ಮೂರೇ ದಿನದಲ್ಲಿ 300 ಕೋಟಿ ರೂ. ಗಡಿ ದಾಟಿ ಇದೀಗ ಕಳಪೆ ಪ್ರದರ್ಶನ ಕಾಣುತ್ತಿರುವ ಆದಿಪುರುಷ್ ಚಿತ್ರಕ್ಕೆ ದೇಶವಲ್ಲದೇ ಹೊರದೇಶಗಳಲ್ಲೂ ಟೀಕೆ ವ್ಯಕ್ತವಾಗುತ್ತಿದೆ. ರಾಮಾಯಣದ ಹೆಸರಿನಲ್ಲಿ 'ಆದಿಪುರುಷ್' ಸಿನಿಮಾ ಮಾಡುವ ಮೂಲಕ ಸನಾತನ ಸಂಸ್ಕೃತಿಯನ್ನು ನಾಶ ಮಾಡಿದ್ದಾರೆ ಎನ್ನುತ್ತಾರೆ ಕೆಲ ಹಿರಿಯ ಹಿರಿಯ ಕಲಾವಿದರು. ಚಿತ್ರಕ್ಕೆ ದೇಶಾದ್ಯಂತ ವಿರೋಧ ವ್ಯಕ್ತವಾಗುತ್ತಿದ್ದು, ಬ್ಯಾನ್ ಮಾಡುವಂತೆ ಪ್ರಧಾನಿಗೆ ಪತ್ರ ಕೂಡ ಹೋಗಿದೆ.
'ಹನುಮಂತ ದೇವರಲ್ಲ'.. ರಾಮ, ರಾವಣ, ಹನುಮಂತನ ನೋಟ, ಡೈಲಾಗ್ಸ್ಗೆ ಸಂಬಂಧಿಸಿದಂತೆ ಹಲವು ಪ್ರೇಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚಿತ್ರದ ನಿರ್ದೇಶಕ ಓಂ ರಾವುತ್ ಮತ್ತು ಸಂಭಾಷಣೆ ಬರೆದ ಮನೋಜ್ ಮುಂತಶಿರ್ ಶುಕ್ಲಾ ಅವರ ಮೇಲೆ ಸಿನಿಪ್ರಿಯರು ಕಿಡಿಕಾರಿದ್ದಾರೆ. ಹಲವು ವಿವಾದಗಳನ್ನು ಎದುರಿಸುತ್ತಿವುದರ ನಡುವೆಯೇ ಮನೋಜ್ ಮುಂತಶಿರ್ 'ಹನುಮಂತ ದೇವರಲ್ಲ' ಎಂದು ಹೇಳುವ ಮೂಲಕ ಭಕ್ತರನ್ನು ಕೆರಳಿಸಿದ್ದಾರೆ.
'ದೇವರಲ್ಲ, ರಾಮನ ಭಕ್ತ': ಸಂಭಾಷಣೆ ಬರಹಗಾರ ಮನೋಜ್ ಮುಂತಶಿರ್ ಶುಕ್ಲಾ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ''ಹನುಮಂತ ದೇವರಲ್ಲ, ಆದರೆ ಅವರು ಭಗವಾನ್ ಶ್ರೀರಾಮನ ಭಕ್ತರಾಗಿದ್ದರು. ನಾವು ಅವರನ್ನು ದೇವರಾಗಿ ಮಾಡಿದ್ದೇವೆ, ಅವರು ಶ್ರೀರಾಮನಂತೆ ತತ್ವಜ್ಞಾನಿ ಅಲ್ಲ' ಎಂದು ತಿಳಿಸಿದರು.
ಪೊಲೀಸ್ ಭದ್ರತೆ ನಡುವೆ ಹೇಳಿಕೆ: ಭಾರಿ ಪ್ರತಿಭಟನೆಗಳ ನಡುವೆ ಮುಂಬೈ ಪೊಲೀಸರ ರಕ್ಷಣೆಯಲ್ಲಿರುವಾಗಲೇ ಮನೋಜ್ ಮುಂತಶಿರ್ ಶುಕ್ಲಾ ಅವರು ಈ ಹೇಳಿಕೆ ನೀಡಿದ್ದಾರೆ. ತಮ್ಮ ಜೀವಕ್ಕೆ ಅಪಾಯವಿರುವುದನ್ನು ಅರಿತ ಡೈಲಾಗ್ ರೈಟರ್ ಮುಂಬೈ ಪೊಲೀಸರ ರಕ್ಷಣೆಗೆ ಒತ್ತಾಯಿಸಿದ್ದರು. ವಿಷಯದ ಗಂಭೀರತೆಯನ್ನು ಕಂಡ ಮುಂಬೈ ಪೊಲೀಸರು ಮನೋಜ್ ಅವರಿಗೆ ಭದ್ರತೆ ಒದಗಿಸಿದ್ದರು.
