'ರಾಜಾಹುಲಿ' ಅಂದಾಕ್ಷಣ ನಮಗೆಲ್ಲರಿಗೂ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಚಿತ್ರವೇ ಕಣ್ಮುಂದೆ ಬರುತ್ತದೆ. ಈ ಚಿತ್ರಕ್ಕೆ ಕೆ ಮಂಜು ಹಣ ಹೂಡಿದ್ದರು. ಗಲ್ಲಾಪೆಟ್ಟಿಗೆಯಲ್ಲಿ ಸಖತ್ ಸದ್ದು ಮಾಡಿದ್ದ 'ರಾಜಾಹುಲಿ' ಯಶ್ಗೆ ಹೆಸರು ಕೂಡ ತಂದುಕೊಟ್ಟಿತ್ತು. ಇದೀಗ 'ಮಿಸ್ಟರ್ ಆ್ಯಂಡ್ ಮಿಸಸ್ ರಾಜಾಹುಲಿ' ಟೈಟಲ್ ಇಟ್ಟುಕೊಂಡೇ ಕನ್ನಡದಲ್ಲೇ ಮತ್ತೊಂದು ಸಿನಿಮಾ ಬರುತ್ತಿದೆ.
'ರಾಜಾಹುಲಿ' ಚಿತ್ರದ ಜೊತೆ ಕೆಲಸ ಮಾಡಿದ್ದ ಹೊನ್ನರಾಜ್ ಅವರೇ 'ಮಿಸ್ಟರ್ ಆ್ಯಂಡ್ ಮಿಸಸ್ ರಾಜಾಹುಲಿ' ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವುದರೊಂದಿಗೆ ಅವರೇ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಜೊತೆಗೆ ನಾಯಕ ನಟರಾಗಿಯೂ ಬಣ್ಣ ಹಚ್ಚಿದ್ದಾರೆ. ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ತಮ್ಮ ಪ್ರಥಮ ಕಾಣಿಕೆ ಹೇಗಿದೆ ಎಂಬುದರ ಬಗ್ಗೆ ಹೊನ್ನರಾಜ್ ಅನುಭವ ಹಂಚಿಕೊಂಡಿದ್ದಾರೆ.
![Mr and Mrs Rajahuli Movie will release soon](https://etvbharatimages.akamaized.net/etvbharat/prod-images/kn-bng-03-mrmrsrajahuli-movige-support-madida-kmanju-7204735_24052023165044_2405f_1684927244_231.jpeg)
'ಸಿನಿಮಾ ಮಾಡಬೇಕು ಎನ್ನುವುದು ನನ್ನ ಬಹಳ ವರ್ಷದ ಕನಸು. ಕುಟುಂಬದಲ್ಲಿ ನಡೆದ ನೈಜ ಘಟನೆ ಆಧರಿಸಿ ಈ ಚಿತ್ರ ಸಿದ್ಧಪಡಿಸಲಾಗಿದೆ. ಶೀರ್ಷಿಕೆಗೆ ನ್ಯಾಯ ಒದಗಿಸಿದ್ದು, ಒಳ್ಳೆಯ ಚಿತ್ರ ನೀಡಲಿದ್ದೇವೆ. ಯಾವುದೇ ತೊಂದರೆ ಇಲ್ಲದೆ ಚಿತ್ರೀಕರಣ ಪೂರ್ಣಗೊಂಡಿದೆ. ಫ್ಯಾಮಿಲಿ ಎಂಟರ್ಟೈನ್ಮೆಂಟ್ ಚಿತ್ರ ಇದಾಗಿದ್ದು, ಇದರಲ್ಲಿ ನಾಯಕ ಯಶ್ ಅಭಿಮಾನಿ, ಸ್ನೇಹಕ್ಕೆ ಹೆಚ್ಚು ಬೆಲೆ ಕೊಡುವವನು, ಸಮಾಜ ಸೇವೆಯಲ್ಲಿರುವ ನಾಯಕ ಮದುವೆ ಆಗ್ತಾನೋ ಇಲ್ಲವೋ ಎನ್ನುವುದೇ ಚಿತ್ರದ ತಿರುಳು. ಈಗಾಗಲೇ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ ಎಂದರು.
ಈ ಚಿತ್ರದ ಶೂಟಿಂಗ್ಅನ್ನು ಮದ್ದೂರು, ಹುಳಿಯಾರು, ಚಿಕ್ಕನಾಯಕನಾಹಳ್ಳಿ, ಶ್ರೀರಂಗಪಟ್ಟ ಸುತ್ತಮುತ್ತ ಮಾಡಲಾಗಿದೆ. ಹಾಡೊಂದನ್ನು 12 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಚಿತ್ರಕ್ಕೆ ಈಗಾಗಲೇ ಒಂದೂ ಕಾಲು ಕೋಟಿ ರೂಪಾಯಿ ಖರ್ಚಾಗಿದೆ. ನಿರ್ಮಾಣದಲ್ಲಿ ಇಡೀ ಕುಟುಂಬ ಸಹಕಾರ ನೀಡಿದ್ದಾರೆ ಎಂದರು.
