ಶ್ರೀರಾಮ್ ರಾಘವನ್ ನಿರ್ದೇಶನದ 'ಮೇರಿ ಕ್ರಿಸ್ಮಸ್' ಜನವರಿ 12 ರಂದು ತೆರೆಗಪ್ಪಳಿಸಿತು. ಮಿಶ್ರ ಪ್ರತಿಕ್ರಿಯೆ ಗಳಿಸಿದ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸಾಧಾರಣ ಪ್ರದರ್ಶನ ಮುಂದುವರಿಸಿದೆ. ಇದೇ ಮೊದಲ ಬಾರಿ ತೆರೆ ಹಂಚಿ ಕೊಂಡಿರುವ ಕತ್ರಿನಾ ಕೈಫ್ ಮತ್ತು ವಿಜಯ್ ಸೇತುಪತಿ ಅವರ ಈ ಥ್ರಿಲ್ಲರ್ ಸಿನಿಮಾ ನಾಲ್ಕು ದಿನಗಳಲ್ಲಿ 11.38 ಕೋಟಿ ರೂ. ಗಳಿಸುವಲ್ಲಿ ಯಶಸ್ವಿ ಆಗಿದೆ.
ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಮಾಹಿತಿ ಪ್ರಕಾರ, ಕಳೆದ ದಿನ ಅಂದರೆ ಸೋಮವಾರ ಈ ಚಿತ್ರ ಸರಿಸುಮಾರು 1.65 ಕೋಟಿ ರೂ. ಸಂಪಾದನೆ ಮಾಡಿದೆ. ಹಿಂದಿ ಮತ್ತು ತಮಿಳು ಭಾಷೆಗಳಲ್ಲಿ ತೆರೆ ಕಂಡಿರುವ ಈ ಚಿತ್ರ ಮೊದಲ ದಿನ ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ 2.45 ಕೋಟಿ ರೂ. ಕಲೆಕ್ಷನ್ ಮಾಡಿತು. ಸಾಧಾರಣ ಅಂಕಿ - ಅಂಶಗಳೊಂದಿಗೆ ಬಾಕ್ಸ್ ಆಫೀಸ್ ಪ್ರಯಾಣ ಪ್ರಾರಂಭಿಸಿದ ಈ ಚಿತ್ರ ಎರಡನೇ ದಿನ - ಶನಿವಾರದಂದು 3.45 ಕೋಟಿ ರೂ.ನ ವ್ಯವಹಾರ ನಡೆಸಿತು. ಮೂರನೇ ದಿನ 3.83 ಕೋಟಿ ರೂ., ನಾಲ್ಕನೇ ದಿನ 1.65 ಕೋಟಿ ರೂ. ಸಂಪಾದಿಸೋ ಮೂಲಕ ಭಾರತೀಯ ಬಾಕ್ಸ್ ಆಫೀಸ್ನಲ್ಲಿ ಒಟ್ಟು 11.38 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
- " class="align-text-top noRightClick twitterSection" data="">
ಕ್ರಿಸ್ಮಸ್ ಹಬ್ಬ ಇಬ್ಬರು ಅಪರಿಚಿತರನ್ನು ಹೇಗೆ ಒಟ್ಟುಗೂಡಿಸುತ್ತದೆ ಎಂಬುದು ಕಥೆ. ಇಬ್ಬರು ಅಪರಿಚಿತರು ಭೇಟಿಯಾಗುತ್ತಾರೆ. ಪ್ರೇಮಾಂಕುರವಾಗುತ್ತದೆ, ಕಥಾವಸ್ತು ಹೇಗೆ ಅನಿರೀಕ್ಷಿತ ತಿರುವು ಪಡೆದುಕೊಳ್ಳುತ್ತದೆ ಅನ್ನೋದನ್ನು 'ಮೇರಿ ಕ್ರಿಸ್ಮಸ್'ನಲ್ಲಿ ಕಾಣಬಹುದು. ಶ್ರೀರಾಮ್ ರಾಘವನ್ ನಿರ್ದೇಶನದ ಈ ಥ್ರಿಲ್ಲರ್ ಮೂವಿ ಹಿಂದಿ ಮತ್ತು ತಮಿಳಿನಲ್ಲಿ ನಿರ್ಮಾಣವಾಗಿದೆ. ಎರಡೂ ಭಾಷೆಗೂ ಎರಡು ಬಾರಿ ಶೂಟಿಂಗ್ ನಡೆಸಲಾಗಿದೆ. ಹೌದು, ಹಿಂದಿ ಮತ್ತು ತಮಿಳಿನಲ್ಲಿ ವಿಭಿನ್ನ ಪೋಷಕ ಪಾತ್ರಗಳೊಂದಿಗೆ ಏಕಕಾಲದಲ್ಲಿ ಚಿತ್ರೀಕರಿಸಲಾಗಿದೆ.
