'ಚಾರ್ಲಿ 777' ಚಿತ್ರದ ಮುಖಾಂತರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಕ್ಸಸ್ ಕಂಡ ನಟ ರಕ್ಷಿತ್ ಶೆಟ್ಟಿ. ಈ ಸಿನಿಮಾದ ಯಶಸ್ಸಿನ ಬಳಿಕ ಪರಂವಾ ಸ್ಟುಡಿಯೋಸ್ ಅಡಿ ಹೊಸ ಸಿನಿಮಾ ನಿರ್ಮಾಣ ಮಾಡುತ್ತಿರುವ ವಿಚಾರ ಎಲ್ಲರಿಗೂ ಗೊತ್ತಿದೆ. ಇದೀಗ 'ಇಬ್ಬನಿ ತಬ್ಬಿದ ಇಳೆಯಲಿ' ಚಿತ್ರಕ್ಕೆ ಮಯೂರಿ ನಟರಾಜ್ ಎರಡನೇ ನಾಯಕಿಯಾಗಿ ಸೆಲೆಕ್ಟ್ ಆಗಿದ್ದಾರೆ.
ನಟ ಧನಂಜಯ್ ಅಭಿನಯದ ‘ಗುರುದೇವ್ ಹೊಯ್ಸಳ’ ಚಿತ್ರದಲ್ಲಿ ತಮ್ಮ ನಟನೆಯ ಮೂಲಕ ಗಮನ ಸೆಳೆದಿದ್ದ ಮಯೂರಿ ನಟರಾಜ್, 'ಇಬ್ಬನಿ ತಬ್ಬಿದ ಇಳೆಯಲಿ’ ಸಿನಿಮಾದಲ್ಲಿ ಸಹ ನಾಯಕಿಯಾಗಿ ಬಣ್ಣ ಹಚ್ಚಲಿದ್ದಾರೆ. ಚಂದ್ರಜಿತ್ ಬೆಳ್ಳಿಯಪ್ಪ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಸಿನಿಮಾವು ಇದೀಗ ಮುಕ್ತಾಯ ಹಂತಕ್ಕೆ ತಲುಪಿದ್ದು, ಈಗಾಗಲೇ ಚಿತ್ರೀಕರಣದಲ್ಲಿ ಮಯೂರಿ ನಟರಾಜ್ ಭಾಗಿಯಾಗಿದ್ದಾರೆ. ಮುಂದಿನ ಕೆಲವು ದಿನಗಳಲ್ಲಿ ಮಯೂರಿ ನಟನೆಯ ಭಾಗದ ಚಿತ್ರೀಕರಣ ಮುಕ್ತಾಯವಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.
ಅಂದಹಾಗೆ, ‘ಮ್ಯಾನ್ ಆಫ್ ದಿ ಮ್ಯಾಚ್’, ‘ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ’ ಮತ್ತು ‘ಗುರುದೇವ್ ಹೊಯ್ಸಳ’ ಚಿತ್ರಗಳಲ್ಲಿ ಅಭಿನಯಿಸಿದ್ದ ಮಯೂರಿ ನಟರಾಜ್, ಸಿಟಿಆರ್ ಹೋಟೆಲ್ನ ಜಾಹೀರಾತಿನಲ್ಲೂ ಕೂಡ ಕಾಣಿಸಿಕೊಂಡಿದ್ದರು. ಈಗ ‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ : ಬ್ಯಾಚುಲರ್ ಪಾರ್ಟಿ ಜೊತೆಗೆ ಇಬ್ಬನಿ ತಬ್ಬಿದ ಇಳೆಯಲಿ ಚಿತ್ರ ನಿರ್ಮಿಸುತ್ತಿರುವ ರಕ್ಷಿತ್ ಶೆಟ್ಟಿ
