ಸ್ಯಾಂಡಲ್ವುಡ್ನಲ್ಲಿ ಎದ್ದೇಳು ಮಂಜುನಾಥ ಹಾಗೂ ಮಠ ಚಿತ್ರಗಳ ಮೂಲಕ ತನ್ನದೇ ಛಾಪು ಮೂಡಿಸಿರೋ ನಿರ್ದೇಶಕ ಗುರು ಪ್ರಸಾದ್. ಗುರು ಪ್ರಸಾದ್ ನಿರ್ದೇಶನದಲ್ಲಿ ಮೂಡಿಬಂದ 'ಮಠ' ಸಿನಿಮಾ ಹಿಟ್ ಆಗಿದ್ದರ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಆದ್ರೆ ಅದೇ ಟೈಟಲ್ನಲ್ಲಿ ಬರೋಬ್ಬರಿ 16 ವರ್ಷಗಳ ಬಳಿಕ ಮತ್ತೊಂದು ಚಿತ್ರ ಬರುತ್ತಿದೆ. ನಿರ್ದೇಶಕ ರವೀಂದ್ರ ವೆಂಶಿ ನಿರ್ದೇಶನದಲ್ಲಿ, ಬಹು ತಾರಾಗಣ ಒಳಗೊಂಡು ನಿರ್ಮಾಣವಾಗಿರುವ 'ಮಠ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.
ಟ್ರೈಲರ್ ಸಿನಿಪ್ರಿಯರಲ್ಲಿ ಕುತೂಹಲ ಹುಟ್ಟು ಹಾಕಿದೆ. ಫಿಲಾಸಫಿಕಲ್ ಹಾಗೂ ಕಾಮಿಡಿ ಮಿಶ್ರಿತ ಕಥಾಹಂದರವುಳ್ಳ ಚಿತ್ರವಿದು. ಕರ್ನಾಟಕದಲ್ಲಿರುವ ಮಠಗಳ ಬಗ್ಗೆ ಹಾಗೂ ಅಲ್ಲಿ ನಡೆದಂತ ನೈಜ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ನಿರ್ದೇಶಕ ರವೀಂದ್ರ ವೆಂಶಿ ಚಿತ್ರಕಥೆ ಹೆಣೆದು ನಿರ್ದೇಶನ ಮಾಡಿದ್ದಾರೆ. ರವೀಂದ್ರ ವೆಂಶಿ ಪುಟಾಣಿ ಸಫಾರಿ, ವರ್ಣಮಯ, ವಾಸಂತಿ ನಲಿದಾಗ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದು, ಈ ಬಾರಿ 'ಮಠ' ಎಂಬ ಡಿಫ್ರೆಂಟ್ ಕಥಾವಸ್ತುವನ್ನು ಕೈಗೆತ್ತಿಕೊಂಡಿದ್ದಾರೆ.
ಬಹು ತಾರಾಗಣ ಒಳಗೊಂಡ ಈ ಚಿತ್ರದಲ್ಲಿ ಸಂತೋಷ್ ದಾವಣಗೆರೆ ನಾಯಕ ನಟನಾಗಿ ನಟಿಸಿದ್ದಾರೆ. ಸಾಧುಕೋಕಿಲ, ರಮೇಶ್ ಭಟ್, ತಬಲ ನಾಣಿ, ಶರತ್ ಲೋಹಿತಾಶ್ವ, ಬ್ಯಾಂಕ್ ಜನಾರ್ಧನ್, ರಾಜು ತಾಳಿಕೋಟೆ, ಮಂಡ್ಯ ರಮೇಶ್, ಗುರುಪ್ರಸಾದ್ ಬಿರಾದರ್ ಒಳಗೊಂಡ ದೊಡ್ಡ ತಾರಾಗಣವಿದೆ. ಜೀವನ್ ಗೌಡ ಛಾಯಾಗ್ರಾಹಣ, ಸಿ. ರವಿಚಂದ್ರನ್ ಸಂಕಲನ, ಶ್ರೀ ಗುರು ಸಂಗೀತ ನಿರ್ದೇಶನ ಚಿತ್ರಕ್ಕಿದೆ.
ಯೋಗರಾಜ್ ಭಟ್, ವಿ.ನಾಗೇಂದ್ರ ಪ್ರಸಾದ್, ಗೌಸ್ ಫಿರ್ ಅವರು ಚಿತ್ರದ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ವಿ.ಆರ್ ಕಂಬೈನ್ಸ್ ಬ್ಯಾನರ್ ಅಡಿ ಆರ್.ರಮೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸಾಕಷ್ಟು ಇಂಟ್ರೆಸ್ಟಿಂಗ್ ಫ್ಯಾಕ್ಟರ್ ಹೊತ್ತ 'ಮಠ' ಸಿನಿಮಾ ನವೆಂಬರ್ 18ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
ಇದನ್ನೂ ಓದಿ: ಉಂಚೈ ಸಿನಿಮಾ ಬಿಡುಗಡೆ: ಸಿದ್ದಿ ವಿನಾಯಕ ಮಂದಿರಕ್ಕೆ ಮಗನ ಜೊತೆ ಬಿಗ್ ಬಿ ಭೇಟಿ.. ವಿಶೇಷ ದರ್ಶನ!