ಪಾಲ್ಘರ್: ನಟಿ ತುನಿಶಾ ಶರ್ಮಾ ಆತ್ಮಹತ್ಯೆ ಪ್ರಕರಣದಲ್ಲಿ ಸಹ ನಟ ಶೀಜಾನ್ ಖಾನ್ ಆರೋಪಿಯಾಗಿ ಗುರುತಿಸಿಕೊಂಡಿದ್ದಾರೆ. ಜಾಮೀನಿನ ಮೇಲೆ ಹೊರಗಿರುವ ಶೀಜಾನ್ ಖಾನ್ ವಿಚಾರಣೆಗೆ ಒಳಗಾಗುತ್ತಿದ್ದಾರೆ. ಮಹಾರಾಷ್ಟ್ರದ ಪಾಲ್ಘರ್ ಜಿಲ್ಲಾ ನ್ಯಾಯಾಲಯ ಕಿರುತೆರೆ ನಟ ಶೀಜಾನ್ ಖಾನ್ ಅವರಿಗೆ ಟಿವಿ ಕಾರ್ಯಕ್ರಮದ ಶೂಟಿಂಗ್‌ಗಾಗಿ ವಿದೇಶಕ್ಕೆ ತೆರಳಲು ಅನುಮತಿ ನೀಡಿದೆ. ಅವರಿಗೆ ಪ್ರಸ್ತುತ ಉದ್ಯೋಗವಿಲ್ಲ, ಕೆಲಸಕ್ಕಾಗಿ ಮತ್ತೊಂದು ದೇಶಕ್ಕೆ ಭೇಟಿ ನೀಡಬಹುದು ಎಂದು ಹೇಳಿದೆ.
ಶೀಜಾನ್ ಖಾನ್ ಜೊತೆಗೆ 'ಅಲಿ ಬಾಬಾ: ದಸ್ತಾನ್-ಇ-ಕಾಬೂಲ್' ಟಿವಿ ಶೋನಲ್ಲಿ ನಟಿಸಿದ್ದ ತುನಿಶಾ ಶರ್ಮಾ (21) ಡಿಸೆಂಬರ್‌ನಲ್ಲಿ (24, 2022) ಮುಂಬೈನ ಹೊರವಲಯದಲ್ಲಿರುವ ವಸಾಯ್ ಬಳಿಯ ಹಿಂದಿ ಧಾರಾವಾಹಿಯ ಸೆಟ್‌ನಲ್ಲಿರುವ ವಾಶ್‌ರೂಮ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಆರೋಪದ ಮೇರೆಗೆ ಸಹನಟ ಶೀಜಾನ್ ಖಾನ್ ಅವರನ್ನು ಬಂಧಿಸಲಾಗಿತ್ತು. ಜಾಮೀನಿನ ಮೇರೆಗೆ ಮಾರ್ಚ್ 5ರಂದು ಹೊರಬಂದರು. ಸುಮಾರು ಎರಡು ತಿಂಗಳ ಕಾಲ ಜನಪ್ರಿಯ ರಿಯಾಲಿಟಿ ಶೋನಲ್ಲಿ ಭಾಗವಹಿಸುವ ಸಲುವಾಗಿ ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣಿಸಲು ಶೀಜಾನ್ ಖಾನ್ (28) ಇತ್ತೀಚೆಗೆ ತಮ್ಮ ಪಾಸ್‌ಪೋರ್ಟ್ ಹಿಂತಿರುಗಿಸುವಂತೆ ನ್ಯಾಯಾಲಯದ ಮೊರೆ ಹೋಗಿದ್ದರು.