![Mr and Mrs Rajahuli Movie will release soon](https://etvbharatimages.akamaized.net/etvbharat/prod-images/kn-bng-03-mrmrsrajahuli-movige-support-madida-kmanju-7204735_24052023165044_2405f_1684927244_616.jpeg)
ಬಳಿಕ ನಾಯಕಿ ಶೃತಿ ಬಬಿತ ಮಾತನಾಡಿ, ಎರಡು ವರ್ಷದ ನಂತರ ಮತ್ತೆ ಬಣ್ಣ ಹಚ್ಚಿದ್ದೇನೆ. ಮೊದಲು ನನ್ನ ಹೆಸರು ಶೃತಿರಾಜ್ ಅಂತಿತ್ತು. ಈಗ ಶೃತಿ ಬಬಿತಾ ಅಂತ ಇಟ್ಟುಕೊಂಡಿದ್ದೇನೆ. ಮಾಡರ್ನ್, ಬಜಾರಿ ಹುಡುಗಿ, ಹಳ್ಳಿಯಲ್ಲಿ ನಾಯಕನಿಗೆ ಬುದ್ಧಿ ಕಲಿಸುವ ಪಾತ್ರ ನನ್ನದು ಎಂದು ತಮ್ಮ ಪಾತ್ರದ ಕುರಿತು ಪರಿಚಯ ಮಾಡಿಕೊಂಡರು.
ಸಂಜಯ್ ಶ್ರೀನಿವಾಸ ಚಿತ್ರ ನಿರ್ಮಾಣದಲ್ಲಿ ಕೈಜೋಡಿಸಿದ್ದು ವಿನು ಮನಸು ಅವರ ಸಂಗೀತ, ಶಿವಪುತ್ರ ಅವರ ಛಾಯಾಗ್ರಹಣ, ಗಿರೀಶ್ ನೃತ್ಯ ನಿರ್ದೇಶಕರಾಗಿ ಕೆಲಸ ನಾಡಿದ್ದಾರೆ. ಕೊನೆಯಲ್ಲಿ ಮಾತನಾಡಿದ ಕೆ. ಮಂಜು, ಈಗ ಸಿನಿಮಾ ನೋಡಲು ಯಾರೂ ಬರುತ್ತಿಲ್ಲ. ಖರ್ಚು ಹಾಕಿ, ಸಾಲ ಮಾಡೋದು ಸರಿಯಲ್ಲ ಎಂದು ನೇರವಾಗಿ ನಿರ್ದೇಶಕ ಹೊನ್ನರಾಜ್ಗೆ ಬುದ್ಧಿವಾದ ಹೇಳಿದರು.
ಕೆಲವು ಕಾರಣಾಂತರಗಳಿಂದ ಈಗಾಗಲೇ ಸಾಕಷ್ಟು ಮಲ್ಪಿಫ್ಲೆಕ್ಸ್ಗಳು ಮುಚ್ಚುತ್ತಿವೆ. ರೆಗ್ಯೂಲರ್ ನಿರ್ಮಾಪಕರು ಯಾರೂ ಈಗ ಚಿತ್ರ ಮಾಡುತ್ತಿಲ್ಲ. ನಿಮಗೆ ಆಸೆ ಇದ್ದರೆ ಬೇರೆ ಕೆಲಸ ಮಾಡಿ, ಎಲ್ಲರ ಬಳಿ ಹಣ ಪಡೆದು ಬಳಿಕ ಅವರಿಗೆ ಕೊಡದಿದ್ದರೆ ತೊಂದರೆ ಆಗಲಿದೆ ಎಂದೂ ಸಹ ಹೇಳಿದರು. ಕಲಾವಿದರಾದ ಮೈಸೂರು ಮಂಜುಳ, ರೇಖಾದಾಸ್ ಮತ್ತಿತರರು ಈ ಚಿತ್ರದಲ್ಲಿ ನಟಿಸಿದ್ದಾರೆ. ಸದ್ಯ ಶೂಟಿಂಗ್ ಮುಗಿಸಿರುವ 'ಮಿಸ್ಟರ್ ಆ್ಯಂಡ್ ಮಿಸಸ್ ರಾಜಾಹುಲಿ' ಚಿತ್ರ ಶೀಘ್ರದಲ್ಲೇ ತೆರೆಗೆ ಬರಲಿದೆ.
ಇದನ್ನೂ ಓದಿ: ಅರ್ಥಪೂರ್ಣ ಬರ್ತಡೇ ಆಚರಿಸಿಕೊಂಡ ತುಪ್ಪದ ಬೆಡಗಿ: ರಾಗಿಣಿ ಐಪಿಎಸ್ ಬಳಿಕ ಐಎಎಸ್ ಪಾತ್ರದಲ್ಲಿ ದ್ವಿವೇದಿ