ಇಬ್ಬನಿ ತಬ್ಬಿದ ಇಳೆಯಲಿ ಸಿನಿಮಾದ ಕಥೆ: ಇದೊಂದು ಕಾವ್ಯಾತ್ಮಕ ಪ್ರೇಮಕಥೆಯಾಗಿದ್ದು, ಮೂರು ವಿಭಿನ್ನ ಕಾಲಘಟ್ಟದಲ್ಲಿ ನಡೆಯುವ ಚಿತ್ರವಾಗಿದೆ. ಪ್ರೀತಿ ಎಂದರೆ ಏನು?, ಹಳೆಯ ನೆನಪುಗಳಾ? ಅಥವಾ ನಾಳೆ ಜತೆಯಾಗಿರಬೇಕಾದ ಕನಸುಗಳಾ?. ಹಾಗೂ ದೂರವಾದ ನಂತರದ ಚಡಪಡಿಕೆಯಾ?, ಇದೆಲ್ಲದರ ಸಂಗಮವೇ 'ಇಬ್ಬನಿ ತಬ್ಬಿದ ಇಳೆಯಲಿ' ಸಿನಿಮಾ ಎಂದು ಚಿತ್ರ ತಂಡ ಹೇಳುತ್ತಿದೆ. ಕಾಲೇಜು ದಿನಗಳಲ್ಲಿ ಚಿಗರೊಡೆಯುವ ಪ್ರೇಮಕಥೆಯು ನಂತರದ ದಿನಗಳಲ್ಲಿ ಅಂತ್ಯವಾಗುತ್ತದೆ. ಹೀಗೆ ಒಂದು ದಶಕದ ವಿವಿಧ ಕಾಲಘಟ್ಟವನ್ನು ಈ ಸಿನಿಮಾದಲ್ಲಿ ಸೂಕ್ಷ್ಮವಾಗಿ ತೋರಿಸಲಾಗಿದೆ. ಇಲ್ಲಿ ಹಸಿರು ಎಷ್ಟು ಮುಖ್ಯವೋ, ಆಧುನಿಕ ನಗರ ದೃಶ್ಯಗಳು ಅಷ್ಟೇ ಪ್ರಮುಖ ಪಾತ್ರವಹಿಸುತ್ತದೆ. ಅಷ್ಟೇ ಅಲ್ಲದೆ, ಬೇಸಿಗೆಯ ಘಮ, ಚಳಿಗಾಲದ ಹಿತ ಮತ್ತು ಮಳೆಗಾಲದ ಮಾಧುರ್ಯವೂ ಈ ಚಿತ್ರದಲ್ಲಿ ಇರಲಿದೆ.
ಇದನ್ನೂ ಓದಿ : ಇಬ್ಬನಿ ತಬ್ಬಿದ ಇಳೆಯಲಿ.. ವಿಹಾನ್ ಗೌಡ ನಟನೆಯ ಚಿತ್ರಕ್ಕೆ ಟೈಟಲ್ ಫಿಕ್ಸ್
ಪಂಚತಂತ್ರ ಸಿನಿಮಾ ಖ್ಯಾತಿಯ ನಟ ವಿಹಾನ್ ಗೌಡ ಮತ್ತು ನಟಿ ಅಂಕಿತಾ ಅಮರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಇಬ್ಬನಿ ತಬ್ಬಿದ ಇಳೆಯಲಿಗೆ ಗಗನ್ ಬಡೇರಿಯಾ ಸಂಗೀತ ಮತ್ತು ಶ್ರೀವತ್ಸನ್ ಸೆಲ್ವರಾಜನ್ ಅವರ ಛಾಯಾಗ್ರಹಣವಿದೆ. ಪರಂವಾ ಸ್ಟುಡಿಯೋಸ್ ಅಡಿಯಲ್ಲಿ ರಕ್ಷಿತ್ ಶೆಟ್ಟಿ ನಿರ್ಮಿಸಿರೋ ಚಿತ್ರದ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ.
ಇದನ್ನೂ ಓದಿ : ಗೋವುಗಳೊಂದಿಗೆ ಜನ್ಮದಿನ ಆಚರಿಸಿಕೊಂಡ ರಿಷಬ್ ಶೆಟ್ಟಿ ಪುತ್ರ: ಮುದ್ದಾದ ವಿಡಿಯೋ ನೋಡಿ