ಆದಿಪುರುಷ್ ಬ್ಯಾನ್ಗೆ ಒತ್ತಾಯ: ಡೈಲಾಗ್ ಒಂದರ ಸಲುವಾಗಿ ನೇಪಾಳ ಸಿನಿಮಾ ಮೇಲೆ ಆಕ್ರೋಶ ವ್ಯಕ್ತಪಡಿಸಿ, ಚಿತ್ರ ಪ್ರದರ್ಶನವನ್ನು ನಿಷೇಧಿಸಿದೆ. ಇತ್ತ ನಮ್ಮ ಭಾರತದಲ್ಲಿಯೂ ಈ ಸಿನಿಮಾ ನಿಷೇಧಿಸಬೇಕು ಎಂಬ ಬೇಡಿಕೆ ವ್ಯಕ್ತವಾಗಿದೆ. ಆಲ್ ಇಂಡಿಯನ್ ಸಿನಿ ವರ್ಕರ್ಸ್ ಅಸೋಸಿಯೇಷನ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಪತ್ರವೊಂದನ್ನು ಬರೆದಿದೆ. ಸಿನಿಮಾ ಪ್ರದರ್ಶನ ನಿಷೇಧಿಸುವಂತೆ ಮತ್ತು ಮುಂದಿನ ದಿನಗಳಲ್ಲಿ ಡಿಜಿಟಲ್ ವೇದಿಕೆಗಳಲ್ಲಿ ಬರದಂತೆ ತಡೆ ನೀಡಬೇಕು ಎಂದು ಒತ್ತಾಯಿಸಿದೆ. ರಾಮಾಯಣವನ್ನು ತಪ್ಪಾಗಿ ತೋರಿಸಲಾಗಿದೆ. ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದೆ, ಮುಂದಿನ ದಿನಗಳಲ್ಲಿ ಮಕ್ಕಳಲ್ಲಿ ರಾಮಾಯಣದ ಬಗ್ಗೆ ತಪ್ಪು ಅಭಿಪ್ರಾಯವನ್ನು ಮೂಡಿಸುತ್ತದೆ. ಹಾಗಾಗಿ ಸಿನಿಮಾ ಪ್ರದರ್ಶನವನ್ನು ನಿಲ್ಲಿಸಿ ಎಂದು ಕೇಳಿಕೊಂಡಿದೆ.
ಇದನ್ನೂ ಓದಿ: Adipurush: ಆದಿಪುರುಷ ಕಲೆಕ್ಷನ್ನಲ್ಲಿ ಇಳಿಕೆ.. ಐದನೇ ದಿನ ಪ್ರಭಾಸ್ ಸಿನಿಮಾ ಗಳಿಸಿದ್ದೆಷ್ಟು?
ಕಳೆದ ಶುಕ್ರವಾರ ತೆರೆಕಂಡಿರುವ ಈ ಚಿತ್ರವನ್ನು ಓಂ ರಾವುತ್ ನಿರ್ದೇಶಿಸಿದ್ದು, ಪ್ರಭಾಸ್ ರಾಮನ ಪಾತ್ರದಲ್ಲಿ, ಕೃತಿ ಸನೋನ್ ಸೀತೆ ಪಾತ್ರದಲ್ಲಿ, ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್, ಸನ್ನಿ ಸಿಂಗ್ ಲಕ್ಷ್ಮಣನ ಪಾತ್ರದಲ್ಲಿ, ದೇವ್ದತ್ತ ಹನುಮಂತನ ಪಾತ್ರದಲ್ಲಿ ನಟಿಸಿದ್ದಾರೆ. ಮೂರು ದಿನಗಳಲ್ಲಿ 300 ಕೋಟಿ ಗಳಿಸಿದ ಈ ಸಿನಿಮಾ ನಿನ್ನೆ ಕಲೆಕ್ಷನ್ ಮಾಡಿದ್ದು ಕೇವಲ 10.80 ಕೋಟಿ ರೂಪಾಯಿ.