ಇದನ್ನೂ ಓದಿ: 'ಸಿನಿಮಾ ಮೂಲಕ ಟಿಪ್ಪು ಭಿನ್ನ ಮುಖ ಪರಿಚಯಿಸಲು ಚಿತ್ರತಂಡ ಸನ್ನದ್ಧ': ಪವನ್ ಶರ್ಮಾ
ವಸಾಯ್ನ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಆರ್‌ಡಿ ದೇಶಪಾಂಡೆ ವಿದೇಶಕ್ಕೆ ತೆರಳಲು ಶೀಜಾನ್ ಖಾನ್ ಅವರಿಗೆ ಅನುಮತಿ ನೀಡಿದ್ದಾರೆ. ಶೀಜಾನ್ ಖಾನ್ ಅವರ ವಕೀಲ ಶೈಲೇಂದ್ರ ಮಿಶ್ರಾ ಅವರು ಕೆಲ ದಾಖಲೆ ಸಲ್ಲಿಸಿದ್ದಾರೆ. 'ಅಲಿ ಬಾಬಾ: ದಸ್ತಾನ್-ಇ-ಕಾಬೂಲ್' ಟಿವಿ ಶೋನಲ್ಲಿ ನಾಯಕ ನಟನಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ, ಅವರನ್ನು ಬಂಧಿಸಿದ ನಂತರ ತಮ್ಮ ಯೋಜನೆಯನ್ನು ಕಳೆದುಕೊಂಡರು, ನಿರುದ್ಯೋಗಿಯಾದರು ಎಂಬ ವಿಷಯವನ್ನು ಉಲ್ಲೇಖಿಸಿದ್ದಾರೆ ಎಂದು ನ್ಯಾಯಾಧೀಶ ಆರ್‌ಡಿ ದೇಶಪಾಂಡೆ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ. ವಿದೇಶಕ್ಕೆ ಪ್ರಯಾಣಿಸುವ ಹಕ್ಕನ್ನು ನ್ಯಾಯಾಲಯವು ಪ್ರಮುಖ ಮೂಲ ಮಾನವ ಹಕ್ಕು ಎಂದು ಘೋಷಿಸಿದೆ ಎಂದು ನಟನ ಪರ ವಕೀಲರು ವಾದಿಸಿದರು.
ಇದನ್ನೂ ಓದಿ: ''ಮತ್ತೊಂದು ಕೇರಳ ಸ್ಟೋರಿ'': ಮಸೀದಿಯಲ್ಲಿ ಹಿಂದೂ ವಿವಾಹ, ವಿಡಿಯೋ ಹಂಚಿಕೊಂಡ ಸಂಗೀತ ಮಾಂತ್ರಿಕ ರೆಹಮಾನ್
ತುನಿಶಾ ಶರ್ಮಾ 2022ರ ಡಿಸೆಂಬರ್ 24 ರಂದು ಆತ್ಮಹತ್ಯೆಗೆ ಶರಣಾದರು. ತಮ್ಮ ಶೂಟಿಂಗ್ ಸೆಟ್ನಲ್ಲೇ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾದರು. 'ಅಲಿ ಬಾಬಾ: ದಸ್ತಾನ್-ಇ-ಕಾಬೂಲ್' ಸಹ ನಟ ಶೀಜಾನ್ ಖಾನ್ನನ್ನು ಪ್ರೀತಿಸುತ್ತಿದ್ದರು. ಬೇರ್ಪಟ್ಟ 15 ದಿನಗಳ ನಂತವಷ್ಟೇ ಕೊನೆಯುಸಿರೆಳೆದರು ಎಂಬ ಆರೋಪಗಳಿವೆ. ಈ ಹಿನ್ನೆಲೆ ತುನಿಶಾ ಶರ್ಮಾ ಅವರ ತಾಯಿ ಶೀಜಾನ್ ಖಾನ್ ವಿರುದ್ಧ ದೂರು ಸಲ್ಲಿಸಿದರು. ಎರಡೂ ಕುಟುಂಬಗಳಿಂದ ಆರೋಪ ಪ್ರತ್ಯಾರೋಪಗಳು ಕೇಳಿ ಬಂದಿವೆ. ನಟ ಶೀಜಾನ್ ಖಾನ್ ಸದ್ಯ ಜಾಮೀನಿನ ಮೇಲೆ ಹೊರಗಿದ್ದು, ವಿಚಾರಣೆ ನಡೆಯುತ್ತಿದೆ. ಸದ್ಯ ವಿದೇಶಕ್ಕೆ ತೆರಳಲು ಅನುಮತಿ ಪಡೆದುಕೊಂಡಿದ್ದಾರೆ.