು ಲವ್ ಮಾಕ್ಟೈಲ್ ಚಿತ್ರದ ಬಳಿಕ ಮಿಲನ ನಾಗರಾಜ್ ಅವರು ಪತಿ ಕೃಷ್ಟ ಅವರ ಜೊತೆ ಮಿಸ್ಟರ್ ಬ್ಯಾಚುಲರ್ ಚಿತ್ರದಲ್ಲಿ ಸ್ಕ್ರೀನ್ ಶೇರ್ ಮಾಡಿದ್ದಾರೆ. ನಾಯ್ಡು ಅವರು ಕೂಡ ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಡಾರ್ಲಿಂಗ್ ಕೃಷ್ಣ ಜೊತೆ ರೊಮ್ಯಾನ್ಸ್ ಮಾಡಿರೋ ನಿಮಿಕಾ ರತ್ನಾಕರ್ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಇನ್ನೂ ನಿರ್ದೇಶಕ ನಾಯ್ಡು ಮಾತನಾಡಿ, ಇದು ನನ್ನ ಮೊದಲ ನಿರ್ದೇಶನದ ಚಿತ್ರ. ಡಾರ್ಲಿಂಗ್ ಕೃಷ್ಣ ಸೇರಿದಂತೆ ಎಲ್ಲಾ ಕಲಾವಿದರ ಹಾಗೂ ತಂತ್ರಜ್ಞರ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಈ ಚಿತ್ರ ಪ್ರೇಕ್ಷಕರಿಗೆ ಇಷ್ಟ ಆಗುತ್ತೆ ಅನ್ನೋ ಭರವಸೆ ಇದೆ ಅಂತಾ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಪಠಾಣ್ ಬಿಡುಗಡೆಗೆ ಆಕ್ಷೇಪ: ಚಿತ್ರದ ಪೋಸ್ಟರ್ಗಳನ್ನು ಹರಿದ ಭಜರಂಗ ದಳದ ಕಾರ್ಯಕರ್ತರು
ಈ ಚಿತ್ರವನ್ನು ಶ್ರೀನಿವಾಸ್, ಹನುಮಂತ ರಾವ್ ಹಾಗೂ ಸ್ವರ್ಣಲತ ನಿರ್ಮಾಣ ಮಾಡಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದು, ಶ್ರೀ ಕ್ರೇಜಿಮೈಂಡ್ ಈ ಚಿತ್ರದಲ್ಲಿ ಛಾಯಾಗ್ರಾಹಕರಾಗಿ ಹಾಗು ಸಂಕಲನಕಾರರಾಗಿ ಕೆಲಸ ಮಾಡಿದ್ದಾರೆ. ಕುಮಾರ್ ಈ ಚಿತ್ರವನ್ನು ವಿತರಣೆ ಮಾಡಲಿದ್ದಾರೆ. ನಿರ್ಮಾಪಕ ಹಾಗೂ ನಿರ್ದೇಶಕ ಗುರು ದೇಶಪಾಂಡೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ನಾಳೆ ರಾಜ್ಯಾದ್ಯಂತ 'ಮಿಸ್ಟರ್ ಬ್ಯಾಚುಲರ್' ಬಿಡುಗಡೆಯಾಗುತ್ತಿದ್ದು, ಡಾರ್ಲಿಂಗ್ ಕೃಷ್ಣನಿಗೆ ಈ ಸಿನಿಮಾ ದೊಡ್ಡ ಮಟ್ಟದ ಸಕ್ಸಸ್ ತಂದು ಕೊಡುತ್ತಾ ಅನ್ನೋದನ್ನು ಕಾದು ನೋಡಬೇಕು.
ಇದನ್ನೂ ಓದಿ: 'ಮಿಸ್ಟರ್ ಬ್ಯಾಚುಲರ್' ಆದ ಡಾರ್ಲಿಂಗ್ ಕೃಷ್ಣ..