ಮರಾಠಿ ಚಿತ್ರರಂಗದ ಹಿರಿಯ ನಟ ರವೀಂದ್ರ ಮಹಾಜನಿ (Ravindra Mahajani) ಕೊನೆಯುಸಿರೆಳೆದಿದ್ದಾರೆ. ಪುಣೆ ಜಿಲ್ಲೆಯ ಮಾವಲ್ ತಾಲೂಕಿನ ಅಂಬಿ ಗ್ರಾಮದ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರ ಬಾಡಿಗೆ ಮನೆಯ ಕೊಠಡಿಯಿಂದ ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ, ಅಕ್ಕಪಕ್ಕದವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಬಳಿಕ ಈ ಘಟನೆ ಬೆಳಕಿಗೆ ಬಂದಿದೆ.
ನಟ ಗಶ್ಮೀರ್ ಮಹಾಜನಿ (Gashmir Mahajani) ತಂದೆಯಾಗಿರುವ ನಟ ರವೀಂದ್ರ ಮಹಾಜನಿ ಅವರು ಅನಾರೋಗ್ಯ ಹಿನ್ನೆಲೆ ಚಿಕಿತ್ಸೆ ಪಡೆದಿದ್ದರು. ಆಪರೇಷನ್ ನಂತರ ಅಂಬಿ ಗ್ರಾಮದ ಬಾಡಿಗೆ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು. ಸದ್ಯ ಅವರು ವಿಧಿವಶರಾಗಿದ್ದು ಕುಟುಂಬಸ್ಥರು, ಚಿತ್ರರಂಗದವರೂ ಸೇರಿದಂತೆ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
ನಟ ರವೀಂದ್ರ ಮಹಾಜನಿ ಅವರು ಕಳೆದ 9 ತಿಂಗಳಿಂದ ಮಾವಲ್ ತಾಲೂಕಿನ ಅಂಬಿ ಗ್ರಾಮದ ಎಕ್ಸರ್ಬಿಯಾ ಸೊಸೈಟಿಯಲ್ಲಿ ಜೀವನ ಸಾಗಿಸುತ್ತಿದ್ದರು. ಕೆಲ ದಿನಗಳ ಹಿಂದೆ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಹಾಗಾಗಿ ಅವರು ಹೆಚ್ಚು ತಿರುಗಾಡಲು ಸಾಧ್ಯವಾಗುತ್ತಿರಲಿಲ್ಲ. ಸ್ನಾನ ಮಾಡಿ ಬಟ್ಟೆ ಬದಲಿಸುವ ವೇಳೆ ಸಾವನ್ನಪ್ಪಿರಬಹುದು ಎಂದು ತಾಳೆಗಾಂವ್ (Talegaon) ಎಂಐಡಿಸಿ ಪೊಲೀಸರು ಶಂಕಿಸಿದ್ದಾರೆ. ತಾಳೆಗಾಂವ್ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಬೆಳಗಾವಿಯಲ್ಲಿ ಜನನ.. 1949ರಲ್ಲಿ ರವೀಂದ್ರ ಮಹಾಜನಿ ಅವರು ಬೆಳಗಾವಿಯಲ್ಲಿ ಜನಿಸಿದ್ದರು. ಅವರ ತಂದೆ ಹೆಚ್.ಆರ್ ಮಹಾಜನಿ ಪ್ರಸಿದ್ಧ ಪತ್ರಕರ್ತರಾಗಿದ್ದರು. ಅವರು ಬೆಳಗಾವಿಯಿಂದ ಮುಂಬೈಗೆ ವಲಸೆ ಬಂದ ಕಾರಣ, ರವೀಂದ್ರ ಮಹಾಜನಿ ತಮ್ಮ ಬಾಲ್ಯವನ್ನು ಮುಂಬೈನಲ್ಲಿ ಕಳೆದರು. ರವೀಂದ್ರ ಅವರು ನಟನೆಯ ಬಗ್ಗೆ ಒಲವು ಹೊಂದಿದ್ದರಿಂದ ಶಾಲಾ ಕಾರ್ಯಕ್ರಮಗಳಲ್ಲಿ ಹಲವು ಪಾತ್ರಗಳನ್ನು ನಿರ್ವಹಿಸಿದ್ದರು. ಚಿತ್ರರಂಗಕ್ಕೆ ಪ್ರವೇಶಿಸುವ ಮೊದಲು ಮೂರು ವರ್ಷಗಳ ಕಾಲ ಮುಂಬೈನಲ್ಲಿ ಟ್ಯಾಕ್ಸಿ ಡ್ರೈವರ್ ಆಗಿ ಕೆಲಸ ಮಾಡಿದ್ದರು. ರಾತ್ರಿ ಟ್ಯಾಕ್ಸಿ ಓಡಿಸುತ್ತ, ಸಿನಿರಂಗದಲ್ಲಿ ಅವಕಾಶ ಹುಡುಕುತ್ತಿದ್ದರು. ಕೆಲಸಕ್ಕಾಗಿ ಅವರು ಪ್ರತಿದಿನ ವಿವಿಧ ನಿರ್ದೇಶಕರನ್ನು ಭೇಟಿಯಾಗುತ್ತಿದ್ದರು. ಅಂತಿಮವಾಗಿ, ಮಧುಸೂದನ್ ಕಾಲೇಲ್ಕರ್ ಅವರ ಜನತಾ ಅಜಾನತಾ ಮರಾಠಿ ನಾಟಕದಲ್ಲಿ ಕೆಲಸ ಪಡೆದರು. ನಂತರ ಅವರು ಮರಾಠಿ ಚಲನಚಿತ್ರ ಜುಂಜ್ ನಲ್ಲಿ ಕಾಣಿಸಿಕೊಂಡರು. ಈ ಜುಂಜ್ ಚಿತ್ರವು ರವೀಂದ್ರ ಅವರಿಗೆ ಮರಾಠಿ ಚಿತ್ರರಂಗದಲ್ಲಿ ಜನಪ್ರಿಯತೆ ತಂದುಕೊಟ್ಟಿತು. ಆ ನಂತರ ಅವರು ನಟರಾಗಿ, ನಿರ್ದೇಶಕರಾಗಿ ಕೆಲಸ ಮಾಡಿದರು.
ಇದನ್ನೂ ಓದಿ: ನಟ ಮಾಸ್ಟರ್ ಆನಂದ್ ಪುತ್ರಿ ಹೆಸರು ಬಳಸಿ ಮೋಸದ ಆರೋಪ: ಆರೋಪಿ ಮಹಿಳೆ ಬಂಧನ
ಈವರೆಗೆ ರವೀಂದ್ರ ಮಹಾಜನಿ ಅವರು ಅನೇಕ ಸಿನಿಮಾಗಳಲ್ಲಿ ಅದ್ಭುತ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಜುಂಜ್ ಚಿತ್ರದ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದು, ದೇವತಾ ಚಿತ್ರದ ಲಖನ್ ಪಾತ್ರ ಇಂದಿಗೂ ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದೇ ಉಳಿದಿದೆ. ಆ ನಂತರ ಮುಂಬೈಚಾ ಫೌಜ್ದಾರ್, ಲಕ್ಷ್ಮಿ, ಗೋಂಧಲಾತ್ ಗೊಂಧಾಲ್, ಹಲ್ಡಿ ಕುಂಕು ಸೇರಿ ಮುಂತಾದ ಚಿತ್ರಗಳಲ್ಲಿ ತಮ್ಮ ನಟನಾ ಕೌಶಲ್ಯವನ್ನು ಸಾಬೀತು ಪಡಿಸಿದ್ದಾರೆ.