ಕತ್ರಿನಾ ಕೈಫ್ ಮತ್ತು ವಿಜಯ್ ಸೇತುಪತಿ ಹೊರತುಪಡಿಸಿ, ಹಿಂದಿ ಆವೃತ್ತಿಯಲ್ಲಿ ಸಂಜಯ್ ಕಪೂರ್, ವಿನಯ್ ಪಾಠಕ್, ಪ್ರತಿಮಾ ಕಣ್ಣನ್ ಮತ್ತು ಟಿನ್ನು ಆನಂದ್ ನಟಿಸಿದ್ದಾರೆ. ತಮಿಳಿನಲ್ಲಿ, ರಾಧಿಕಾ ಶರತ್‌ಕುಮಾರ್, ಷಣ್ಮುಗರಾಜ, ಕೆವಿನ್ ಜೈ ಬಾಬು ಮತ್ತು ರಾಜೇಶ್ ವಿಲಿಯಮ್ಸ್ ಅಭಿನಯಿಸಿದ್ದಾರೆ. ರಮೇಶ್ ತೌರಾನಿ, ಸಂಜಯ್ ರೌತ್ರೇ, ಜಯ ತೌರಾನಿ ಮತ್ತು ಕೇವಲ್ ಗಾರ್ಗ್ ಸೇರಿ ಈ ಚಿತ್ರವನ್ನು ಟಿಪ್ಸ್ ಫಿಲ್ಮ್ಸ್ ಮತ್ತು ಮ್ಯಾಚ್‌ಬಾಕ್ಸ್ ಪಿಕ್ಚರ್ಸ್ ಅಡಿ ನಿರ್ಮಾಣ ಮಾಡಿದ್ದಾರೆ.
ಇದನ್ನೂ ಓದಿ: 'ಕಂಗುವ' ಪೋಸ್ಟರ್: ವಿಭಿನ್ನ ಅವತಾರಗಳಲ್ಲಿ ಸೂಪರ್ ಸ್ಟಾರ್ ಸೂರ್ಯ
ಸಂದರ್ಶನದಲ್ಲಿ ಚಿತ್ರದ ಬಗ್ಗೆ ಮಾತನಾಡಿದ್ದ ಕತ್ರಿನಾ, ತಮಿಳು ಮತ್ತು ಹಿಂದಿ ಸೇರಿ ಎರಡೂ ಭಾಷೆಗಳಲ್ಲಿ ಚಿತ್ರೀಕರಣ ಮಾಡಿದ್ದು ಎಷ್ಟು ಕಷ್ಟವಾಗಿತ್ತು ಎಂಬುದರ ಬಗ್ಗೆ ಚರ್ಚಿಸಿದ್ದರು. ಶ್ರೀರಾಮ್ ರಾಘವನ್ ಅವರೊಂದಿಗೆ ಕೆಲಸ ಮಾಡಲು ನಾನು ಬಯಸುತ್ತೇನೆ, ಅವರ ಚಿತ್ರದ ಭಾಗವಾಗಿರುವುದು ಅದ್ಭುತ ಅನುಭವ ಎಂದು ಕತ್ರಿನಾ ವರ್ಣಿಸಿದ್ದಾರೆ. ವಿಜಯ್ ಸೇತುಪತಿ ಅವರೊಂದಿಗೆ ಕೆಲಸ ಮಾಡಿದ ಅನುಭವದ ಬಗ್ಗೆ ಕೇಳಿದಾಗ, "ಅದು ಅದ್ಭುತ ಅನುಭವ. ವಿಜಯ್ ಅವರು ಅತ್ಯುತ್ತಮ ನಟ'' ಎಂದು ತಿಳಿಸಿದ್ದರು.
ಇದನ್ನೂ ಓದಿ: ಫಿಲ್ಮ್‌ಫೇರ್ ಪ್ರಶಸ್ತಿ 2024: ನಾಮನಿರ್ದೇಶನಗಳ ಪಟ್ಟಿ; 19 ವಿಭಾಗಗಳಲ್ಲಿ 'ಅನಿಮಲ್'ಗೆ ಸ್ಥಾನ