ಚೆನ್ನೈ: ತಮಿಳು ಚಿತ್ರರಂಗದ ಜನಪ್ರಿಯ ಹಾಸ್ಯನಟ ಹಾಗೂ ನಿರ್ದೇಶಕ ಮನೋಬಾಲ (Manobala)ಅವರು ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು. ನಟ ಮನೋಬಾಲ ಅವರು ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಲಿವರ್ ಹಾನಿಯಾಗಿ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಕಳೆದ ಕೆಲ ದಿನಗಳಿಂದ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ದುರಾದೃಷ್ಟವಶಾತ್ ಚಿಕಿತ್ಸೆ ಫಲಿಸದೇ ಇಂದು ಇಹಲೋಕ ತ್ಯಜಿಸಿದ್ದಾರೆ. ತಮಿಳು ಚಿತ್ರರಂಗ ಶೋಕಸಾಗರದಲ್ಲಿ ಮುಳುಗಿದೆ. ಕುಟುಂಬಸ್ಥರು, ಚಿತ್ರರಂಗದವರು, ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ.
1953ರ ಡಿಸೆಂಬರ್ 8ರಂದು ತಮಿಳುನಾಡು ರಾಜ್ಯದ ಕನ್ಯಾಕುಮಾರಿಯ ಮರುಂಗೂರು ಪ್ರದೇಶದಲ್ಲಿ ಜನಿಸಿದ ಮನೋಬಾಲ ಅವರು 1979ರಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಖ್ಯಾತ ನಿರ್ದೇಶಕ ಭಾರತಿರಾಜ ಅವರ 'ಪುತಿಯ ವರ್ಪುಗಲ್' ತಮಿಳು ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು. 1982ರಲ್ಲಿ ಅಗಾಯ ಗಂಗೈ ಮೂಲಕ ಸಂಪೂರ್ಣ ನಿರ್ದೇಶಕರಾಗಿ ಹೊರಹೊಮ್ಮಿದರು. ನಿರ್ದೇಶಕರಾಗಿ ಕೆಲಸ ಮಾಡಿದ ಅವರ ಕೊನೆಯ ಚಿತ್ರ 'ನೈನಾ' (2002).
ಇದನ್ನೂ ಓದಿ: ಈ ವೀಕೆಂಡ್ ಅತಿಥಿ ಸ್ಯಾಂಡಲ್ವುಡ್ ಲವ್ಲಿ ಸ್ಟಾರ್ ನೆನಪಿರಲಿ ಪ್ರೇಮ್
ಸಿನಿಮಾ ನಿರ್ದೇಶನ ಮಾಡುತ್ತಲೇ ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ನಟನಾಗಿ ಸುಮಾರು 180 ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಾಸ್ಯನಟನಾಗಿ ಸಾಕಷ್ಟು ಜನಪ್ರಿಯತೆ ಸಂಪಾದಿಸಿದ್ದಾರೆ. ಇದಲ್ಲದೇ ಧಾರಾವಾಹಿಗಳಲ್ಲಿ ನಟಿಸಿ ಕಿರುತೆರೆ ಪ್ರೇಕ್ಷಕರ ಮನಗೆದ್ದಿದ್ದಾರೆ. ಇತ್ತೀಚೆಗೆ ವಾಲ್ತೇರು ವೀರಯ್ಯ ಸಿನಿಮಾದಲ್ಲಿ ಜಡ್ಜ್ ಪಾತ್ರದಲ್ಲಿ ಕಾಣಿಸಿಕೊಂಡು ಜನರನ್ನು ನಗೆಗಡಲಲ್ಲಿ ತೇಲಿಸಿದ್ದರು. ನಟ ಮತ್ತು ನಿರ್ದೇಶಕನಾಗಿ ಮನರಂಜನಾ ಕ್ಷೇತ್ರಕ್ಕೆ ಇವರ ಕೊಡುಗೆ ಅಪಾರ. ಸದ್ಯ ಚಿತ್ರರಂಗದವರೂ ಸೇರಿದಂತೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸುತ್ತಿದ್ದಾರೆ.
ಇದನ್ನೂ ಓದಿ: ಸಂಗೀತ ಕಾರ್ಯಕ್ರಮಕ್ಕೆ ತಡೆ: ಎ.ಆರ್ ರೆಹಮಾನ್ ಪ್ರತಿಕ್ರಿಯೆ ಹೀಗಿದೆ
ಆಗಾಯ ಗಂಗೈ ಚಿತ್ರದ ಮೂಲಕ ಸಂಪೂರ್ಣ ಪ್ರಮಾಣದ ನಿರ್ದೇಶಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅವರು ಉರ್ಕಾವಲನ್, ಪಿಳ್ಳೈ ನಿಲ, ಜೈಲಪರವೈ ಸೇರಿದಂತೆ 40ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಧನುಷ್ ಅಭಿನಯದ ಮಾಪಿಳ್ಳೈ, ಕಾಕಿಚಟ್ಟೈ ಸೇರಿದಂತೆ ಮುಂತಾದ ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಅಭಿಮಾನಿಗಳ ಮನದಲ್ಲಿ ನೆಲೆಯೂರಿದ್ದರು. ಇವರ ನಟನೆ, ನಿರ್ದೇಶನಕ್ಕೆ ಜನರು ಫುಲ್ ಮಾರ್ಕ್ಸ್ ಕೊಟ್ಟಿದ್ದರು.